ಪ್ರಶಾಂತ್ ಕೊಲೆ ಆರೋಪಿಗಳ ಬಂಧನಕ್ಕೆ ಮುನೀರ್ ಕಾಟಿಪಳ್ಳ ಆಗ್ರಹ

ಭಜರಂಗದಳದ ಕಾರ್ಯಕರ್ತ, ಮೂಡಬಿದ್ರೆಯ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
ನಡುಬೀದಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳನ್ನು ಕೊಲೆಯಾದ ವಾರದ ನಂತರವೂ ಪತ್ತೆ ಹಚ್ಚಲು ಸಾಧ್ಯವಾಗದಿರುವುದು ನಾಗರಿಕ ವಲಯದಲ್ಲಿ ಭೀತಿಯ ವಾತಾವರಣವನ್ನು ಉಂಟು ಮಾಡಿದೆ. ಈ ಹಿಂದೆಯೂ ಕೋಮುದ್ವೇಷದಿಂದ ಎನ್ನಲಾದ ಸರಣಿ ಪ್ರತೀಕಾರದ ಕೊಲೆಗಳು ನಡೆದಿತ್ತು. ಆಗೆಲ್ಲ ಪ್ರಕರಣದ ಆಳಕ್ಕಿಳಿದು ಸೂತ್ರಧಾರಿಗಳನ್ನು ಕಂಡುಹಿಡಿಯುವಲ್ಲಿ ಪೊಲೀಸ್ ಇಲಾಖೆ ವಿಫಲವಾದುದರಿಂದ ಜಿಲ್ಲೆಯ ಜನತೆ ಅಪಾರವಾದ ಬೆಲೆ ತೆರುವಂತಾಗಿತ್ತು. ಪ್ರಶಾಂತ್ ಪೂಜಾರಿ ಕೊಲೆಯು ಮತೀಯ ಪ್ರತೀಕಾರದ ಕೊಲೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಮೂಡಬಿದ್ರೆ ಪರಿಸರದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗಿದೆ. ಅಲ್ಪಸಂಖ್ಯಾತರು ಆತಂಕಗೊಂಡಿದ್ದಾರೆ. ಬಿಜೆಪಿ ಈ ಪ್ರಕರಣವನ್ನು ರಾಜಕೀಯ ದಾಳವನ್ನಾಗಿಸುತ್ತಿದ್ದು, ಜನರ ಭಾವನೆಯನ್ನು ಕೆರಳಿಸುತ್ತಿದೆ. ಮತೀಯ ಸಾಮರಸ್ಯಕ್ಕೆ ಹುಳಿ ಹಿಂಡುತ್ತಿದೆ. ಇದು ತೀರಾ ಖಂಡನೀಯ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ರಾಜಕೀಯದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಕೊಲೆಯ ಹಿಂದಿರುವ ಎಲ್ಲಾ ಶಕ್ತಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಜಿಲ್ಲೆಯ ಜನಸಾಮಾನ್ಯರು ಯಾವುದೇ ಪ್ರಚೋದನೆಗಳಿಗೆ ಒಳಗಾಗದೆ ಶಾಂತಿಯನ್ನು ಕಾಪಾಡಬೇಕೆಂದು ಮನವಿ ಮಾಡಿದ್ದಾರೆ.

Leave a Reply

Please enter your comment!
Please enter your name here