`ನೋಟಾ’ ಬಗ್ಗೆ ಮಾಹಿತಿ ತಪ್ಪಲ್ಲ; ಪ್ರಚೋದನೆ ತಪ್ಪು – ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

`ನೋಟಾ’ ಬಗ್ಗೆ ಮಾಹಿತಿ ತಪ್ಪಲ್ಲ; ಪ್ರಚೋದನೆ ತಪ್ಪು – ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

ಉಡುಪಿ: ಮತಪತ್ರ (ಬ್ಯಾಲೆಟ್)ದಲ್ಲಿ `ನೋಟಾ’ ಆಯ್ಕೆ ಇರುವ ಬಗ್ಗೆ ಮಾಹಿತಿ ನೀಡುವ ಪ್ರಚಾರ ಮಾಡುವುದು ತಪ್ಪಲ್ಲ. ಆದರೆ, ನೋಟಾಕ್ಕೆ ಮತ ಚಲಾಯಿಸಿ ಎಂದು ಅಭಿಯಾನ ಇತ್ಯಾದಿ ನಡೆಸಿ ಪ್ರಚೋದನೆ ನೀಡುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಶನಿವಾರ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಾಧ್ಯಮ ಪ್ರತಿನಿಧಿಗಳಿಗಾಗಿ ನಡೆಸಿದ ಸ್ವೀಪ್ ಮಾಹಿತಿ ಹಾಗೂ ಮತದಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಜಿಲ್ಲೆಯಲ್ಲಿ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶೇಕಡವಾರು ಮತದಾನ ಹೆಚ್ಚಳಕ್ಕೆ ಸ್ವೀಪ್ ಸಮಿತಿ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಅಂಗವಿಕಲರನ್ನೂ ಮತಗಟ್ಟೆಗೆ ತರಲು ವಾಹನ ವ್ಯವಸ್ಥೆ ಆಯೋಗದಿಂದಲೇ ಕಲ್ಪಿಸಲಾಗುತ್ತಿದೆ. ಮತಗಟ್ಟೆಯಲ್ಲಿ ಮತದಾನಕ್ಕೆ ತೊಂದರೆಯಾದರೆ ಸಿ-ವಿಸಿಲ್ ಆ್ಯಪ್ ಮೂಲಕ ಸಾರ್ವಜನಿಕರು ದೂರು ದಾಖಲಿಸಬಹುದು.

ಮತದಾರರು ಯಾರಿಗೆ ಮತ ಚಲಾಯಿಸಬೇಕು ಎನ್ನುವುದು ಅವರಿಗೆ ಬಿಟ್ಟ ವಿಚಾರ. ಹಾಗಿರುವಾಗ ನೋಟಾಕ್ಕೆ ಹೆಚ್ಚಿನ ಮತ ಹಾಕಿ ಎಂದು ಮತದಾರರ ಮೇಲೆ ಪ್ರಭಾವ ಬೀರಿ, ಪ್ರಚೋದನೆ ನೀಡಬಾರದು. ಅಂಥ ಪ್ರಕರಣ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಮತದಾನದ ಬಗ್ಗೆ ಉಡುಪಿ ಜಿಲ್ಲೆಯ ಜನರಿಗೆ ತಿಳಿದಿದೆ. ಕಳೆದ ಐದು ದಶಕಗಳನ್ನು ಗಮನಿಸಿದರೆ ಗೆಲುವಿನ ಅಂತರ ಕಡಿಮೆಯಾಗುತ್ತಿದೆ. ಕೆಲವು ಕಡೆಗಳಲ್ಲಿ ಬೆರಳೆಣಿಕೆಯ ಮತಗಳಿಂದ ಪರಾಭವಗೊಂಡಿರುವುದು ಇದೆ. ಇದೆಲ್ಲವನ್ನು ಗಮನಿಸಲಾಗುತ್ತಿದೆ. ಮತದಾರರು ಆಸಕ್ತಿಯಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು. ಈಗಾಗಲೇ ಮಾದರಿಯಾಗಿರುವ ಉಡುಪಿಯಲ್ಲಿ ಮತದಾರರ ಪಟ್ಟಿಯಲ್ಲಿರುವ ಎಲ್ಲ ಮತದಾರನೂ ಬಂದು ತಮ್ಮ ಹಕ್ಕು ಚಲಾಯಿಸುವಂತಾಗಬೇಕು. ಮುಂದಿನ 25 ದಿನಗಳ ಕಾಲ ಸ್ವೀಪ್ ಸಮಿತಿ ಕಾರ್ಯಕ್ರಮ ನಡೆಸಲಿದೆ ಎಂದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿ ಸ್ಟ್ರಾಂಗ್ ರೂಂನಿಂದ ಪ್ರತಿ ವಿಧಾನ ಸಭಾ ಕ್ಷೇತ್ರಗಳಿಗೆ ಮತಯಂತ್ರಗಳನ್ನು ಕಳುಹಿಸಿಕೊಡಲಾಗುತ್ತದೆ. ಅಧಿಕಾರಿಗಳು 5 ವಿಧಾನ ಸಭಾ ವ್ಯಾಪ್ತಿಯಲ್ಲಿರುವ ಸ್ಟ್ರಾಂಗ್ ರೂಂನಲ್ಲಿ ಮತಯಂತ್ರಗಳನ್ನು ತೆಗೆದಿರಿಸಲಿದ್ದಾರೆ. ಮತದಾನಕ್ಕೆ ಮುಂಚಿನ ದಿನ ಎಲ್ಲಾ 1111 ಮತಗಟ್ಟೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ಚುನಾವಣೆ ನಡೆಯುವ ಆಸುಪಾಸು ಸಾಲು ಸಾಲು ರಜೆಗಳಿರುವುದರಿಂದ ಖಾಸಗಿ ಮತ್ತು ಕೆಎಸ್ಆರ್ಟಿಸಿ ಬಸ್ಸುಗಳು ಪ್ರಯಾಣ ದರ ಏರಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಇದು ಕೇವಲ ಉಡುಪಿ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಆದ್ದರಿಂದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಈ ಬಗ್ಗೆ ಮಾಹಿತಿ ಕಳಿಸುತ್ತೇನೆ. ಅಲ್ಲಿಂದಲೇ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಸೂಚನೆ ಬಂದರೆ ಅನುಕೂಲವಾಗಲಿದೆ ಎಂದರು.

ಸ್ವೀಪ್ ಸಮಿತಿ ಅಧ್ಯಕ್ಷೆ, ಜಿ. ಪಂ. ಸಿಇಒ ಸಿಂಧೂ ಬಿ. ರೂಪೇಶ್, ಮತದಾರರ ಪಟ್ಟಿಯಲ್ಲಿರುವ ಎಲ್ಲರೂ ಮತಗಟ್ಟೆಗೆ ಬಂದು ಮತದಾನ ಮಾಡುವಂತಾಗಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 80ರಷ್ಟು ಮತದಾನವಾಗಿದೆ. ಈ ಬಾರಿ ಅಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಬೇಕು ಎನ್ನುವ ಆಶಯವಿದೆ. ಪ್ರತಿದಿನ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸ್ವೀಪ್ ಸಮಿತಿ ಅಧ್ಯಕ್ಷೆ ಸಿಂಧು ಬಿ. ರೂಪೇಶ್ ಮಾತನಾಡಿ, ಯುವ ಜನರನ್ನು ಹೆಚ್ಚು ತಲುಪುವ ನಿಟ್ಟಿನಲ್ಲಿ ಹಾಸ್ಟೆಲ್ ಮತ್ತು ಕಾಲೇಜಿನಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಹೆಚ್ಚು ಪ್ರಚಾರ ನೀಡಲಾಗುತ್ತಿದೆ. 35 ಮಂದಿಯನ್ನು ಕ್ಯಾಂಪಸ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ ಎಂದರು.

ವಿಶೇಷಚೇತನ ಮತದಾರರಿಗೆ ಸಾರಿಗೆ ವ್ಯವಸ್ಥೆಯನ್ನು ಸ್ವೀಪ್ ಸಮಿತಿ ಮಾಡಲಿದೆ. ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಆಯಾ ಗ್ರಾ. ಪಂ.ಗಳಿಗೆ ಪಂಚಾಯತ್ ಮಟ್ಟದಲ್ಲಿ ಸಾರಿಗೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದ ಅವರು, ಜಿಲ್ಲೆಯ 1,111 ಮತಗಟ್ಟೆಗಳಲ್ಲಿಯೂ ಇವಿಎಂ ಮತ್ತು ವಿವಿಪ್ಯಾಟ್ ಪ್ರಾತ್ಯಕ್ಷಿಕೆ ನಡೆಸಲಾಗುತ್ತಿದೆ. ಸುಮಾರು 70 ಸಾವಿರ ಮಂದಿ ಪಾಲ್ಗೊಂಡಿದ್ದಾರೆ. ಹೊಸ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು. ಮತದಾನ ಮಾಡಿದ ಬಳಿಕ ವಿವಿ ಪ್ಯಾಟ್ನಲ್ಲಿ ತಮ್ಮ ಮತ ಯಾರಿಗೆ ಸೇರಿದೆ ಎಂಬುದನ್ನು ದೃಢಪಡಿಸಿಕೊಳ್ಳಬಹುದಾಗಿದೆ. ಫಲಿತಾಂಶ ಸಮಯದಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ 1 ಮತಯಂತ್ರ ಹಾಗೂ ವಿವಿಪ್ಯಾಟ್ ತುಲನೆ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತರಿಂದ ಮತದಾನ ಪ್ರತಿಜ್ಷೆ ವಿಧಿ ಸ್ವೀಕಾರ ನಡೆಯಿತು. ಬಳಿಕ ವಿವಿಪ್ಯಾಟ್ ಪ್ರಾತ್ಯಕ್ಷಿಕೆ ನಡೆಸಲಾಯಿತು. ಉಡುಪಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜು ಮತ್ತು ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಇದ್ದರು.