ನೇತ್ರಾವತಿ ನದಿಗೆ ಸ್ನಾನಕ್ಕಿಳಿದ ಸ್ನೇಹಿತರಿಬ್ಬರು ಮುಳುಗಿ ಮೃತ್ಯು

ಬಂಟ್ವಾಳ: ನೇತ್ರಾವತಿ ನದಿಗೆ ಸ್ನಾನಕ್ಕೆಂದು ಇಳಿದ ಸ್ನೇಹಿತರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ಬರಿಮಾರು ಗ್ರಾಮದ ಜರ್ಕಿಲ ಕಾಗೆಕಾಣ ಎಂಬಲ್ಲಿ ಸಂಭವಿಸಿದೆ.
ಮೃತರನ್ನು ಬುಡೊಳಿ ನಿವಾಸಿಗಳಾದ ಸತೀಶ್‌(22) ಮತ್ತು ಜಗದೀಶ್‌(23) ಎಂದು ಗುರುತಿಸಲಾಗಿದೆ.

ಬುಧವಾರದಂದು ಇಲ್ಲಿನ ಸಾದಿಕುಕ್ಕು ಜಾತ್ರೆ ಮಹೋತ್ಸವಕ್ಕೆಂದು ಆಗಮಿಸಿದ್ದ ಐವರು ಸ್ನೇಹಿತರು ಗುರುವಾರ ಸಂಜೆ ಮನೆಗೆ ತೆರಳುತ್ತಿದ್ದ ವೇಳೆ ಜರ್ಕಿಲದ ನೇತ್ರಾವತಿ ನದಿಗೆ ಸ್ನಾನ ಮಾಡಲೆಂದು ತೆರಳಿದ್ದರು. ಐವರ ಪೈಕಿ ಇಬ್ಬರು ಮಾತ್ರ ನೀರಿಗಿಳಿದರೆ ಮೂವರು ನದಿ ದಡದಲ್ಲಿ ನಿಂತಿದ್ದರು. ಸ್ನಾನ ಮಾಡುತ್ತಿದ್ದ ಸತೀಶ್‌ ಮತ್ತು ಜಗದೀಶ್‌ ನೀರಿನ ಆಳ ಅರಿಯದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಗಲಿಬಿಲಿಗೊಂಡ ದಡದಲ್ಲಿದ್ದ ಮೂವರು ಸ್ನೇಹಿತರು ಬೊಬ್ಬೆ ಹಾಕಿದ್ದರಿಂದ ಸ್ಥಳಕ್ಕೆ ಬಂದ ಸ್ಥಳೀಯರು ತಕ್ಷಣ ನೀರಿಗಿಳಿದು ಇಬ್ಬರಿಗಾಗಿ ಹುಡುಕಾಟ ನಡೆಸಿದರಾದರೂ ಪ್ರಯೋಜನವಾಗಿಲ್ಲ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದರು. ರಾತ್ರಿ 9:30ರ ವೇಳೆಗೆ ಮೃತದೇಹಗಳನ್ನು ಪತ್ತೆಹಚ್ಚುವಲ್ಲಿ ಅಗ್ನಿ ಶಾಮಕದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

Leave a Reply