ಬಂಟ್ವಾಳ :ಬೈಕ್‌ಗಳೆರಡರ ನಡುವೆ ಅಪಘಾತ: ಓರ್ವ ಮೃತ್ಯು, ಇಬ್ಬರಿಗೆ ಗಾಯ

ಬಂಟ್ವಾಳ: ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ತುಂಬೆ ಗ್ರಾಮದ ರಾಮಲ್‌ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದೆ.
ಮೃತಪಟ್ಟವರನ್ನು ರಾಮಲ್‌ಕಟ್ಟೆ ನಿವಾಸಿ ಹುಸೈನ್‌ ಹಾಜಿ (75) ಎಂದು ಗುರುತಿಸಲಾಗಿದ್ದು, ಅವರ ಪುತ್ರ ಖಾದರ್‌ ಹಾಗೂ ತುಂಬೆಯ ನಿವಾಸಿ ಇಬ್ರಾಹೀಂ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಬಂಧಿಕರ ಮದುವೆಗೆಂದು ತೆರಳಿದ್ದ ಹುಸೈನ್‌ ಹಾಜಿ ತನ್ನ ಪುತ್ರನ ಬೈಕ್‌ನಲ್ಲಿ ರಾಮಲ್‌ಕಟ್ಟೆಯ ರಸ್ತೆ ವಿಭಜಕದ ಬಳಿ ನಿಂತಿದ್ದ ವೇಳೆ ತುಂಬೆ ಕಡೆಯಿಂದ ಇಬ್ರಾಹೀಂ ಎಂಬವರು ಚಲಾಯಿಸಿಕೊಂಡ ಬಂದ ಬೈಕ್‌ ಢಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ರಭಸಕ್ಕೆ ಹುಸೈನ್‌ ಹಾಜಿ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ತಲೆಗೆ ತೀವ್ರ ಸರೂಪದ ಗಾಯವಾಗಿದೆ. ತಕ್ಷಣ ಸ್ಥಳೀಯರು ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಆಸ್ಪತ್ರೆ ತಲುಪುತ್ತಿದ್ದಂತೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಓರ್ವ ಗಾಯಾಳು ಖಾದರ್‌ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಇಬ್ರಾಹೀಂ ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Please enter your comment!
Please enter your name here