ಬರ ಪರಿಹಾರ ಕಾಮಗಾರಿ ಸಮರೋಪಾದಿಯಲ್ಲಿ ನಡೆಯಲಿ : ಸಿದ್ದರಾಮಯ್ಯ

ಬೀದರ್: ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ಲೋಪವಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬರ ಪರಿಹಾರ ಕಾಮಗಾರಿ ಸಮರೋಪಾದಿಯಲ್ಲಿ ನಡೆಯಬೇಕು. ಈ ವಿಷಯದಲ್ಲಿ ಕುಂಟು ನೆಪಗಳನ್ನು ಹೇಳಿದರೆ ಸಹಿಸಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಇಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಆರಂಭಿಸಿರುವ ಮುಖ್ಯಮಂತ್ರಿಗಳು ಇಂದು ಬೀದರ್‍ ಜಿಲ್ಲೆಯಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಹಳ್ಳಿಗಳಿಗೆ ಹೋಗಿ ಜಾನುವಾರುಗಳಿಗೆನೀರು, ಮೇವು ಇದೆಯೋ ಇಲ್ಲವೋ ಎಂಬುದನ್ನು ಅಧಿಕಾರಿಗಳು ನೋಡಬೇಕು. ಅಗತ್ಯ ಇರುವ ಕಡೆ ಗೋಶಾಲೆ ತೆರೆಯಬೇಕು. ಹೊರ ರಾಜ್ಯಗಳಿಗೆ ಮೇವು ಸಾಗಣೆ ನಿಷೇಧಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಕೆಲಸ ಮಾಡಿದ ತಕ್ಷಣ, ಮೂರು ದಿನದೊಳಗೆ ಹಣ ನೀಡಬೇಕು. ಬಾಕಿ ಬಿಲ್ಲುಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಜನರಿಗೆ ಕುಡಿಯುವ ನೀರು ಸಿಗುವಂತಾಗಬೇಕು, ಜಾನುವಾರುಗಳಿಗೆ ಮೇವು, ನೀರು ಮತ್ತು ಔಷಧಿಗಳನ್ನು ಒದಗಿಸುವ ಬಗ್ಗೆ ಅಧಿಕಾರಿಗಳು ಗಮನ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಮತ್ತು ಕನ್ನಡ ಮತ್ತು ಸಂಸ್ಕೃತಿ ಹಾಗೂ ಬೀದರ್‍ ಜಿಲ್ಲೆಯ ಉಸ್ತುವಾರಿ ಸಚಿವೆ ಉಮಾಶ್ರೀ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್‍ ಜಾದವ್‍ ಅವರುಗಳು ಉಪಸ್ಥಿತರಿದ್ದರು.

Leave a Reply