ನಿಮ್ಮ ಚಾಕರಿಯವನಾಗಲು ತೆನೆಹೊತ್ತ ಮಹಿಳೆಗೆ ಮತ ನೀಡಿ – ಪ್ರಮೋದ್ ಮಧ್ವರಾಜ್

59

ನಿಮ್ಮ ಚಾಕರಿಯವನಾಗಲು ತೆನೆಹೊತ್ತ ಮಹಿಳೆಗೆ ಮತ ನೀಡಿ – ಪ್ರಮೋದ್ ಮಧ್ವರಾಜ್

ಉಡುಪಿ: ಈ ಚುನಾವಣೆ ದೇಶದ ಭವಿಷ್ಯವನ್ನು ತೀರ್ಮಾನಿಸಲಿದೆ. ದೇಶದಲ್ಲಿ ಭಾವನಾತ್ಮಕವಾಗಿ ಜನರನ್ನು ದಿಕ್ಕುತಪ್ಪಿಸುವ ಶಕ್ತಿಗಳನ್ನು ದೂರ ಇಟ್ಟು ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯುವವರಿಗೆ ಮತ ಚಲಾಯಿಸಬೇಕೆಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರು ಹೇಳಿದರು.

ಅವರು ಭಾನುವಾರ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್-ಜೆ.ಡಿಎಸ್. ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜರ ಪರವಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರು ಹೆಜಮಾಡಿ ಪೇಟೆ ಹಾಗೂ ಸುತ್ತಮುತ್ತ ಪಾದಯಾತ್ರೆ ಮೂಲಕ ಮತಯಾಚನೆ ವೇಳೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ದೇಶದ ಐದು ಕೋಟಿ ಬಡ ಕುಟುಂಬಕ್ಕೆ ಮಾಸಿಕ ರೂ. 6000 ನೀಡುವ ಮೂಲಕ ಕನಿಷ್ಠ ಆದಾಯ ಕಲ್ಪಸಲಾಗುವುದು. ಈ ಯೋಜನೆಯಡಿ ವಾರ್ಷಿಕ 72,000 ರೂಪಾಯಿ ನೀಡಲಾಗುವುದು. ರೈತರಿಗೆ ಸಾಲ ಮನ್ನಾ, ಸಾಲ ಮುಕ್ತಿ ಯೋಜನೆ, ಪ್ರತ್ಯೇಕ ಬಜೆಟ್ ಮಂಡನೆ, ಒಂದೇ ಸ್ಲ್ಯಾಬ್ನ ಅಡಿ ಜಿ.ಎಸ್.ಟಿ.ಯನ್ನು ತಂದು ರೈತರಿಗೆ ಹಾಗೂ ಬಡ ಮಧ್ಯಮ ಜನತೆ ಸಂತೃಪ್ತಿಯ ಜೀವನ ಸಾಗಿಸುವಂತೆ ಕಾಂಗ್ರೆಸ್ ಕ್ರಮ ಕೈಗೊಳ್ಳಲಿದೆ. ಯಾವುದೇ ಹೊಸ ಉದ್ಯಮಗಳಿಗೆ ಮೊದಲ 3 ವರ್ಷ ಅನುಮತಿ ಕಡ್ಡಾಯವನ್ನು ರದ್ದುಗೊಳಿಸಿ ಹೊಸ ಉದ್ಯಮಗಳಿಗೆ ಪ್ರೋತ್ಸಾಹ ನೀಡಲಾಗುವುದು. 2020ರ ಒಳಗೆ ಖಾಲಿ ಇರುವ 22 ಲಕ್ಷ ಸರಕಾರಿ ಹುದ್ದೆಗಳ ಭರ್ತಿಯೊಂದಿಗೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಪ್ರಮೋದ್ ಮಧ್ವರಾಜ್ ಗೆಲುವು ಖಚಿತ, ಲೋಕಸಭಾ ಕ್ಷೇತ್ರದ ಅಭಿವೃದ್ಧಿ ನಿಶ್ಚಿತ ಎಂದು ವಿನಯ ಕುಮಾರ್ ಸೊರಕೆಯವರು ಮತಯಾಚನಾ ಸಂದರ್ಭದಲ್ಲಿ ಅಲ್ಲಲ್ಲಿ ನಡೆದ ಸಭೆಗಳಲ್ಲಿ ಹೇಳಿದರು.

ನಿಮ್ಮ ಚಾಕರಿಯವನಾಗಲು ತೆನೆಹೊತ್ತ ಮಹಿಳೆಗೆ ಮತ ನೀಡಿ – ಪ್ರಮೋದ್ ಮಧ್ವರಾಜ್

ಅಭ್ಯರ್ಥಿ ಪ್ರಮೋದ್ ಮಧ್ವರಾಜರು ಮಾತನಾಡುತ್ತಾ ಕಳೆದ ಐದು ವರ್ಷಗಳಿಂದ ಜನರ ಸಂಪರ್ಕಕ್ಕೆ ಸಿಗದೇ ಇದ್ದ ಸಂಸದರನ್ನು ನೀವು ಆಯ್ಕೆ ಮಾಡುತ್ತೀರೋ ಅನ್ನುವ ಪ್ರಶ್ನೆ ನಿಮ್ಮ ಮುಂದೆ ಇಡುತ್ತಿದ್ದೇನೆ. ನಾನು ಸಚಿವನಾಗಿದ್ದಾಗ ಎಲ್ಲಾ ವಿಧಾನಸಭಾ ಕ್ಷೇತ್ರದ ಜನತೆಯ ಸಮಸ್ಯೆಗೆ ಸ್ಪಂದಿಸಿರುತ್ತೇನೆ.

ವಿಶೇಷವಾಗಿ ದಿನದ 24 ಗಂಟೆಗಳ ಅವಧಿಯೂ ವಿದ್ಯುತ್ ಪೂರೈಕೆಯಾಗುವಂತೆ ಪ್ರಯತ್ನ ಮಾಡಿದ್ದೇನೆ. ಮೀನುಗಾರರ ಸಮಸ್ಯೆ, ಮರಳುಗಾರಿಕೆ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಅಲ್ಪಸಂಖ್ಯಾತರ ಸಮಸ್ಯೆ ಅಲ್ಲದೆ ಪ್ರಮುಖ ಸಮಸ್ಯೆಗಳನ್ನು ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ವಿನಯ ಕುಮಾರ್ ಸೊರಕೆಯವರು ಮಾಡಿರುತ್ತಾರೆ. ಇನ್ನು ಉಳಿದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸೊರಕೆಯವರೊಂದಿಗೆ ಸೇರಿ ಕೋಟಿ-ಚೆನ್ನಯರಂತೆ ಕೆಲಸ ಕಾರ್ಯಗಳನ್ನು ಮಾಡುತ್ತೇವೆ. ನನ್ನ ಚಿಹ್ನೆ ತೆನೆಹೊತ್ತ ಮಹಿಳೆಗೆ ಮತವನ್ನು ನೀಡಬೇಕೆಂದು ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಮೈತ್ರಿ ಅಭ್ಯರ್ಥಿಯಾದ ಪ್ರಮೋದ್ ಮಧ್ವರಾಜರು ಜನರಲ್ಲಿ ವಿನಂತಿಸಿಕೊಂಡರು.

ಅವರೊಂದಿಗೆ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ, ಎಂ.ಎ. ಗಪೂರ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಅಜೀಜ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ, ಸರಸು ಡಿ. ಬಂಗೇರಾ, ನವೀನ್ಚಂದ್ರ ಸುವರ್ಣ, ವಿಶ್ವಾಸ್ ವಿ. ಅಮೀನ್, ಎಂ.ಪಿ. ಮೊಯಿದಿನಬ್ಬ, ಗಣೇಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.