ಪಂಚಾಯತಿಗಳ ಆಡಳಿತ ಪರಿಣಾಮಕಾರಿಗೆ ಬದಲಾವಣೆ ಅಗತ್ಯ – ಎಚ್.ಕೆ.ಪಾಟೀಲ

ಪಂಚಾಯತಿಗಳ ಆಡಳಿತ ಪರಿಣಾಮಕಾರಿಗೆ ಬದಲಾವಣೆ ಅಗತ್ಯ – ಎಚ್.ಕೆ.ಪಾಟೀಲ

ಬೆಂಗಳೂರು: ರಾಷ್ಟ್ರದ ಪ್ರಜಾಸತ್ತೆಗೆ ಮೂಲಭೂತ ಅಡಿಪಾಯ ಒದಗಿಸುವ ಪಂಚಾಯತ ರಾಜ್ ಸಂಸ್ಥೆಗಳನ್ನು ಸಬಲಗೊಳಿಸಲು ಕೇಂದ್ರ ಸರ್ಕಾರ ಹೆಚ್ಚುವರಿ ಹಣಕಾಸು ನೀಡಬೇಕು ಮತ್ತು ಕವಲು ದಾರಿಯಲ್ಲಿರುವ ಪಂಚಾಯತಿ ರಾಜ್ ಸಂಸ್ಥೆಗಳ ಆಡಳಿತ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸಲು ನೀತಿ ನಿರೂಪಣಾ ಮಟ್ಟದಲ್ಲಿ ಪ್ರವೃತ್ತಿಯ ಬದಲಾವಣೆಯ ಅವಶ್ಯಕತೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವ ಎಚ್.ಕೆ.ಪಾಟೀಲ ಪ್ರತಿಪಾದಿಸಿದ್ದಾರೆ. ನವದೆಹಲಿಯಲ್ಲಿ ಇಂದು ಎಲ್ಲಾ ರಾಜ್ಯಗಳ ಪಂಚಾಯತ ರಾಜ್ ಸಚಿವರ, ಪ್ರಧಾನ ಕಾರ್ಯದರ್ಶಿಗಳ, ಅಖಿಲ ಭಾರತ ಸಮ್ಮೇಳನದಲ್ಲಿ ಅವರು ಇಂದು ಮಾತನಾಡುತ್ತಿದ್ದರು.

hk-patil-conference

ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ಕರ್ನಾಟಕ ಗ್ರಾಮ ಸ್ವರಾಜ್ ಕಾಯ್ದೆಯ ಸ್ವರೂಪ ಬದಲಾವಣೆ ಮಾಡಿ ತಂದಿರುವ ಕ್ರಾಂತಿಕಾರಕ ಬದಲಾವಣೆಗಳನ್ನು ಒಂದೊಂದಾಗಿ ಪಟ್ಟಿ ಮಾಡಿದ ಸಚಿವರು ಅಧಿಕಾರದ ವಿಕೇಂದ್ರಿಕರಣದಲ್ಲಿ ಇಂತಹ ಕ್ರಾಂತಿಕಾರಕ ಕಾನೂನೊಂದನ್ನು ಜಾರಿಗೆ ತಂದಿರುವ ಕೀರ್ತಿ ಕರ್ನಾಟಕ ರಾಜ್ಯದ್ದು ಎಂಬುದನ್ನು ಅತ್ಯಂತ ತೃಪ್ತಿದಾಯಕವಾಗಿ ಮತ್ತು ಹೆಮ್ಮೆಯಿಂದ ಹೇಳುವುದಾಗಿ ತಿಳಿಸಿದರು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಪಂಚಾಯತಿಗಳಿಗೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಅಧಿಕಾರಗಳನ್ನು ನೀಡುವ ನಿಟ್ಟಿನಲ್ಲಿ ಹೊಸ ಸ್ವರೂಪದ ಗ್ರಾಮಸ್ವರಾಜ್ ಕಾಯ್ದೆಯನ್ನು ಅನುಷ್ಠಾನಗೊಳಿಸಿದೆ ಎಂದು ಸಚಿವರು ವಿವರಿಸಿದರು. ರಾಷ್ಟ್ರದಲ್ಲಿಯೇ ಮೊಟ್ಟಮೊದಲ ಬಾರಿಗೆ ಪಂಚಾಯತ ಆಡಳಿತದಲ್ಲಿ ಪಂಚಾಯತಿ ನೀತಿಯ ನಿರ್ದೇಶನಾ ತತ್ವಗಳು ಜಾರಿಗೆ ತಂದಿದ್ದು ಪಂಚಾಯತಿ ಸದಸ್ಯರು ಮತ್ತು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹೊಣೆಗಾರಿಕೆ ಮತ್ತು ಕರ್ತವ್ಯಗಳನ್ನು ಪಟ್ಟಿ ಮಾಡಿದ ಮೊಟ್ಟಮೊದಲ ರಾಜ್ಯ ಕರ್ನಾಟಕ ಎಂದು ಎಲ್ಲಾ ರಾಜ್ಯಗಳ ಕರತಾಡನದ ಮಧ್ಯ ಘೋಷಿಸಿದರು. ಗ್ರಾಮೀಣ ಬದುಕಿನಲ್ಲಿ ಸ್ವಾವಲಂಬಿ, ಪರಸ್ಪರ ಗೌರವ-ಘನತೆ ಕಾಪಾಡುವ ಸಮಾನತೆಯನ್ನು ಸುನಿಶ್ಚಿತಗೊಳಿಸುವ ಪಾರದರ್ಶಕ ವ್ಯವಸ್ಥೆಯನ್ನು ಪಾಲ್ಗೊಳ್ಳುವಿಕೆಯ ಮೂಲಕ ಅನುಷ್ಠಾನಗೊಳಿಸುವ ಮತ್ತು ಕುಂದುಕೊರತೆ ನಿವಾರಣೆಗೆ ಸ್ಪಂದನಶೀಲ ಕಾರ್ಯವಿಧಾನ ಕಲ್ಪಿಸುವ ವ್ಯವಸ್ಥೆ ರೂಪಿಸಿ ಗ್ರಾಮೀಣ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರುವ ದಿಸೆಯಲ್ಲಿ ಈ ತಿದ್ದುಪಡಿ ಪ್ರಮುಖ ಅಸ್ತ್ರವಾಗಿದೆ ಎಂದು ಮಾನ್ಯ ಸಚಿವರು ತಿಳಿಸಿದರು. ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಜನವಸತಿ ಸಭೆ ಮತ್ತು ವಾರ್ಡ್ ಸಭೆಗಳನ್ನು ಹಾಗೂ ಕಂದಾಯ ಗ್ರಾಮಕ್ಕೊಂದು ಗ್ರಾಮ ಸಭೆಗಳನ್ನು ಜಾರಿಗೆ ತರುವ ಮೂಲಕ ಇಡೀ ಗ್ರಾಮೀಣ ಆಡಳಿತವನ್ನು ಪಾರದರ್ಶಕಗೊಳಿಸಲಾಗಿದೆ ಎಂದು ಮಾನ್ಯ ಸಚಿವರು ಅಭಿಪ್ರಾಯ ಪಟ್ಟರು.

ಕರ್ನಾಟಕ ರಾಜ್ಯವು 14ನೇ ಹಣಕಾಸು ಆಯೋಗದ ಅನುದಾನವನ್ನು ಜನಸಂಖ್ಯೆ ಮತ್ತು ಭೌಗೋಳಿಕ ಪ್ರದೇಶದ ಆಧಾರದ ಮೇಲೆ 90:10 ಅನುಪಾತದಲ್ಲಿ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯದ ವಿಷಯಗಳನ್ನು ಆಧ್ಯತಾ ವಲಯವೆಂದು ಪರಿಗಣಿಸಲಾಗಿದೆ. ಪ್ರಾಶಸ್ತ್ಯದ ಆಧಾರದಲ್ಲಿ ರಸ್ತೆಗಳು, ಒಳಚರಂಡಿ, ಬೀದಿ ದೀಪ ಮತ್ತು ಸ್ಮಶಾನಗಳ ಅಭಿವೃದ್ಧಿ ಮುಂತಾದವುಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ಯೋಜನೆಗಳ ಅನುಷ್ಠಾನದಲ್ಲಿ ಮತ್ತು ಆಡಳಿತದಲ್ಲಿ ಆಧುನಿಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವ ಗ್ರಾಮ ಪಂಚಾಯತಿಗಳಿಗೆ ಶೇ. 10ರಷ್ಟು ಹೆಚ್ಚುವರಿ ಅನುದಾನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಅಖಿಲ ಭಾರತ ಸಮ್ಮೇಳನದಲ್ಲಿ ತಿಳಿಸಿದರು.

ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳು ತಮ್ಮದೇ ಆದ ನಮ್ಮಗ್ರಾಮ-ನಮ್ಮ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಿಯಾ ಯೋಜನೆಯೊಂದನ್ನು ಸಿದ್ದಪಡಿಸಿ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ತಿಳಿಸಲಾಗಿದ್ದು, ಅದರಂತೆ ಎಲ್ಲಾ ಗ್ರಾಮ ಪಂಚಾಯತಿಗಳು ಅಗತ್ಯದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಆಗಸ್ಟ್ ಕ್ರಾಂತಿಯ ಐತಿಹಾಸಿಕ ದಿನವಾದ 9ನೇ ಆಗಸ್ಟ್-2016 ರಂದು ಅನುಷ್ಠಾನಕ್ಕೆ ತರುವ ಮೂಲಕ ಕ್ರಾಂತಿಕಾರಕ ಇತಿಹಾಸಕ್ಕೆ ನಾಂದಿ ಆಗಲಿದೆ ಎಂದು ಸಚಿವರು ಸಭೆಗೆ ತಿಳಿಸಿದರು. ಈ ಯೋಜನೆಗಳ ಸಿದ್ಧತೆಗೆ ಈಗಾಗಲೇ 31 ವಿವಿಧ ಚಟುವಟಿಕೆಗಳನ್ನು ಗುರುತಿಸಲಾಗಿದ್ದು ಅಗತ್ಯ ಕ್ರಮ ಕೈಗೊಳ್ಳಲು ವೆಳಾಪಟ್ಟಿಯನ್ನು ಸಿದ್ದಪಡಿಸಿ ಗ್ರಾಮ ಪಂಚಾಯತಿಗಳಿಗೆ ಕಳುಹಿಸಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಷಯಗಳ ವಿಶ್ವವಿದ್ಯಾಲಯವು ಇದೇ ಶೈಕ್ಷಣಿಕ ವರ್ಷದಿಂದ ಗದಗ ನಗರದಲ್ಲಿ ಪ್ರಾರಂಭವಾಗುತ್ತಿದೆ. ಗ್ರಾಮೀಣಾಭಿವೃದ್ಧಿ ವಿಷಯಗಳ ಅಧ್ಯಯನಕ್ಕೆ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ ಎಂದು ಸಚಿವರು ಹೆಮ್ಮೆ ಪಟ್ಟರು. ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶಾಸನಾತ್ಮಕ ಬೆಂಬಲ ನೀಡಿದ ರಾಜ್ಯ ಕರ್ನಾಟಕ. ಸಮಗ್ರ ಶಾಸನದ ಸ್ವರೂಪ ಬದಲಾಯಿಸುವ ಮೂಲಕ ಪಂಚಾಯತಿಗಳು ತನ್ನ ವ್ಯಾಪ್ತಿಯ ನಾಗರೀಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿ ನಿಲ್ಲಲು ಹಾಗೂ ನಾಗರೀಕರ ಬೇಕು ಬೇಡಗಳಿಗೆ ಸ್ಪಂದಿಸಲು ಆಡಳಿತದ ವಿವಿಧ ಇಲಾಖೆಗಳ ನಡುವಿನ ಸಂಪರ್ಕದ ಕೊಂಡಿಯಾಗಿ ಕಾರ್ಯನಿರ್ವಹಿಸುವಂತಹ ಶಾಸನಾತ್ಮಕ ಅವಕಾಶ ಒದಗಿಸಲಾಗಿದೆ ಎಂದು ಸಚಿವರು ಪ್ರಕಟಿಸಿದರು. ಈ ಹೊಸ ಸ್ವರೂಪದ ಶಾಸನದ ಮೂಲಕ ಗ್ರಾಮೀಣ ಜನರನ್ನು ಅಧಿಕಾರಯುಕ್ತರನ್ನಾಗಿ ಮಾಡುವ ಮತ್ತು ಧ್ವನಿಯಿಲ್ಲದ ಸಣ್ಣ ಸಣ್ಣ ಜನವಸತಿಗಳ ಗ್ರಾಮೀಣರಿಗೂ ಸಹಾ ಜನವಸತಿ ಸಭೆಯ ಹೊಸ ಪ್ರಯೋಗ ಮಾಡುವ ಮೂಲಕ ಮತ್ತು ವಾರ್ಡ್ ಸಭೆಗಳ ಮೂಲಕ ಹೆಚ್ಚಿನ ಧ್ವನಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

Leave a Reply

Please enter your comment!
Please enter your name here