ಬೆಂಗಳೂರು: ನಾಳೆ ರಾಜ್ಯ ಬಂದ್

ಬೆಂಗಳೂರು: ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡ ಚಳವಳಿಯು ಸೆ. 26 ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, ರಾಜ್ಯದ 1200ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ.

ಕಾವೇರಿ ಹೋರಾಟವಾದರೆ ಮಾತ್ರ ಕರ್ನಾಟಕ ಬಂದ್ ಆಗುತ್ತದೆ, ಉತ್ತರ ಕರ್ನಾಟಕದಲ್ಲಿ ಹೋರಾಟ ನಡೆದರೆ ಪ್ರತಿಕ್ರಿಯೆ ಇರುವುದಿಲ್ಲ ಎಂಬ ಅಪನಂಬಿಕೆ ಉತ್ತರ ಕರ್ನಾಟಕದ ಜನರಲ್ಲಿತ್ತು. ಈಗ ಅದನ್ನು ನಿವಾರಿಸಲು ಪಕ್ಷಾತೀತವಾಗಿ ಬಂದ್ ಆಚರಿಸಲು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಬಂದ್‍ಗೆ ಕರೆ ನೀಡಿದ್ದಾರೆ.

ಶನಿವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆ ವರೆಗೆ ಬಂದ್ ಆಚರಣೆಯಾಗಲಿದ್ದು, ಬೆಂಗಳೂರಿನ ಟೌನ್ ಹಾಲ್‍ನಿಂದ ಫ್ರೀಡಂಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಬಂದ್ ದಿನ ಜನಜೀವನಕ್ಕೆ ತೊಡಕಾಗುವ ಸಾಧ್ಯತೆಗಳಿವೆ. ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸುವ ಕುರಿತು ಆದೇಶ ಬಂದಿಲ್ಲ. ಚಿತ್ರೋದ್ಯಮ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳೂ ಬಂದ್ ಆಗಲಿವೆ. ಸರಕು ಸಾಗಣೆ ವಾಹನಗಳ ಸಂಚಾರವೂ ಇರದ ಕಾರಣ ತರಕಾರಿ ಪೂರೈಕೆ ಸ್ಥಗಿತಗೊಳ್ಳಲಿದೆ. ಆದರೆ, ಆಸ್ಪತ್ರೆ, ಔಷಧಿ ಅಂಗಡಿ, ಆ್ಯಂಬುಲೆನ್ಸ್‍ಗೆ ಯಾವುದೇ ಸಮಸ್ಯೆಯಿಲ್ಲ.

ಸಾರಿಗೆ ಸಂಚಾರವೂ ಇರದು: ಶನಿವಾರದ ಬಂದ್‍ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ನಾಲ್ಕೂ ಒಕ್ಕೂಟಗಳು ಬೆಂಬಲ ಸೂಚಿಸಿವೆ. ಅಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ. ಅಂದು ಬಿಎಂಟಿಸಿ, ಕೆಎಸ್ ಆರ್‍ಟಿಸಿ, ಎನ್‍ಡಬ್ಲ್ಯೂ-ಕೆಎಸ್‍ಆರ್‍ಟಿಸಿ, ಎನ್‍ಇಕೆಎಸ್ ಆರ್‍ಟಿಸಿ ಬಸ್‍ಗಳ ಸಂಚಾರ ಇರುವುದಿಲ್ಲ. ಎಲ್ಲಾ ಸಿಬ್ಬಂದಿ ಬೆಳಗ್ಗೆ 10.30ಕ್ಕೆ ಪುರಭವನದ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ. ಕಬ್ಬು ಬೆಳೆಗಾರರ ಸಂಘ ಸೆಪ್ಟೆಂಬರ್ 5 ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿತ್ತು. ಅಂದು ಯಶಸ್ವಿಯಾಗಿದ್ದು, ಮತ್ತೆ ಬಂದ್ ಆಚರಿಸುವ ಅಗತ್ಯವಿಲ್ಲ. ಹಾಗಾಗಿ ನಾವು ಬೆಂಬಲ ನೀಡುತ್ತಿಲ್ಲ.

ಲಭ್ಯ

ಆಸ್ಪತ್ರೆ, ಔಷಧ ಅಂಗಡಿ, ಆ್ಯಂಬುಲೆನ್ಸ್, ಧಾರ್ಮಿಕ ಕೇಂದ್ರಗಳಿಗೆ ಪ್ರವೇಶ, ಮದುವೆ ಸಮಾರಂಭ ನಡೆಯಲು ಅಡ್ಡಿಯಿಲ್ಲ

ಅಲಭ್ಯ

ಬಸ್ , ಆಟೋರಿಕ್ಷಾ, ತರಕಾರಿ, ವಕೀಲರು ಕಲಾಪ ಬಹಿಷ್ಕರ, ಚಿತ್ರಮಂದಿರಗಳ ಪ್ರದರ್ಶನ ಇರುವುದಿಲ್ಲ.

Leave a Reply

Please enter your comment!
Please enter your name here