ಬೆಳಗಾವಿ ಸುವರ್ಣಸೌಧದ ಎದುರು ರೈತ ಆತ್ಮಹತ್ಯೆಗೆ ಯತ್ನ; ಮಂಡ್ಯದಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ

ಬೆಳಗಾವಿ/ಮಂಡ್ಯ: ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಮಂಡ್ಯದಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡರೆ, ಬೆಳಗಾವಿಯ ಸುವರ್ಣಸೌಧದ ಎದುರೇ ಮತ್ತೊಬ್ಬ ರೈತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ.

ಬೆಳಗಾವಿಯಲ್ಲಿ ಇಂದಿನಿಂದ ಆರಂಭವಾಗಿರುವ ಮಳೆಗಾಲದ ಅಧಿವೇಶನದ ಮೇಲೆ ರೈತರ ಸರಣಿ ಆತ್ಮಹತ್ಯೆಯ ಕರಿನೆರಳು ಚಾಚಿದೆ. ಮತ್ತೊಂದು ಕಡೆ ಕಬ್ಬಿನ ಬಾಕಿ ಪಾವತಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರೈತರ ಆತ್ಮಹತ್ಯೆ ಕುರಿತು ಸದನದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ಮಧ್ಯೆ ತೀವ್ರ ವಾಕ್ಸಮರ ನಡೆಯುತ್ತಿದ್ದರೆ, ಹೊರಗಡೆ ರೈತನೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಕಬ್ಬಿನ ಹಣ ಬಾಕಿ ಪಾವತಿ ಮಾಡದ ಹಿನ್ನೆಲೆಯಲ್ಲಿ ಮನನೊಂದು ಇಂದು ಸುವರ್ಣಸೌಧದ ಮುಂದೆ ಬೆಳಗಾವಿ ಜಿಲ್ಲೆಯ ನಿಲದಿ ಗ್ರಾಮದ ರೈತ ಸಿದ್ದರಾಮ ಆತ್ಮಹತ್ಯೆಗೆ ಯತ್ನಿಸಿದರು. ಸ್ಥಳೀಯರ ನರೆವಿನಿಂದ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾರೆ.

ಮಂಡ್ಯದಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ

ಇನ್ನು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ 52 ವರ್ಷದ ರೈತ ಬಸವರಾಜು ಸಾಲಬಾಧೆ ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಸವರಾಜು 1ಲಕ್ಷ ರುಪಾಯಿ ಅಧಿಕ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.

Leave a Reply

Please enter your comment!
Please enter your name here