ಬೆಂಗಳೂರು: ರಾಜಕೀಯದಲ್ಲಿ ನಾನು ಎಂಬ ಶಬ್ಧ ಬಿಡಬೇಕು: ಎಚ್ ಡಿ ದೇವೇಗೌಡ

ಬೆಂಗಳೂರು: ನಾನು ಎಂಬ ಶಬ್ಧ ರಾಜಕೀಯದಲ್ಲಿ ಬಿಡಬೇಕು. ನಾನು ಎಂಬ ಶಬ್ಧ ಮರೆತು ರಾಜಕೀಯ ನಡೆಸಿದರೆ, ಆಡಳಿತ ಉತ್ತಮವಾಗಿರುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿಂದು ಏರ್ಪಡಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ಮನಸ್ಸಿನಲ್ಲಿ ನಾನು ನಡೆಯುವ ದಾರಿ ಸರಿಯಿದೆ ಎಂದೆನಿಸಿದರೆ ಯಾವುದಕ್ಕೆ ಹೆದರದೆ ಮುನ್ನುಗ್ಗುತ್ತೇನೆ. ಯಾರ ಹೊಗಳಿಕೆಗೂ ತೆಗಳಿಕೆಗೂ ಹೆದರುವುದಿಲ್ಲ. ನನಗೆ ವಯಸ್ಸಾದ ಹಿನ್ನಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಆದರೆ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರುತ್ತೇನೆ ಎಂದು ಅವರು ತಿಳಿಸಿದ್ದಾರೆ.

devegowda ಮ

54 ವರ್ಷಗಳ ರಾಜಕೀಯ ಜೀವನದಲ್ಲಿ ಸೋಲು ಗೆಲವು ಕಂಡಿದ್ದರೂ, ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಿಲ್ಲ. ನಮ್ಮ ಪಕ್ಷ ಕಟ್ಟಲು ಯಾರೋಬ್ಬರು ಹಣ ಕೊಡಲಿಲ್ಲ. ಪಕ್ಷವನ್ನು ಕಟ್ಟಿ ಬೆಳೆಸಲು ಸಾಕಷ್ಟು ಶ್ರಮಪಟ್ಟಿದ್ದೇನೆ. ಪಕ್ಷ ತೊರೆದವರಲ್ಲಿ ಸಿದ್ದರಾಮಯ್ಯ ಅವರನ್ನು ಹೊರುತಪಡಿಸಿದರೆ ನನ್ನನ್ನು ಯಾರೂ ಟೀಕಿಸುತ್ತಿಲ್ಲ ಎಂದ ಅವರು, ಬಿ.ಎಲ್. ಶಂಕರ್, ಸಿ.ಎಂ. ಇಬ್ರಾಹೀಂ, ಸಿಂಧ್ಯಾ, ದೇಶಪಾಂಡೆ, ಮಹದೇವಪ್ಪ ಮತ್ತಿತರ ನಾಯಕರು ವೈಯಕ್ತಿಕವಾಗಿ ನನ್ನನ್ನು ಟೀಕೆ ಮಾಡಿಲ್ಲ ಅವರು ಇರುವಂತಹ ಪಕ್ಷದ ಪರವಾಗಿ ಮಾತನಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿಲ್ಲ ಎಂಬ ಕಾರಣಕ್ಕೆ ನನ್ನನ್ನು ಟೀಕಿಸುತ್ತಿದ್ದಾರೆ. ಆದರೆ ಅಂದಿನ ಪರಿಸ್ಥಿತಿಯಲ್ಲಿ ಅವರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿರಲಿಲ್ಲ. ಇವರನ್ನು ಮುಖ್ಯಮಂತ್ರಿ ಮಾಡಿದ್ದರೇ, ಪರಿಣಾಮ ಬೇರೆ ಆಗುತಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಮಾಡಲಿಲ್ಲ. ಅದನ್ನೇ ಕಾರಣವಾಗಿಟ್ಟುಕೊಂಡು ಸಿದ್ದರಾಮಯ್ಯನವರು ಈ ರೀತಿ ಟೀಕಿಸುವುದು ಸರಿಯಲ್ಲ ಎಂದು ದೇವೇಗೌಡರು ವಿಷಾದಿಸಿದ್ದಾರೆ.

ಅವರವರ ಕರ್ಮಗಳನ್ನು ಅವರವರೇ ಅನುಭವಿಸಬೇಕು ಎಂಬ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ದೇವೇಗೌಡರು, ನಾನೊಬ್ಬ ಹುಟ್ಟು ಹೋರಾಟಗಾರ. ರೈತರ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಹೋರಾಡುತ್ತಿದ್ದೇನೆ. 2000 ಮಂದಿ ರೈತರನ್ನು ದೆಹಲಿಗೆ ಕರೆದೊಯ್ದು ಪ್ರಧಾನಿಗೆ ಮನವಿ ಪತ್ರ ಸಲ್ಲಿಸಿದ್ದೆ. ತಲೆಯ ಮೇಲೆ ಸೀಮೆಎಣ್ಣೆ ಡಬ್ಬ ಹೊತ್ತಿದ್ದೆ. ಸರಕು ಸಾಗಣೆ ರೈಲಿನಲ್ಲಿ ಸಂಚರಿಸಿ ಪಕ್ಷ ಕಟ್ಟಿದ್ದೆ. ಆದರೆ, ಇದೆಲ್ಲವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಜನತಾ ಪರಿವಾರ ಒಗ್ಗೂಡುವ ಪ್ರಯತ್ನ ನಡೆದಿದೆ. ಆದರೆ ಅದು ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಬಹುದು ಎಂದು ನೋಡಬೇಕಿದೆ. ಜಾತ್ಯತೀತ ಶಕ್ತಿಗಳು ಒಗ್ಗೂಡುವ ಅನಿವಾರ್ಯತೆ ಇದೆ. ಬಿಹಾರದಲ್ಲಿ ಜೆಡಿಯು-ಆರ್ ಜೆಡಿ ಮೈತ್ರಿಯನ್ನು ಕೇಂದ್ರ ಸರ್ಕಾರ ಲಘುವಾಗಿ ಪರಿಗಣಿಸಬಾರದು ಎಂದು ಹೇಳಿದ್ದಾರೆ.

ಜೆಡಿಎಸ್ ಪಕ್ಷದಲ್ಲಿ ಮಹಿಳೆಗೆ ಸ್ಥಾನವಿಲ್ಲ. ಕೇವಲ ಅವರ ಪಕ್ಷದ ಚಿಹ್ನೆಯಲ್ಲಿ ತೆನೆ ಹೊತ್ತ ಮಹಿಳೆ ಎಂಬುದನ್ನು ಬಿಟ್ಟರೇ, ಮಹಿಳೆ ಪರವಾಗಿಲ್ಲ ಎಂಬ ಸಿದ್ದರಾಮಯ್ಯನವರ ಟೀಕೆಗೆ ಪ್ರತಿಕ್ರಯಿಸಿದ ಮಾಜಿ ಪ್ರಧಾನಿ, ಮಹಿಳಾ ಸಮಾನತೆಗೆ ಮೊದಲು ಪ್ರಯತ್ನ ಮಾಡಿದ್ದು ಜೆಡಿಎಸ್ ಪಕ್ಷ. ಅವರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಿದ್ದು ನಮ್ಮ ಸರ್ಕಾರ. ಇದನ್ನು ಇಂದಿರಾಗಾಂಧಿ ಅವರು ನೀಡಿಲ್ಲ ಎಂದು ತಿರುಗೇಟು ನೀಡಿದರು.

ಸರ್ಕಾರ ಸ್ವಚ್ಛ, ದಕ್ಷ ಆಡಳಿತ ನೀಡಿದರೆ ಸಂತೋಷ. ಆದರೆ ಭ್ರಷ್ಟಾಚಾರದ ವಿಚಾರ ಪ್ರತಿದಿನ ಮಾಧ್ಯಮದಲ್ಲಿ ಬರುತ್ತಿದೆ. ಸಂಸದರ ನಿಧಿ ಬಳಕೆಯಲ್ಲಿ ತಾವು ಎರಡನೇ ಸ್ಥಾನದಲ್ಲಿದ್ದೇನೆ. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ನಡೆದ ವಿದ್ಯಮಾನ ತಮ್ಮ ಜೀವನ ಚರಿತ್ರೆಯಲ್ಲಿ ಉಲ್ಲೇಖಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.

ಆಶ್ವಾಸನೆಗಳ ಮೂಲಕ ಕೇಂದ್ರದಲ್ಲಿ ಅಧಿಕಾರಿಕ್ಕೆ ಬಂದ ನರೇಂದ್ರ ಮೋದಿ ಅವರ ಸರ್ಕಾರ ಆಶ್ವಾಸನೆಯಲ್ಲಿ ಕುಳಿತಿದ್ದು, ಜನತೆ ನಿರಾಶೆಯಾಗಿದ್ದಾರೆ. ಒಂದು ವರ್ಷದಲ್ಲಿ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದು, ಇನ್ನು ಮುಂದೆಯಾದರೂ ದೇಶದ ಪ್ರತಿಯೊಬ್ಬ ನಾಗರಿಕನ ಸಮಸ್ಯೆಗೆ ಸ್ಪಂದಿಸಲಿ ಎಂದು ಎಚ್.ಡಿ.ದೇವೆಗೌಡ ಸಲಹೆ ನೀಡಿದರು.

ಸಿದ್ದರಾಮಯ್ಯ ಅವರ ಸರ್ಕಾರದ ಭಾಗ್ಯಯೋಜನೆಗಳ ಕುರಿತು ಮಾತನಾಡಿದ ಅವರು, ರಾಜ್ಯದ ದುರ್ಭಾಗ್ಯಗಳನ್ನು ನಿವಾರಿಸಲು ಕಾಂಗ್ರೆಸ್ ಸರ್ಕಾರ ಮುಂದಾದರೆ ಸಾಕು, ಅದುವೆ ಎಲ್ಲರ ಭಾಗ್ಯ ಎಂದು ಹೇಳಿದರು.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಡಿಎಂಕೆ ಕೈವಾಡವಿದೆ ಎಂದು ಯಾವುದೋ ಒಂದು ವರದಿ ಹೇಳಿತ್ತು. ಆದರೆ, ಅದೇ ಕಾಂಗ್ರೆಸ್ ಡಿಎಂಕೆಯೊಂದಿಗೆ ಕೈಜೋಡಿಸಿತು. ಹೀಗಿರುವಾಗ ಕಾಂಗ್ರೆಸ್ ಹಣೆಬರಹವನ್ನು ಮತ್ತಷ್ಟು ನಾನು ಹೇಳಬೇಕಾಗಿಲ್ಲ ಎಂದ ಅವರು ಸರ್ಕಾರದ ಬಗ್ಗೆ ಸರ್ಟಿಫಿಕೇಟ್ ಕೊಡಲು ನಾನ್ಯಾರು. ಅದನ್ನು ಜನರು ತೀರ್ಮಾನಿಸುತ್ತಾರೆ ಎಂದು ತಿಳಿಸಿದ್ದಾರೆ.

Leave a Reply

Please enter your comment!
Please enter your name here