ಧರ್ಮಸ್ಥಳ: ಗುರು – ಶಿಷ್ಯರ ಸಂಬಂಧ ಆತ್ಮೀಯವಾಗಿರಬೇಕು – ಸಾಹಿತಿ ಸಂಪಟೂರು ವಿಶ್ವನಾಥ್

ಧರ್ಮಸ್ಥಳ: ಗುರು-ಶಿಷ್ಯರ ಸಂಬಂಧ ದೇಶ, ಭಾಷೆ, ಜಾತಿ, ಮತವನ್ನು ಮೀರಿದ್ದು, ಒಳ್ಳೆಯ ಗುರುಗಳು ಸಿಗಬೇಕಾದರೂ ಪುಣ್ಯ ಮಾಡಿರಬೇಕು. ಒಳ್ಳೆಯ ಶಿಷ್ಯರು ದೊರಕಬೇಕಾದರೂ ಪುಣ್ಯ ಮಾಡಬೇಕು. ಗುರ-ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾಗಿದ್ದು ಆತ್ಮೀಯವಾಗಿದ್ದಾಗ ಕಲಿಕೆ ಪರಿಣಾಮಕಾರಿಯಾಗಿದ್ದು, ಸಂತಸದಾಯಕವಾಗುತ್ತದೆ ಎಂದು ಬೆಂಗಳೂರಿನ ಹಿರಿಯ ಸಾಹಿತಿ ಸಂಪಟೂರು ವಿಶ್ವನಾಥ್ ಹೇಳಿದರು.
ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಧರ್ಮಸ್ಥಳದಲ್ಲಿ ಸೋಮವಾರ ಏರ್ಪಡಿಸಿದ ನೈತಿಕ ಮೌಲ್ಯಧಾರಿತ ಪುಸ್ತಕಗಳನ್ನಾಧರಿಸಿದ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅತಿ ಬುದ್ಧಿವಂತರ ಜಿಲ್ಲೆಯಾಗಿದ್ದು, ಧರ್ಮಸ್ಥಳದಲ್ಲಿ ವಿಶೇಷ ಸ್ಥಳ ಮಹಾತ್ಮೆ ಇದೆ. ಇಲ್ಲಿ ಅನ್ನದಾನದ ಜೊತೆಗೆ ದೊರಕುವ ಜ್ಞಾನ, ಭಕ್ತಿ, ಧರ್ಮ ಹಾಗೂ ಧ್ಯಾನದ ಫಲದಿಂದಾಗಿ ನಮ್ಮ ಜೀವನ ಪಾವನವಾಗುತ್ತದೆ.
ಸಾಹಿತ್ಯ ಮನುಷ್ಯರ ನಡುವೆ ಮಾನವೀಯ ಸಂಬಂಧ ಬೆಳೆಸುವ ಮಾಧ್ಯಮವಾಗಿದ್ದು, ವಿದ್ಯಾರ್ಥಿಗಳು ಓದಿದ ವಿಚಾರವನ್ನು ಮನನ ಮಾಡಿಕೊಳ್ಳಬೇಕು. ಕನ್ನಡ ಭಾಷೆಯ ಬಗ್ಯೆ ಅಭಿಮಾನ ಮತ್ತು ಪ್ರಭುತ್ವ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಪ್ರದೀಪ್ ಕುಮಾರ್ ಕಲ್ಕೂರ ಶುಭಾಶಂಸನೆ ಮಾಡಿದರು.
ಸರ್ಕಾರ ನೈತಿಕ ಶಿಕ್ಷಣಕ್ಕೆ ಬೆಂಬಲ ನೀಡಬೇಕು:
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ನೈತಿಕ ಶಿಕ್ಷಣವು ಧಾರ್ಮಿಕ ಶಿಕ್ಷಣಕ್ಕಿಂತ ಭಿನ್ನವಾಗಿದ್ದು, ಸರ್ಕಾರ ನೈತಿಕ ಶಿಕ್ಷಣಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದರು.
ನೈತಿಕ ಶಿಕ್ಷಣಕ್ಕೆ ಜಾತಿ, ಮತ, ಧರ್ಮದ ಲೇಪನ ಇರುವುದಿಲ್ಲ. ಪ್ರತಿಫಲಾಪೇಕ್ಷೆ ಇಲ್ಲದೆ ಪರರ ಕಷ್ಟ, ದು:ಖವನ್ನು ನಿವಾರಿಸುವುದೇ ದೇವರ ಪೂಜೆ ಆಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜದ ಸಭ್ಯ, ಸುಸಂಸ್ಕøತ ನಾಗರಿಕರನ್ನು ರೂಪಿಸುವುದೇ ನೈತಿಕ ಶಿಕ್ಷಣದ ಗುರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಂದು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ವಿದ್ಯಮಾನಗಳೊಂದಿಗೆ ಮಕ್ಕಳ ಚಿಂತನಾಶಕ್ತಿಯೂ ವೇಗವಾಗಿ ಬದಲಾಗುತ್ತಿದೆ. ತಾತ್ಕಾಲಿಕ ಸುಖ-ಭೋಗದ ಲಾಲನೆಯಲ್ಲಿ ಕೌಟುಂಬಿಕ ಸಂಬಂಧ, ಮಾನವೀಯತೆ, ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವುದು ವಿಷಾದನೀಯವಾಗಿದೆ ಎಂದು ಹೆಗ್ಗಡೆಯವರು ಹೇಳಿದರು.
ಉಡುಪಿ ಜಿಲ್ಲಾ ಯೋಗ ಸಂಘಟಕ ಮಂಜುನಾಥ್, ಎಂ.ಎನ್. ಅಶೋಕ್ ಪೂಜಾರಿ ಮತ್ತು ಮಂಜುನಾಥ್ ಎಂ.ಎನ್. ಉಪಸ್ಥಿತರಿದ್ದರು.

Leave a Reply