ಬೆಂಗಳೂರು:ಕರ್ನಾಟಕದಲ್ಲಿ ಮ್ಯಾಗಿ ನೂಡಲ್ಸ್ ಗೆ ತಾತ್ಕಾಲಿಕ ನಿಷೇಧ : ಯುಟಿ ಖಾದರ್

ಬೆಂಗಳೂರು: ವಿಷಕಾರಿ ಅಂಶ ಕಂಡುಬಂದ ಹಿನ್ನಲೆಯಲ್ಲಿ ನೆಸ್ಲೆ ಸಂಸ್ಥೆಯ ವಿವಾದಿತ ಮ್ಯಾಗಿ ನೂಡಲ್ಸ್ ಅನ್ನು ಕರ್ನಾಟಕದಲ್ಲೂ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

UT-Khader-maggi-noodles

ದೆಹಲಿ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶಗಳು ಪತ್ತೆಯಾದ ಹಿನ್ನಲೆಯಲ್ಲಿ ರಾಜ್ಯಗಳಿಗೆ ಸೂಚನೆ ನೀಡಿದ್ದ ಕೇಂದ್ರ ಸರ್ಕಾರ ಮ್ಯಾಗಿ ಉತ್ಪನ್ನವನ್ನು ತಾತ್ಕಾಲಿಕವಾಗಿ ನಿಷೇಧಿಸುವಂತೆ ಸೂಚನೆ ನೀಡಿದ್ದು, ಅದರನ್ವಯ ಕರ್ನಾಟಕದಲ್ಲಿ ಮ್ಯಾಗಿ ಉತ್ಪನ್ನ ಮತ್ತು ಉತ್ಪಾದನೆಯ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.

ಈಗಾಗಲೇ ನಂಜನಗೂಡಿನಲ್ಲಿ ಮ್ಯಾಗಿ ನೂಡಲ್ಸ್ ತಯಾರಿಕಾ ಘಟಕವನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯದಲ್ಲಿ ಮ್ಯಾಗಿ ನೂಡಲ್ಸ್ ಗೆ ನಿಷೇಧ ಹೇರಲಾಗಿದೆ. ಈ ಬಗ್ಗೆ  ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವ ಯುಟಿ ಖಾದರ್ ಅವರು, ತಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ನಾಟಕದಲ್ಲಿ ಮ್ಯಾಗಿ ನೂಡಲ್ಸ್ ಉತ್ಪನ್ನವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರದ ಆಹಾರ ಭದ್ರತಾ ಇಲಾಖೆ ನೀಡಿದ್ದ ಸೂಚನೆಯ ಹಿನ್ನಲೆಯಲ್ಲಿ ಈ ನಿಷೇಧ ಹೇರಲಾಗಿದೆ ಎಂದು ಅವರು ತಿಳಿಸಿದರು.

ಅಲ್ಲದೆ ನಂಜನಗೂಡಿನಲ್ಲಿರುವ ಮ್ಯಾಗಿ ಸಂಸ್ಥೆಯ ತಯಾರಿಕಾ ಘಟಕವನ್ನು ಸ್ಥಗಿತಗೊಳಿಸುವಂತೆ ನೆಸ್ಲೆ ಸಂಸ್ಥೆಗೆ ಸೂಚಿಸಲಾಗಿದ್ದು, ಮಾಲ್ ಗಳು ಮತ್ತು ಇತರೆ ಅಂಗಡಿಗಳಲ್ಲಿರುವ ಮ್ಯಾಗಿ ಉತ್ಪನ್ನಗಳನ್ನು ವಾಪಸ್ ಪಡೆಯುವಂತೆ ಹೇಳಲಾಗಿದೆ. ಅಂಗಡಿ ಮಾಲೀಕರು ತಾವಾಗಿಯೇ ಮ್ಯಾಗಿ ಉತ್ಪನ್ನವನ್ನು ವಾಪಸ್ ನೀಡಬೇಕು. ಆಂಗಡಿ ಮಾಲ್ ಇತರೆ ಮಾರಾಟ ಪ್ರದೇಶಗಳಲ್ಲಿ ಮ್ಯಾಗಿ ಮಾರಾಟ ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆ.ಇದಕ್ಕಾಗಿ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗಿದ್ದು,  ಆಹಾರ ಭದ್ರತಾ ಇಲಾಖೆಯ ಅಧಿಕಾರಿಗಳು ಮತ್ತು ಡಿಹೆಚ್ ಓ ಅಧಿಕಾರಿಗಳು ಅವರ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ವೀಕ್ಷಣೆ ಮಾಡುತ್ತಾರೆ. ಈ ವೇಳೆ ಅಕ್ರಮವಾಗಿ ಮ್ಯಾಗಿ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನಾಗಲಿ ಅಥವಾ ದಾಸ್ತಾನು ಇಟ್ಟಿರುವುದು ಕಂಡಬಂದರೆ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಾದರ್ ಸ್ವಷ್ಟಪಡಿಸಿದರು.

ಪ್ರಸ್ತುತ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಮ್ಯಾಗಿ ಉತ್ಪನ್ನವನ್ನು ನಿಷೇಧಿಸಲಾಗಿದ್ದು, ರಾಜ್ಯ ಸರ್ಕಾರ ಕೂಡ ಮ್ಯಾಗಿ ಉತ್ಪನ್ನದ ಪರೀಕ್ಷೆ ನಡೆಸುತ್ತಿದೆ. ಹೀಗಾಗಿ ಉತ್ಪನ್ನದ ಬಗ್ಗೆ ಕೇಂದ್ರ ಸರ್ಕಾರ ಮುಂದಿನ ಆದೇಶ ನೀಡುವವರೆಗೂ ಮ್ಯಾಗಿ ಮೇಲಿನ ನಿಷೇಧ ಮುಂದುವೆರಯುತ್ತದೆ ಎಂದು ತಿಳಿಸಿದರು.

Leave a Reply