ಬಂಟ್ವಾಳ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಇಬ್ಬರ ಬಂಧನ

ಬಂಟ್ವಾಳ: ಬಂಟ್ವಾಳ ಮೂಲದ ಬಾಲಕಿಯೊಬ್ಬಳನ್ನು ಅಪಹರಣ ಮಾಡಿ, ಅತ್ಯಾಚಾರ ಎಸಗಿದ ಆರೋಪಿಗಳಿಬ್ಬರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಕಲೇಶಪುರ ನಿವಾಸಿ ಮಂಜು (20) ಹಾಗೂ ಮೀನು ವ್ಯಾಪಾರಿ ಖಾಸಿಂ (41) ಬಂಧಿತರು. ಆರೋಪಿಗಳ ವಿರುದ್ಧ ಪೋಕ್ಸೋ ಕಾಯಿದೆ ಪ್ರಕಾರ ಅತ್ಯಾಚಾರ ಪ್ರಕರಣ ಹೂಡಲಾಗಿದ್ದು, ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ ತಿಳಿಸಿದ್ದಾರೆ.

ಕಾಲೇಜೊಂದರಲ್ಲಿ ಕಲಿಯುತ್ತಿದ್ದ ಬಾಲಕಿ, ಜು.7ರಂದು ಅಂಕ ಪಟ್ಟಿಯನ್ನು ತರಲೆಂದು ಕಾಲೇಜಿಗೆ ತೆರಳಿದ್ದಳು. ಆಕೆಯನ್ನು ಚೆನ್ನೈತ್ತೋಡಿ ಗ್ರಾಮದ ವಾಮದಪದವು ಎಂಬಲ್ಲಿಂದ ಅಪಹರಿಸಲಾಗಿದೆ ಎಂದು ಬಾಲಕಿಯ ತಾಯಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.

ಮಂಜು ಎಂಬಾತನ ಮೇಲೆ ಸಂಶಯ ವ್ಯಕ್ತಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ಮೊಬೈಲ್ ನೆಟ್‌ವರ್ಕ್ ಆಧಾರದಲ್ಲಿ ಆರೋಪಿಯನ್ನು ಮೂಡಿಗೆರೆಯ ಬಿಳಗುಲ ಎಂಬಲ್ಲಿ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ ಹಾಗೂ ಸಿಬ್ಬಂದಿಗಳಾದ ಲಕ್ಷ್ಮಣ್, ಜಗದೀಶ್ ಬಂಧಿಸಿದ್ದಾರೆ. ಬಾಲಕಿಯನ್ನು ಪತ್ತೆ ಹಚ್ಚಲಾಗಿದ್ದು, ಬಂಟ್ವಾಳಕ್ಕೆ ಕರೆ ತರಲಾಗಿದೆ.

ಅಪಹರಣ ಪ್ರಕರಣ ಬಳಿಕ ಪ್ರೇಮ ಪ್ರಕರಣವಾಗಿ ತಿರುವು ಪಡೆದಿತ್ತು. ಇಬ್ಬರೂ ಪರಸ್ಪರ ಪ್ರೀತಿಸಿದ್ದು, ಮದುವೆಗೆ ಮನೆ ಮಂದಿ ಒಪ್ಪಿಗೆ ಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಮದುವೆಯಾಗುವ ಉದ್ದೇಶದಿಂದ ಜತೆಯಲ್ಲಿ ತೆರಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿರುವ ಹಿನ್ನೆಲೆಯಲ್ಲಿ ಆರೋಪಿ ಮಂಜು ವಿರುದ್ಧ ಪೋಕ್ಸೋ ಕಾಯಿದೆಯನ್ವಯ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಆರೋಪಿಗೆ ನೆರವು ನೀಡಿದ ಆರೋಪದಲ್ಲಿ ಮೀನು ವ್ಯಾಪಾರಿ ಖಾಸಿಂ ವಿರುದ್ಧವೂ ಕೇಸ್ ದಾಖಲಿಸಲಾಗಿದೆ ಎಂದು ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ ತಿಳಿಸಿದ್ದಾರೆ.

 

Leave a Reply

Please enter your comment!
Please enter your name here