ಸಮಾಜ ಸೇವಕ, ಆ್ಯಗ್ನಲ್ ಅಡ್ವೆಂಚರ್ ನ ಆ್ಯಗ್ನೆಲ್ ರಾಡ್ರಿಗಸ್ ನಿಧನ

 ಆ್ಯಗ್ನಲ್ ಅಡ್ವೆಂಚರ್ ನ ಆ್ಯಗ್ನೆಲ್ ರಾಡ್ರಿಗಸ್ ನಿಧನ

ಮಂಗಳೂರು: ಪತ್ರಕರ್ತ, ಸ್ಥಳೀಯ ಸುದ್ದಿ ವಾಹಿನಿ ಕೋಸ್ಟಲ್ ಟೈಮ್ಸ್‍ನ ಆ್ಯಗ್ನೆಲ್ ರಾಡ್ರಿಗಸ್ (56) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

Agnel-rodrigues-20160626

ಅವರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ವರ್ಗವನ್ನು ಆಗಲಿದ್ದಾರೆ. ಕಳೆದ ಹತ್ತು ವರ್ಷಗಳಿಗೂ ಅಧಿಕ ಕಾಲ ಕೋಸ್ಟಲ್ ಟೈಮ್ಸ್ ಆಂಗ್ಲ ವಾಹಿನಿಯೊಂದಿಗೆ ಕೊಂಕಣಿ ಭಾಷೆಯ ಪ್ರಸಾರ ಕೊಂಕಣಿ ಸುದ್ದಿ ವಾಹಿನಿಯನ್ನು ಅವರು ನಡೆಸುತ್ತಿದ್ದರು. ಬಿಜೈ ನಿವಾಸಿಯಾಗಿದ್ದ ಅವರು ಆ್ಯಗ್ನಲ್ ಅಡ್ವೆಂಚರ್ ಎಂಬ ಸಂಸ್ಥೆಯನ್ನು ಕೂಡಾ ನಡೆಸುತ್ತಿದ್ದರು.

ಮಂಗಳೂರು ಪ್ರೆಸ್‍ಕ್ಲಬ್ ಕಾರ್ಯದರ್ಶಿ ಹಾಗೂ ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಅವರು ವಿವಿಧ ಸಂಘ ಸಂಸ್ಥೆಗಳ ಮೂಲಕ ಸಮಾಜ ಸೇವೆಯಲ್ಲೂ ತೊಡಗಿದ್ದರು.

ಲಯನ್ಸ್‍ನಲ್ಲಿ ಸಕ್ರಿಯರಾಗಿದ್ದ ಆ್ಯಗ್ನೆಲ್ ಲಯನ್ಸ್ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದರು. ಕೋಸ್ಟಲ್ ಟೈಮ್ಸ್ ಮೂಲಕ `ರಿವರ್ಸ್ ಡ್ರೈವಿಂಗ್’ ಕುರಿತು ಕಾರ್ಯಕ್ರಮ ಹಮ್ಮಿಕೊಂಡು ಸಾರಿಗೆ ನಿಯಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು.

ಉತ್ತಮ ಕಲಾವಿದರಾಗಿದ್ದ ಅವರು ಕನ್ನಡ ಮತ್ತು ತುಳು ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. `ವರನಟ’ ಡಾ. ರಾಜ್ ಕುಮಾರ್ ಜತೆಗೆ ನಟಿಸಿದ್ದ ಅವರು, ತುಳು ಚಿತ್ರಗಳಾದ ಚಾಲಿಪೋಲಿಲು, ಮದಿಮೆ, ಒರಿಯರ್ದೊರಿ ಅಸಲ್, ನಮ್ಮ ಕುಡ್ಲ, ತೆಲಿಕೆದ ಬೊಳ್ಳಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

ಕೊಂಕಣಿ ಸಾಹಿತ್ಯ ಅಕಾಡೆಮಿ, ದ. ಕ. ಜಿಲ್ಲಾ ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳಿಂದ ಅವರು ಪುರಸ್ಕತರಾಗಿದ್ದರು.

ಆ್ಯಗ್ನಲೆ ನಿಧನಕ್ಕೆ ಪತ್ರಿಕಾ ಭವನ ಟ್ರಸ್ಟ್, ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‍ಕ್ಲಬ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.

Leave a Reply

Please enter your comment!
Please enter your name here