ನಿರುಪಯುಕ್ತ ಕೊಳವೆ ಬಾವಿಗೆ ಜಲ ಮರುಪೂರಣ – ಕಲ್ಯಾಣಪುರದಲ್ಲಿ ಪ್ರಾಯೋಗಿಕ ಇಂಗುಗುಂಡಿ

ಬರಹ : ಬಿ. ಶಿವಕುಮಾರ್ ವಾರ್ತಾ ಇಲಾಖೆ

ಉಡುಪಿ: ಈ ಜಗತ್ತನಲ್ಲಿ ನೀರಿಗೆ ಪರ್ಯಾಯವಾಗಿ ಬೇರಾವುದೂ ಇಲ್ಲ, ಮಾನವನಿಗೆ ಕೃಷಿ, ವಾಣಿಜ್ಯ ಬಳಕೆಗೆ ಸೇರಿದಂತೆ ದಿನ ನಿತ್ಯದ ಜೀವನದಲ್ಲಿ ನೀರು ಅತ್ಯಾವಶ್ಯಕ. ಭೂಮಿಯ ಶೇ.70 ರಷ್ಟು ಭಾಗ ನೀರಿನಿಂದ ಆವೃತ್ತವಾಗಿದ್ದರೂ ಸಹ, ವಿಶ್ವದಲ್ಲಿರುವ ಶೇ.97 ನೀರು ಸಮುದ್ರದ ಉಪ್ಪಿನಿಂದ ಕೂಡಿದ್ದು, ಮಾನವ ಬಳಕೆಗೆ ಸಾಧ್ಯವಿಲ್ಲ. ಶೇ.2.7 ಮಾತ್ರ ಬಳಕೆಗೆ ಯೋಗ್ಯವಾಗಿದ್ದು ಎನ್ನುವ ಮಾಹಿತಿಯಿದೆ. ಇಂತಹ ಅಮೂಲ್ಯವಾದ ನೀರನ್ನು ಎಲ್ಲರೂ ಮಿತವಾಗಿ ಬಳಸುವುದು ಮಾತ್ರವಲ್ಲದೇ , ಮುಂದಿನ ಪೀಳಿಗೆಗೆ ಉಳಿಸುವುದೂ ಸಹ ಅಗತ್ಯವಾಗಿದೆ.

water-harvesting-kallianpur water-harvesting-kallianpur-001 water-harvesting-kallianpur-002 water-harvesting-kallianpur-003 water-harvesting-kallianpur-004 water-harvesting-kallianpur-005

ಮಾರ್ಚ್ 22 ವಿಶ್ವ ಜಲ ದಿನ, ನೀರಿನ ಪ್ರತಿ ಹನಿಯೂ ಅತ್ಯಮೂಲ್ಯವಾದುದು , ನೈಸರ್ಗಿಕವಾಗಿ ಲಭ್ಯವಿರುವ ಜಲ ಸಂಪನ್ಮೂಲವನ್ನು ಸಮರ್ಪಕವಾಗಿ ಮತ್ತು ಜಾಣ್ಮೆಯಿಂದ ಬಳಸಿಕೊಳ್ಳಬೇಕು ಇದರಿಂದ ಮುಂದಿನ ಪೀಳಿಗೆಯ ಭವಿಷ್ಯ ನಿಂತಿದೆ. ಪ್ರತಿ ವ್ಯಕ್ತಿ ,ಪ್ರತಿ ಕುಟುಂಬ ತಮಗೆ ದಿನದ ಗಂಟೆ ನೀರಿನ ವ್ಯವಸ್ಥೆ ಬೇಕಾದಲ್ಲಿ , ಮಳೆಗಾಲದಲ್ಲಿ ಮಳೆ ನೀರನ್ನು ತಡೆಹಿಡಿದು, ಸಂಗ್ರಹಿಸಿ ಇಂಗು ಗುಂಡಿಗಳನ್ನು ನಿರ್ಮಿಸಿ ಭೂಗರ್ಭದಲ್ಲಿ ನೀರನ್ನು ಇಂಗಿಸುವ ವ್ಯವಸ್ಥೆಯನ್ನು ಪ್ರಮಾಣಿಕವಾಗಿ ಮಾಡಬೇಕಾಗಿದೆ.

ನಮ್ಮ ವಾಸದ ಮನೆಯ ಛಾವಣಿ, ವಸತಿ ಸಂಕೀರ್ಣ, ಕೈಗಾರಿಕಾ ಕಟ್ಟಡಗಳು, ಸಭಾಂಗಣದ ಮೇಲೆ ಬಿಳುವ ಪ್ರತಿ ಮಳೇ ನೀರಿನ ಹನಿಯು ವ್ಯರ್ಥವಾಗದಂತೆ ಹೋಗದಂತೆ, ಮನೆಯ ಅಂಗಳ ಅಥವಾ ಹಿತ್ತಲಿನಲ್ಲಿ ಇಂದು ಗುಂಡಿಗಳನ್ನು ನಿರ್ಮಿಸಿ ಅದರಲ್ಲಿ ಮಳೆ ನೀರನ್ನು ಸಂಗ್ರಹಿಸಬೇಕು. ಜೊತೆಗೆ ನೀರನ್ನು ಹತ್ತಿರದ ತೆರೆದ ಬಾವಿ/ಬತ್ತಿ ಬಾವಿಗೂ ಸಹ ಬಿಡಬಹುದು.
ಮಳೆ ನೀರನ್ನು ಇಂಗು ಗುಂಡಿಗೆ ಬಿಡುವ ಮುನ್ನ ನಿಧಾನವಾಗಿ ಜಲ್ಲಿ/ಮರಳು ಪದರದ ಮೂಲಕ ನೀರನ್ನು ಶೋಧಿಸುವ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ತಾರಸಿಯಲ್ಲಿ ಬೀಳುವ ಮರದ ಎಲೆ, ಮಣ್ಣು-ಕಸ, ನೀರಿಗೆ ಸೇರುವ ಸಾಧ್ಯತೆಯಿರುವುದುರಿಂದ ಶುದ್ದೀಕರಿಸಿ ಬಿಡುವುದು ಅವಶ್ಯಕ.
ನೀರಿಲ್ಲದ ನಿರುಪಯುಕ್ತ ಬೋರ್‍ವೆಲ್ ಗಳನ್ನು ನಾನಾ ಕಾರಣಗಳಿಂದ ಸಂಪೂರ್ಣವಾಗಿ ಮುಚ್ಚುವ ಬದಲು ನೀರು ಇಂಗಿಸುವ ಇಂಗು ಗುಂಡಿಗಳನ್ನಾಗಿ ಪರಿರ್ತಿಸಿ, ಮಳೆ ನೀರನ್ನು ಸಂಗ್ರಹಿಸುವ ಇಂಗುಗುಂಡಿಗಳನ್ನಗಿ ಪರಿವರ್ತಿಸಿ , ಮಳೆ ನೀರು ಸಂಗ್ರಹಕ್ಕೆ ಅನುವು ಮಾಡಿಕೊಟ್ಟು ಅಂತರ್ಜಲವನ್ನು ವೃದ್ದಿಸಬಹುದು. ಈ ಕುರಿತು ಉಡುಪಿ ಕಲ್ಯಾಣಪುರದ ಜೋಸೆಫ್ ಜಿ.ಎಮ್. ರೆಬೆಲ್ಲೊ ಅವರು ಪ್ರಾಯೋಗಕವಾಗಿ ಇಂಗುಗುಂಡಿ ನಿರ್ಮಿಸಿ ಯಶಸ್ವಿಯಾಗಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಸಾರ್ವಜಿನಿಕ ಸ್ಥಳದಲ್ಲಿರುವ ನಿರ್ಜಿವ/ ಜೀವಂತ ಬೋರ್ ವೆಲ್ ಗಳಿಗೆ ಈ ಇಂಗು ಗುಂಡಿಯ ನಿರ್ಮಾಣ ಅಥವಾ ಕೊಳವೆ ಬಾವಿಯ ಮರುಪೂರಣ ಘಟಕ ನಿರ್ಮಾಣಕ್ಕಾಗಿ ಸುಮಾರು 80 ಸಾವಿರ ವೆಚ್ಚವಾಗಲಿದ್ದು, ಮಹಾತ್ಮ ಗಾಂಧೀ ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲು ಸಾಧ್ಯವಿದೆ, ಮಳೆ ನೀರು ಇಂಗಿಸುವಿಕೆ ಅಥವಾ ಜಲ ಮರುಪೂರಣ ಘಟಕ ಅಳವಡಿಸಿಕೊಳ್ಳಲು ಕೇಂದ್ರ ಅಥವಾ ರಾಜ್ಯ ಸರ್ಕಾರ ಯಾವುದೇ ನಿರ್ಭಂದಗಳನ್ನು ವಿಧಿಸಿಲ್ಲವಾದ್ದರಿಂದ ಯಾವುದೇ ಅನುಮತಿ ಪಡೆಯುವ ಅವಶ್ಯಕತೆ ಇರುವುದಿಲ್ಲ ಎನ್ನುವುದು ಜೋಸೆಫ್ ಜಿ.ಎಮ್. ರೆಬೆಲ್ಲೊ ಅವರ ನುಡಿಗಳು..
ಬೋರ್ ವೆಲ್ ಗಳಿಗೆ ಜಲ ಮರು ಪೂರಣ ವ್ಯವಸ್ಥೆ ಅಳವಡಿಸುವ ವಿಧಾನ : ಕೊಳವೆ ಬಾವಿಯ ಸುತ್ತ 10 ಅಡಿ ಉದ್ದ, 10 ಅಡಿ ಅಗಲದ ಗುಂಡಿ ತೋಡಿ, ಕೋಳವೆ ಬಾವಿಗೆ ಹಾಕಿರುವ ಕೇಸಿಂಗ್ ಪೈಪ್ ಗೆ ಅಲ್ಲಲ್ಲಿ 5 ಮಿಮಿ ವ್ಯಾಸದ ರಂಧ್ರಗಳನ್ನು ಕೊರೆಯಬೇಕು, ನಂತರ ಕೇಸಿಂಗ್ ಪೈಪ್ ನ ಸುತ್ತಲೂ ಅಕ್ವಾಮೆಷ್ ಅಥವಾ ನೈಲಾನ್ ಮೆಷ್ ಅಥವಾ ಸ್ಯಾಂಡ್ ಫಿಲ್ಟರ್ ಅಳವಡಿಸಬೇಕು. ಮೆಷ್/ಫಿಲ್ಟರ್ ಅಳವಡಿಸುವಾಗ ಅಲ್ಯೂಮಿನಿಯಂ ತಂತಿಯಿಂದಲೇ ಸುತ್ತಬೇಕು. ಹೊಂಡದಲ್ಲಿ ಕೇಸಿಂಗ್ ಪೈಪ್ ನ ಸುತ್ತ 1 ಮೀಟರ್ ವ್ಯಾಸದ ಸಿಮೆಂಟ್ ರಿಂಗ್ ಗಳನ್ನು ಜೋಡಿಸಬೇಕು. ರಿಂಗ್ ನ ಹೊರಭಾಗದಲ್ಲಿ ಉಳಿದ ಹೊಂಡದ ಆಳದಲ್ಲಿ 4 ಅಡಿ ಆಳದವರೆಗೆ ಬೋಲ್ಡ್ರಸ್ ದಪ್ಪ ಕಲ್ಲುಗಳು , ಅದರ ಮೇಲೆ 2 ಅಡಿ 40 ಮಿಮಿ ಜಲ್ಲಿ, ಅದರ ಮೇಲೆ 1 ಅಡಿ ಇದ್ದಿಲು, ಅದರ ಮೇಲೆ 1 ಅಡಿ 20ಮಿಮಿ ಜಲ್ಲಿ ಹಾಕಬೇಕು, ನಂತರ ಗೆದ್ದಲು ನಿರೋಧಕ ಹೈ-ಡಿನ್ಸಿಟಿ ಪೋಲಿಥಿನ್ ಮ್ಯಾಟ್ ಹಾಸಬೇಕು. ಇದರ ಮೇಲ್ಭಾಗದಲ್ಲಿ 2 ಅಡಿ ದಪ್ಪದಲ್ಲಿ ದಪ್ಪ ಮರಳು ಹಾಕಬೇಕು. ರಿಂಗ್ ನ ಮೇಲ್ಬಾಗದಲ್ಲಿ ಅದಕ್ಕೊಂದು ಮುಚ್ಚಳ ಮುಚ್ಚಬೇಕು. ಇಂಗು ಗುಂಡಿಯ ಸುತ್ತ ಕಲ್ಲು ಸಿಮೆಂಟಿನಿಂದ ತಡೆಗೋಡೆ ಕಟ್ಟಿ ಮಳೆ ನೀರು ಸುಲಭ ಹಾಗೂ ಸರಾಗವಾಗಿ ಬರುವಂತೆಯೂ ಮತ್ತು ನೀರಿನ ಜೊತೆ ಕಸ-ಕಡ್ಡಿ ಬರದಂತೆ ವ್ಯವಸ್ಥೆ ಮಾಡಬೆಕು. ಛಾವಣಿ ಅಥವಾ ತಾರಸಿಯ ಮೇಲಿನ ಮಳೆ ನೀರನ್ನು ಕೂಡ ಸೋರಿ ಬಿಡುವುದರ ಬದಲು ಪೈಪ್ ಲೈನ್ ಮೂಲಕ ಈ ಕೊಳವೆ ಬಾವಿಯ ಸುತ್ತಲೂ ನಿರ್ಮಿಸಿದ ಇಂಗುಗುಂಡಿಯಲ್ಲಿ ಬಂದು ಬೀಳುವಂತೆ ಮಾಡಬೇಕು. ಹೀಗೆ ಮಾಡಿದಲ್ಲಿ ಇಂಗುಗುಂಡಿಯಲ್ಲಿ ಸಂಗ್ರಹವಾಗುವ ಮಳೆ ನೀರು, ಮಣ್ಣಿನಲ್ಲಿ ಇರುವ ರಂಧ್ರಗಳಿಂದ ಮತ್ತು ಬಂಡೆಕಲ್ಲುಗಳಲ್ಲಿರುವ ಸೀಳು ಬಿರುಕು ಹಾಗೂ ಕಂದಕಗಳ ಮೂಲಕ ಭೂಮಿಯೊಳಗೆ ಇಳಿಯುವುದರಿಂದ ಭೂಮಿಯಲ್ಲಿ ಅಂತರ್ಜಲ ಮಟ್ಟ ಏರುತ್ತದೆ. ನೀರು ಸದಾ ಮೇಲ್ಮಟ್ಟದಲ್ಲೇ ದೊರೆಯುತ್ತದೆ.
ಉಪಯೋಗಗಳು : ಅಂತರ್ಜಲ ವೃದ್ಧಿ, ಕೃಷಿಗೆ ವರದಾನ, ಪರಿಸರ ಸ್ನೇಹಿ ತಂತ್ರಜ್ಞಾನ, ಕಡಿಮೆ ಖರ್ಚು, ಧೀರ್ಘ ಬಾಳಿಕೆ ಭೂ ತಾಪಮಾನ ಕಾಪಾಡಲು ಸಹಕಾರಿ.
ಸಾಮಾಜಿಕ ಅಭಿವೃದ್ಧಿ ಆಯೋಗ, ಮೌಂಟ್ ರೋಜರಿ ಚರ್ಚ್ ಘಟಕದ ನೇತ್ರತ್ವದಲ್ಲಿ ಹಾಗೂ ಮೌಂಟ್ ರೋಜರಿ ಚರ್ಚ್ ಪಾಲನಾ ಮಂಡಳಿ ಸಂತೆಕಟ್ಟೆ, ಕಲ್ಯಾಣಪುರ ಇವರ ಸಹಕಾರದೊಂದಿಗೆ ಜೋಸೆಫ್ ಈ ಜಲ ಮರುಪೂರಣ ವ್ಯವಸ್ಥೆ ಸಿದ್ದಗೊಂಡಿದೆ.

ಅಲ್ಲದೇ ಸರಕಾರ ಎಲ್ಲೆಡೆ 100 ಶೇಕಡಾ ಮಳೆ ನೀರು ಇಂಗಿಸುವ ಕುರಿತು ಕಡ್ಡಾಯ ನಿಯಮ ಜಾರಿಗೆ ತಂದು , ಹೊಸದಾಗಿ ನಿರ್ಮಾಣವಾಗುವ ಎಲ್ಲಾ ರೀತಿಯ ಕಟ್ಟಡ ಕಾಮಗಾರಿಗೆ ಪರವಾನಗಿ ನೀಡುವ ಮುನ್ನ ಮಳೆ ನೀರು ಇಂಗಿಸುವಿಕೆ ಬಗ್ಗೆ ಕಡ್ಡಾಯ ಷರತ್ತು ವಿಧಿಸಿದರೆ ನೀರಿನ ಸಮಸ್ಯೆಗೆ ಇತಿಶ್ರೀ ಹಾಡಲು ಸಾಧ್ಯ ಎನ್ನುವುದು ಜೋಸೆಫ್ ಜಿ.ಎಮ್. ರೆಬೆಲ್ಲೊ ಅವರ ಅಭಿಪ್ರಾಯ. ಮಾಹಿತಿಗಾಗಿ ದೂ.ಸಂ.9964100520

Leave a Reply

Please enter your comment!
Please enter your name here