ಬಂಟ್ವಾಳ: ವಸತಿ ಶಾಲೆಯಲ್ಲಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಬಂಟ್ವಾಳ : ತಾಲೂಕಿನ ವಗ್ಗ ಸಮೀಪದ ಆಲಂಪುರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10ನೆ ತರಗತಿ ವಿದ್ಯಾರ್ಥಿ ಇಲ್ಲಿನ ಬಾಲಕರ
ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಾವಳಪಡೂರು ಗ್ರಾಮದ ಕೆಳಗಿನ ವಗ್ಗ ನಿವಾಸಿ ದಿ. ದೇವಣ್ಣ ನಾಯಕ್‌ರ ಪುತ್ರ ದೀಶಕ್‌(16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಶುಕ್ರವಾರ ಬೆಳಗ್ಗೆ ಎಂದಿನಂತೆ ಒಂಬತ್ತು ಗಂಟೆಗೆ ಶಾಲಾ ಸಮವಸ್ತ್ರ ಧರಿಸಿ ಎಲ್ಲ ವಿದ್ಯಾರ್ಥಿಗಳು ಬೆಳಗ್ಗಿನ ಉಪಾಹಾರ ಸೇವಿಸುತ್ತಿದ್ದಾಗ ದೀಶಕ್‌ ಕೂಡ ಸಮವಸ್ತ್ರ ಧರಿಸಿ ಕೊಠಡಿಯಿಂದ ಹೊರಬಂದಿದ್ದ. ಬಳಿಕ ಮತ್ತೆ ವಸತಿ ನಿಲಯದ ಕೊಠಡಿಗೆ ವಾಪಸ್ಸಾಗಿದ್ದಾನೆ. ಕೆಲ ಹೊತ್ತಿನ ಬಳಿಕ ವಿದ್ಯಾರ್ಥಿನಿಲಯದ ಕೊಠಡಿಯ ಫ್ಯಾನಿಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿ: ಕೆಳಗಿನ ವಗ್ಗ ನಿವಾಸಿ ದಿ. ದೇವಣ್ಣ ನಾಯಕ್‌ ಮತ್ತು ಶ್ಯಾಮಲ ಪ್ರಭು ದಂಪತಿಯ ಎರಡನೆ ಪುತ್ರನಾಗಿರುವ ದೀಶಕ್‌ 2ನೆ ತರಗತಿ ತನಕ ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿ ಬಳಿಕ ತನ್ನ ಮಾವನೊಂದಿಗೆ ಮುಂಬೈಗೆ ತೆರಳಿ ಅಲ್ಲೇ 5ನೆ ತರಗತಿ ಪೂರೈಸಿದ್ದಾನೆ ಎನ್ನಲಾಗಿದೆ. ಆ ಬಳಿಕ ಮತ್ತೆ ಊರಿಗೆ ಮರಳಿ ಮೊರಾರ್ಜಿ ವಸತಿ ಶಾಲೆಯಲ್ಲಿ 6ನೆ ತರಗತಿಗೆ ಸೇರ್ಪಡೆಗೊಂಡು ಪ್ರಸಕ್ತ 10ನೆ ತರಗತಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದನು. ಈತನ ಸಹೋದರ ದೀಪಕ್‌, ಕಲ್ಲಡ್ಕದ ಕಾಲೇಜಿನಲ್ಲಿ ಪದವಿ ಕಲಿಯುತ್ತಿದ್ದಾನೆ. ದೀಶಕ್‌ನ ತಂದೆ ದೇವಣ್ಣ ನಾಯಕ್‌ ಎರಡು ವರ್ಷಗಳ ಹಿಂದೆಯಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ಶ್ಯಾಮಲರ ಎರಡು ಕಣ್ಣುಗಳಿಗೂ ದೃಷ್ಟಿ ಹೀನತೆ ಕಾಣಿಸಿಕೊಂಡ ಬಳಿಕ ಅಜ್ಜ ನಿವೃತ್ತ ಶಿಕ್ಷಕ ವಗ್ಗ ಗೋಪಾಲಕೃಷ್ಣ ಪ್ರಭುರ
ಸಲಹೆಯಂತೆ ಮೊರಾರ್ಜಿ ವಸತಿ ಶಾಲೆ ಸೇರಿಕೊಂಡಿದ್ದ ದೀಶಕ್‌ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಕ್ರಿಯಾಶೀಲ ವಿದ್ಯಾರ್ಥಿಯಾಗಿದ್ದ. ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್‌ ಕುಮಾರ್‌ ನೇತೃತ್ವದ ಪೊಲೀಸರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply