ಬಿಪಿಎಲ್ ಕಾರ್ಡು ರದ್ದು: ಪುನರ್‍ಪರಿಶೀಲನೆಗೆ ಉಸ್ತುವಾರಿ ಸಚಿವರ ಸೂಚನೆ

Spread the love

ಬಿಪಿಎಲ್ ಕಾರ್ಡು ರದ್ದು: ಪುನರ್‍ಪರಿಶೀಲನೆಗೆ ಉಸ್ತುವಾರಿ ಸಚಿವರ ಸೂಚನೆ

ಮಂಗಳೂರು: ಜಿಲ್ಲೆಯಲ್ಲಿ ಪಡಿತರ ಚೀಟಿದಾರರಿಗೆ ವಿಳಂಭವಿಲ್ಲದೆ, ತಿಂಗಳ ಆರಂಭದಲ್ಲಿ ಪಡಿತರ ಸಾಮಾಗ್ರಿ ವಿತರಣೆಯಾಗಬೇಕು ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸೂಚಿಸಿದ್ದಾರೆ.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲಿಸಿ ಮಾತನಾಡುತ್ತಿದ್ದರು. ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸುವ ಸಂದರ್ಭದಲ್ಲಿ ಅರ್ಹರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗಮನಹರಿಸಲು ಸಚಿವರು ಸೂಚಿಸಿದರು ಬಂಟ್ವಾಳ ತಾಲೂಕಿನಲ್ಲಿ ಅತೀ ಹೆಚ್ಚು ಬಡ ಕೂಲಿ ಕಾರ್ಮಿಕರಿದ್ದು ಹೆಚ್ಚು ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಿರುವುದಕ್ಕೆ ಸಚಿವರು ಕಳವಳ ವ್ಯಕ್ತ ಪಡಿಸಿದರು. ಈ ಬಗ್ಗೆ  ಪುನರ್‍ಪರಿಶೀಲಿಸಿ ಅರ್ಹರಿಗೆ ಬಿಪಿಎಲ್ ಪಡಿತರ ಕಾರ್ಡುಗಳನ್ನು ವಿತರಿಸುವಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಎಲ್ಲ ಬಿಪಿಎಲ್ ಪಡಿತರ ಚೀಟಿದಾರರಿಗೂ ಗ್ಯಾಸ್ ಸಂಪರ್ಕ ನೀಡಿ, ಸೀಮೆ ಎಣ್ಣೆ ಮುಕ್ತ ಗ್ರಾಮಗಳಾಗಿ ಪರಿವರ್ತಿಸಲು ಅವರು ಸಲಹೆ ನೀಡಿದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ರಾಜು ಮೊಗವೀರ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಈವರೆಗೆ ಅನ್‍ಲೈನ್ ಮೂಲಕ ಹೊಸ ಪಡಿತರ ಚೀಟಿಗಾಗಿ ಎಪಿಎಲ್ 9249, ಬಿಪಿಎಲ್ 27396 ಸೇರಿ  ಒಟ್ಟು 36645 ಅರ್ಜಿಗಳು ಸ್ವೀಕೃತವಾಗಿದ್ದು, ಎಪಿಎಲ್ 500 ಬಿಪಿಎಲ್ 974 ಸೇರಿ ಒಟ್ಟು 1474 ಪಡಿತರ ಚೀಟಿಗಳನ್ನು ಮುದ್ರಿಸಿ ವಿತರಣೆಗೆ ಸಿದ್ದಪಡಿಸಲಾಗಿದೆ. ಇಲ್ಲಿಯವರೆಗೆ ಎಪಿಎಲ್ 7261 ಮತ್ತು ಬಿಪಿಎಲ್ 22547 ಸೇರಿ ಒಟ್ಟು 14098 ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಶೇಕಡಾ 61.52 ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

ಈವರೆಗೆ ಜಿಲ್ಲೆಯಲ್ಲಿ ವಿದ್ಯುತ್ ಬಿಲ್ಲು ಆಧಾರದ ಮೇಲೆ 4224 ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಮಂಗಳೂರು ತಾಲೂಕಿನಲ್ಲಿ 1150, ಪುತ್ತೂರಿನಲ್ಲಿ 504, ಬಂಟ್ವಾಳದಲ್ಲಿ 2020 ಬೆಳ್ತಂಗಡಿಯಲ್ಲಿ 400, ಸುಳ್ಯದಲ್ಲಿ 150 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. 2015-16ನೇ ಸಾಲಿನಲ್ಲಿ ಸಿಎಸ್‍ಆರ್ ಯೋಜನೆಯಡಿ ಜಿಲ್ಲೆಯಲ್ಲಿ ನಗರ ಪ್ರದೇಶದವರಿಗೆ 7890, ಗ್ರಾಮಾಂತರ 30352 ಒಟ್ಟು. 38242  ಗ್ಯಾಸ್ ಸಂಪರ್ಕ ನೀಡಲಾಗಿದೆ. ಇನ್ನು ಬಾಕಿ ಉಳಿದವರಿಗೆ ಶೀರ್ಘದಲ್ಲಿ ಗ್ಯಾಸ್ ಸಂಪರ್ಕ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಒಟ್ಟು 477 ನ್ಯಾಯಬೆಲೆ ಅಂಗಡಿಗಳಿದ್ದು, ಸಮರ್ಪಕವಾಗಿ ಆಹಾರ ಪದಾರ್ಥಗಳ ವಿತರಣೆ ಆಗುತ್ತಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಅಪರ ಜಿಲ್ಲಾಧಿಕಾರಿ ಕುಮಾರ್ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಎಲ್ಲ ತಾಲೂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love