ನಿರಂಜನ ಭಟ್ ನುಂಗಿದ ಕಿವಿಯೋಲೆ ಹೊರಕ್ಕೆ ;ಶುಕ್ರವಾರ ನ್ಯಾಯಲಕ್ಕೆ ಹಾಜರು ಸಂಭವ

ನಿರಂಜನ ಭಟ್ ನುಂಗಿದ ಕಿವಿಯೋಲೆ ಹೊರಕ್ಕೆ ;ಶುಕ್ರವಾರ ನ್ಯಾಯಲಕ್ಕೆ ಹಾಜರು ಸಂಭವ

ಉಡುಪಿ: ವಜ್ರದ ಉಂಗುರ ಹಾಗೂ ಕಿವಿಯೋಲೆ ಗಳನ್ನು ನುಂಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ, ಆ ಬಳಿಕ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಉದ್ಯಮಿ ಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಜ್ಯೋತಿಷಿ ನಂದಳಿಕೆಯ ನಿರಂಜನ್‌ ಭಟ್‌(26)ನ ಹೊಟ್ಟೆಯಿಂದ ಕಿವಿಯೋಲೆಯನ್ನು ಗುರುವಾರ ಹೊರತೆಗೆಯಲಾಗಿದೆ.

niranjanbhat-Bhaskarshetty-02

ನಿರಂಜನ ಭಟ್ಟನನ್ನು ಶುಕ್ರವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಆ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪ್ರಕರಣದ ತನಿಖಾಧಿಕಾರಿ, ಕಾರ್ಕಳದ ಸಹಾಯಕ ಪೊಲೀಸ್‌ ಅಧೀಕ್ಷಕಿ ಸುಮನಾ ತಿಳಿಸಿದ್ದಾರೆ.

ಕೊಲೆಯಾದ ಬಳಿಕ ನಾಪತ್ತೆಯಾಗಿದ್ದ ನಿರಂಜನ್‌ ಭಟ್ಟನನ್ನು ಅಗೋಸ್ತ್ 8 ರಂದು ಪೋಲಿಸರು ಬಂಧಿಸಿದ್ದು ಆ ವೇಳೆ ತಾನು ಕೈ ಬೆರಳಲ್ಲಿದ್ದ ವಜ್ರದ ಉಂಗುರ ಹಾಗೂ ಕಿವಿಯ ಎರಡು ಓಲೆಗಳನ್ನು ಆ.7ರಂದು ನುಂಗಿರುವುದಾಗಿ ಆತ ತಿಳಿಸಿದ ಹಿನ್ನೆಲೆಯಲ್ಲಿ ಅದೇ ರಾತ್ರಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಆ.9ರಂದು ಆಸ್ಪತ್ರೆಯಲ್ಲಿ ಔಷಧಿ ನೀಡಿದ್ದರಿಂದ ಸಂಜೆ ವೇಳೆ ಆತನ ಹೊಟ್ಟೆಯಲ್ಲಿದ್ದ ಒಂದು ವಜ್ರದ ಉಂಗುರ ಹಾಗೂ ಒಂದು ಕಿವಿಯ ಓಲೆ ಹೊರಬಂದಿತ್ತು. ಆದರೆ ಇನ್ನೊಂದು ಓಲೆ ಹೊರ ಬರದ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಮಣಿಪಾಲ ಆಸ್ಪತ್ರೆಗೆ ನಿನ್ನೆ ಸಂಜೆ ದಾಖಲಿಸಲಾಗಿತ್ತು.

ಕೆಎಂಸಿಯ ವೈದ್ಯರು ಕೊಲೊನೊಸ್ಕೋಪಿಯ ಮೂಲಕ ಇಂದು ಸಂಜೆ ವೇಳೆ ಉಳಿದೊಂದು ಓಲೆಯನ್ನು ಹೊಟ್ಟೆಯಿಂದ ಹೊರತೆಗೆದಿದ್ದು, ಆತನಿಗೆ ಆ ಭಾಗದಲ್ಲಿ ಹೆಚ್ಚಿನ ಯಾವುದೇ ಗಾಯವಾಗಿಲ್ಲ ಒಂದೆರಡು ಗಂಟೆಗಳಲ್ಲಿ ಆತ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು ಎಂದು ವೈದ್ಯರು ಭರವಸೆ ನೀಡಿದ್ದು, ಶುಕ್ರವಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ದತೆ ಮಾಡುವುದಾಗಿ ಹೇಳಿದ್ದಾರೆ.

Leave a Reply