ನಾಗರಿಕ ಹೋರಾಟ ಸಮಿತಿಯ ಪ್ರಮುಖರ ಮೇಲೆ ರೌಡಿಶೀಟ್ ಪ್ರತಿಭಟನಾ ಸಭೆ

ನಾಗರಿಕ ಹೋರಾಟ ಸಮಿತಿಯ ಪ್ರಮುಖರ ಮೇಲೆ ರೌಡಿಶೀಟ್ ಪ್ರತಿಭಟನಾ ಸಭೆ

ಮಂಗಳೂರು: MRPL ಮೂರನೇ ಹಂತದ ಕೋಕ್ ಸಲ್ಫರ್ ಘಟಕದಿಂದ ಜೋಕಟ್ಟೆ ಸುತ್ತಮುತ್ತ ಉಂಟಾದ ಮಾಲಿನ್ಯದ ವಿರುದ್ಧ ಹೋರಾಡಲು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ರಚಿಸಿಕೊಳ್ಳಲಾಗಿತ್ತು. ಸುಮಾರು ಒಂದೂವರೆ ವರ್ಷಗಳ ಕಾಲ ನಡೆದ ಶಾಂತಿಯುತ ಹೋರಾಟದಿಂದಾಗಿ ರಾಜ್ಯಸರಕಾರ ಸಮಸ್ಯೆ ಪರಿಹಾರಕ್ಕಾಗಿ ಕ್ರಮಗಳನ್ನು ಸೂಚಿಸಿ ಆದೇಶವನ್ನು ಹೊರಡಿಸಿರುತ್ತದೆ. ಆ ಮೂಲಕ ನಾಗರಿಕ ಹೋರಾಟ ಸಮಿತಿ ನಡೆಸಿದ ಹೋರಾಟಕ್ಕೆ ಗೆಲುವು ಲಭಿಸಿರುತ್ತದೆ. ಅಂದಿನ ಹೋರಾಟದ ಸಂದರ್ಭದಲ್ಲಿ ರಸ್ತೆ ತಡೆ, ಅನುಮತಿ ರಹಿತ ಪ್ರತಿಭಟನೆಗಳ ನೆಪಗಳನ್ನು ಮುಂದಿಟ್ಟು ಕೆಲವು ಪ್ರಕರಣಗಳು ಸುರತ್ಕಲ್ ಮತ್ತು ಪಣಂಬೂರು ಠಾಣೆಗಳಲ್ಲಿ ದಾಖಲಾಗಿದ್ದವು. ಅಂತಿಮವಾಗಿ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲು ಸರಕಾರಿ ಆದೇಶ ಪ್ರಕಟವಾದ ನಂತರ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಹೋರಾಟದ ಸಂದರ್ಭ ಹೂಡಲಾಗಿದ್ದ ಪ್ರಕರಣಗಳನ್ನು ಕೈಬಿಡುವಂತೆ SEZ, MRPL ಮತ್ತು ಪೊಲೀಸ್ ಇಲಾಖೆಗೆ ಸೂಚಿಸಿತ್ತು. ಅದರಂತೆ SEZ ಕಂಪೆನಿಯು ತಾನು ದಾಖಲಿಸಿದ ಮೊಕದ್ದಮೆಗಳನ್ನು ಹಿಂಪಡೆಯಲು ಸಿದ್ಧವಿರುವುದಾಗಿ ಪೊಲೀಸ ಕಮೀಷನರ್ ಅವರಿಗೆ ಪತ್ರ ಬರೆದಿರುತ್ತಾರೆ.
ಆದರೆ ಅಂದು ದಾಖಲಾದ ಅದೇ ಸುಳ್ಳು ಮೊಕದ್ದಮೆಗಳನ್ನು ಮುಂದಿಟ್ಟು ಸುರತ್ಕಲ್ ಠಾಣಾಧಿಕಾರಿ ಚೆಲುವರಾಜು ಹೋರಾಟ ಸಮಿತಿಯ ಸಂಚಾಲಕರು ನಿವೃತ್ತ ಅಧಿಕಾರಿಯೂ ಆಗಿರುವ ಬಿ.ಎಸ್. ಹುಸೈನ್, ಹೋರಾಟ ಸಮಿತಿಯ ಸಂಚಾಲಕರು ಸ್ಥಳೀಯ ಪಂಚಾಯತ್ ಸದಸ್ಯರೂ ಆದ ಅಬೂಬಕ್ಕರ್ ಬಾವ, ಮೊಯ್ದೀನ್ ಶೆರೀಫ್ ಹಾಗೂ ವಿಜಯಾನಂದ ರಾವ್ ಅವರ ಮೇಲೆ ರೌಡಿಶೀಟ್ ತೆರೆದಿರುತ್ತಾರೆ. ಕುಖ್ಯಾತ ಕ್ರಿಮಿನಲ್‍ಗಳು, ಮತೀಯ ಗೂಂಡಾಗಳ ಮೇಲೆ ಹಬ್ಬ, ಉತ್ಸವಗಳ ಸಂದರ್ಭದಲ್ಲಿ ಹೂಡಲಾಗುವ ಸದ್ವರ್ತನೆ ಮುಚ್ಚಳಿಕೆಯ ಪ್ರಕರಣ ದಾಖಲಿಸಿರುತ್ತಾರೆ. ಐವತ್ತು ಸಾವಿರ ಬಾಂಡ್, ಅಷ್ಟೇ ಮೌಲ್ಯದ ಆಸ್ತಿ ಹೊಂದಿರುವ ಜಾಮೀನುದಾರರನ್ನು ಒದಗಿಸುವಂತೆ ಸಮನ್ಸ್ ನೀಡಿರುತ್ತಾರೆ. ಮತ್ತು “ನಿಮ್ಮಿಂದ ಊರಿನಲ್ಲಿ ಗಲಭೆ, ಹಿಂಸೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ” ಎಂದು ನೋಟೀಸು ನೀಡಿ ಏಕವಚನದಲ್ಲಿ ನಿಂದಿಸಿರುತ್ತಾರೆ. ಹಬ್ಬದ ದಿನಗಳ ಮುನ್ನೆಚ್ಚರಿಕೆಯಾಗಿ ಈ ಕಾನೂನು ಕ್ರಮ ಎನ್ನುತ್ತಲೇ MRPL ನಾಲ್ಕನೇ ಹಂತದ ಭೂಸ್ವಾಧೀನ ಸಂದರ್ಭ ನಿಮ್ಮಂತಹ ಕ್ರಿಮಿನಲ್‍ಗಳಿಂದ ಅದಕ್ಕೆ ತೊಂದರೆಯಾಗುತ್ತದೆ ಎಂದು ಆರೋಪಿಸಿದ್ದಾರೆ.

ನಾಗರಿಕ ಹೋರಾಟ ಸಮಿತಿ ಜೋಕಟ್ಟೆ ಸುರತ್ಕಲ್ ಠಾಣಾಧಿಕಾರಿಯ ಇಂತಹ ಕಾನೂನು ವಿರೋಧಿ, ಜನವಿರೋಧಿ ಧೋರಣೆಯನ್ನು ಕಟುವಾಗಿ ಖಂಡಿಸುತ್ತದೆ. ಈ ಹಿಂದೆ MRPL ಹೋರಾಟ ತೀವ್ರಗತಿ ಪಡೆದುಕೊಂಡಿದ್ದಾಗ ಇದೇ ಇನ್ಸ್‍ಪೆಕ್ಟರ್ ಚೆಲುವರಾಜು ಹೋರಾಟಗಾರರ ಮೇಲೆ ದೌರ್ಜನ್ಯ ಎಸಗಿ ಸುಳ್ಳು ಪ್ರಕರಣಗಳನ್ನು ಹೂಡಿದ್ದರು. ಕಂಪೆನಿಯ ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದರು. ಈ ರೀತಿ ಜನಪರ ಹೋರಾಟಗಳನ್ನು ನ್ಯಾಯಯುತವಾಗಿ ಸಂಘಟಿಸಿದ, ಪ್ರಾಮಾಣಿಕ ಹೋರಾಟಗಾರರು, ಗೌರವಾನ್ವಿತ ಜನಪ್ರತಿನಿಧಿಗಳನ್ನು ಈ ರೀತಿ ನಡೆಸಿಕೊಳ್ಳುವುದು ಒಪ್ಪಲಾಗದು. ಇದು ಹೋರಾಟಗಾರರನ್ನು ಬೆದರಿಸುವ, ಅನ್ಯಾಯಗಳನ್ನು ಪ್ರಶ್ನಿಸಿದ ನಾಗರಿಕರ ಬಾಯಿ ಮುಚ್ಚಿಸುವ ಯತ್ನ ಮತ್ತು ನಾಲ್ಕನೇ ಹಂತದ ಭೂಸ್ವಾಧೀನದ ವಿರುದ್ಧ ಸ್ಥಳೀಯ ಗ್ರಾಮಸ್ಥರು ಧ್ವನಿ ಎತ್ತದಂತೆ ಭೀತಿ ಮೂಡಿಸುವ ಕ್ರಮ. ಈ ರೀತಿ ಕಾನೂನಿಗೆ ಯಾವುದೇ ಗೌರವ ನೀಡದೆ, ನಿಯಮಗಳನ್ನು ದುರುಪಯೋಗಪಡಿಸಿ ಹೋರಾಟ ಸಮಿತಿ ಪ್ರಮುಖರನ್ನು ರೌಡಿಶೀಟ್ ತೆರೆದು ಕ್ರಿಮಿನಲ್‍ಗಳಾಗಿ ಚಿತ್ರಿಸಿ ಹಿಂಸಿಸುವ, ಬಾಯಿ ಮುಚ್ಚಿಸಲು ಯತ್ನಿಸುವ ಪೊಲೀಸ್ ಇಲಾಖೆ ಹಾಗೂ ಚೆಲುವರಾಜು ಅವರ ನಡವಳಿಕೆಯಿಂದಾಗಿ ಪೊಲೀಸ್ ಇಲಾಖೆಯ ವರ್ಚಸ್ಸಿಗೆ, ನೈತಿಕತೆಗೆ ಜನರ ಮುಂದೆ ಕುಂದುಂಟಾಗಿದೆ.

ಜನಪರ ಹೋರಾಟಗಾರರ ಮೇಲೆ ರೌಡ್‍ಶೀಟ್ ತೆರೆದಿರುವುದು ಜಿಲ್ಲೆಯಲ್ಲಿ ನಡೆಯುವ ಜನಪರ ನೆಲ-ಜಲ, ಪರಿಸರವಾದಿ ಚಳುವಳಿಗಳ ಮೇಲೆ ನಡೆದಿರುವ ಗದಾಪ್ರಹಾರ ಎಂದು ನಾವು ಭಾವಿಸುತ್ತೇವೆ. ಮತ್ತು ಇದನ್ನು ಜಿಲ್ಲೆಯ ಸಮಸ್ತ ನಾಗರಿಕ ಸಮಾಜ ಒಟ್ಟಾಗಿ ಪ್ರತಿರೋಧಿಸಬೇಕಿದೆ. ಈ ರೀತಿ ಕಾಯ್ದೆ ವಿರೋಧಿಯಾಗಿ ನಡೆದುಕೊಂಡಿರುವ ಚೆಲುವರಾಜು ಅವರನ್ನು ತಕ್ಷಣ ಅಮಾನತುಗೊಳಿಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಹೋರಾಟ ಸಮಿತಿ ಪ್ರಮುಖರ ಮೇಲೆ ಹಾಕಲಾಗಿರುವ ರೌಡಿಶೀಟ್ ಪ್ರಕರಣವನ್ನು ವಾಪಾಸ್ ಪಡೆಯಬೇಕು ಎಂದು ನಾಗರಿಕ ಹೋರಾಟ ಸಮಿತಿ ಜೋಕಟ್ಟೆ ಪೊಲೀಸ್ ಕಮೀಷನರ್ ಅವರಲ್ಲಿ ಮನವಿ ಮಾಡುತ್ತದೆ. ಹಾಗೂ ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಚೆಲುವರಾಜು ಅವರ ಗೂಂಡಾಗಿರಿಯನ್ನು ಖಂಡಿಸಿ ಸೆಪ್ಟೆಂಬರ್ 19ರಂದು ಸೋಮವಾರ ಬೆಳಿಗ್ಗೆ 10.30ಕ್ಕೆ ಸುರತ್ಕಲ್ ರೈಲ್ವೇ ಸೇತುವೆ ಬಳಿಯಿಂದ ಪೊಲೀಸ್ ಠಾಣೆಯವರೆಗೆ ಕಪ್ಪು ಬಾವುಟ ಹಿಡಿದು ಮೌನಮೆರವಣಿಗೆ, ಠಾಣೆಯ ಮುಂದೆ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ.

ಹಸಿರು ವಲಯಕ್ಕೆ 27 ಎಕರೆ ಭೂಸ್ವಾಧೀನ ಸೇರಿದಂತೆ ಸರಕಾರಿ ಆದೇಶಗಳನ್ನು ಜಾರಿಗೊಳಿಸುವಲ್ಲಿ MRPL ನಿಧಾನಗತಿಯನ್ನು ತೋರಿಸುತ್ತಿದೆ. ಕಾಲಮಿತಿಯೊಳಗೆ ಮುಗಿಯಬೇಕಾದ ಪರಿಹಾರ ಕ್ರಮಗಳಿಗೆ ಇದರಿಂದಾಗಿ ಹಿನ್ನಡೆ ಉಂಟಾಗಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಮಾಲಿನ್ಯದ ಪ್ರಮಾಣವೂ ಏರುತ್ತಿದ್ದು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ನೂತನ ಜಿಲ್ಲಾಧಿಕಾರಿಗಳು ಈ ಕುರಿತು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಹೋರಾಟ ಸಮಿತಿ ವಿನಂತಿಸಿಕೊಳ್ಳುತ್ತಿದ್ದು ವಿಳಂಬ ನೀತಿ ಮುಂದುವರಿದರೆ ಮತ್ತೆ ತೀವ್ರ ಹೋರಾಟ ಹಮ್ಮಿಕೊಳ್ಳುವುದು. ಗ್ರಾಮಸ್ಥರಿಗೆ ಅನಿವಾರ್ಯವಾಗಲಿದೆ ಎಂದು ಹೋರಾಟ ಸಮಿತಿ ಕಂಪೆನಿ ಮತ್ತು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದೆ.

Leave a Reply

Please enter your comment!
Please enter your name here