ಬೆಂಗಳೂರು: ಮಡಿಕೇರಿ ಘರ್ಷಣೆಗೆ ಡಿಸಿ, ಎಸ್ಪಿ ಹೊಣೆ; ಐಜಿಪಿ ಬಿ.ಕೆ ಸಿಂಗ್‍ರಿಂದ ಆಂತರಿಕ ತನಿಖಾ ವರದಿ ಸಲ್ಲಿಕೆ

ಬೆಂಗಳೂರು: ಮಡಿಕೇರಿಯಲ್ಲಿ ಟಿಪ್ಪು ಜಯಂತಿ ವಿರೋಧಿಸಿ ನಡೆಯುತ್ತಿದ್ದ ಬಂದ್ ವೇಳೆ ಉಂಟಾದ ಗಲಭೆಗೆ ಸಂಬಂಧಿಸಿ ದಕ್ಷಿಣ ವಲಯ ಐಜಿಪಿ ಬಿ.ಕೆ ಸಿಂಗ್ ಅವರು ಪೊಲೀಸ್ ಮಹಾ  ನಿರ್ದೇಶಕರಿಗೆ ಆಂತರಿಕ ತನಿಖಾ ವರದಿ ಸಲ್ಲಿಸಿದ್ದಾರೆ.

ನ.10ರಂದು ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಿದ್ದ ಜಿಲ್ಲಾಡಳಿತ ಸೂಕ್ತ ಬಂದೋಬಸ್ತ್ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದೆ. ಈ ಘಟನೆಗೆ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮದ್, ಎಸ್ಪಿ ವರ್ತಿಕಾ ಕಟಿಯಾರ್ ಹೊಣೆ ಎಂದು 12 ಪುಟದ ವರದಿಯಲ್ಲಿ ಬಿ.ಕೆ.ಸಿಂಗ್ ಅವರು ಉಲ್ಲೇಖಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.  ಘಟನೆ ಸಂಬಂಧ ಬಿ.ಕೆ.ಸಿಂಗ್ ಅವರು ಆಂತರಿಕ ತನಿಖಾವರದಿ ಕೊಟ್ಟಿರುವ ವಿಚಾರವನ್ನು ಡಿಜಿಪಿ ಓಂಪ್ರಕಾಶ್ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.  ವರದಿಯಲ್ಲಿ ಉಲ್ಲೇಖಿಸಲಾಗಿರುವ ಅಂಶಗಳ ಬಗ್ಗೆ ಇನ್ನೂ ಪರಿಶೀಲನೆ   ಮಾಡಿಲ್ಲ. ಪರಿಶೀಲಿಸಿದ ನಂತರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.

ನ.6, 7 ಮತ್ತು 8ರಂದು ಎಸ್ಪಿ ವರ್ತಿಕಾ ಕಟಿಯಾರ್ ಅವರು ಬ್ಯಾಡ್ಮಿಂಟನ್ ಆಟವಾಡಲು ರಜೆ ಮೇಲೆ ತೆರಳಿದ್ದರು. ದಕ್ಷಿಣ ವಲಯ ಐಜಿಪಿ ಬಿ.ಕೆ.ಸಿಂಗ್ ರಜೆ ನೀಡಲು ನಿರಾಕರಿಸಿದ್ದರು. ಆದರೆ, ಎಡಿಜಿಪಿ ಅವರು ರಜೆ ಮಂಜೂರು ಮಾಡಿದ್ದರು. ಅಲ್ಲದೆ ಟಿಪ್ಪು ಜಯಂತಿ ಹಿಂದಿನ ದಿನ ನ.9ರಂದು ಡಿಸಿ ಮೀರ್ ಅನೀಸ್ ಅಹಮದ್ ಕೂಡ ರಜೆ ಮೇಲೆ ತೆರಳಿದ್ದರು.

ಹೀಗಾಗಿ, ಕೊಡಗು ಸಿಇಓ ಕೂರ್ಮರಾವ್ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿತ್ತು. ಟಿಪ್ಪು ಜಯಂತಿಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ವಿಚಾರ ಗೊತ್ತಿದ್ದರೂ ಡಿಸಿ ಮತ್ತು ಎಸ್ಪಿ ರಜೆ ಮೇಲೆ ಹೋಗಿದ್ದರು. ಅಲ್ಲದೆ ಮುಂಜಾಗೃತ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿರಲಿಲ್ಲ. ಇದರಿಂದಾಗಿಯೇ ಘರ್ಷಣೆಗೆ ಉಂಟಾಗಿದೆ ಎಂದು ವರದಿಯಲ್ಲಿ ತಿಲಿಸಲಾಗಿದೆ ತಿಳಿದು ಬಂದಿದೆ.

Leave a Reply