ಬೆಳ್ತಂಗಡಿ : ಚಿನ್ನ ಹೊಳಪು ಮಾಡುವ ಹೆಸರಿನಲ್ಲಿ ವಂಚನೆ ಯವಕರ ತಂಡ ಪೊಲೀಸ್ ವಶಕ್ಕೆ

ಬೆಳ್ತಂಗಡಿ: ಚಿನ್ನದ ಹೊಳಪನ್ನು ಹೆಚ್ಚಿಸುವುದಾಗಿ ಜನರನ್ನು ವಂಚಿಸಲು ಯತ್ನಿಸುತ್ತಿದ್ದ ಉತ್ತರ ಭಾರತದ ಯುವಕರ ತಂಡವೊಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಪೊಲೀಸರ ವಶವಾಗಿದ್ದಾರೆ.

ಅಳದಂಗಡಿಯ ಉಂಗಿಲಬೈಲು ಸೇಸಪ್ಪ ನಲಿಕೆ ಎಂಬವರ ಮನೆಯಲ್ಲಿ ಅವರ ಪತ್ನಿ ಹಾಗೂ ಪುತ್ರಿ ಇದ್ದರು. ಗಂಡಸರು ಮನೆಯಲ್ಲಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ತಂಡ ಚಿನ್ನವನ್ನು ಹೊಳಪು ಮಾಡಿಕೊಡುವ ಬಗ್ಗೆ ನಯ ಮಾತುಗಳಿಂದ ಮನೆಯವರನ್ನು ನಂಬಿಸಿದ್ದಾರೆ. ಇದನ್ನು ನಂಬಿದ ಮನೆಯವರು ತಮ್ಮಲಿದ್ದ ಚಿನ್ನವನ್ನು ನೀಡಿದ್ದಾರೆ. ಹೊಳಪು ಮಾಡುವ ತಂಡ ಅದ್ಯಾವುದೋ ದ್ರಾವಣವಿದ್ದ ಪಾತ್ರೆಯೊಂದರಲ್ಲಿ ಚಿನ್ನವನ್ನು ಹಾಕಿ ಅದನ್ನು ಅಲ್ಲೇ ಇಟ್ಟು ಅಕ್ಕಪಕ್ಕದ ಮನೆಗೆ ತೆರಳಿದ್ದಾರೆ. ಸ್ವಲ್ಪ ಸಮಯದಲ್ಲೇ ಸೇಸಪ್ಪ ಅವರ ಪುತ್ರ ಮನೆಗೆ ಬಂದಾಗ ಚಿನ್ನವನ್ನು ಹೊಳಪು ಮಾಡಲು ಹಾಕಿರುವ ಪಾತ್ರೆಯನ್ನು ಮನೆಯವರು ತೋರಿಸಿದ್ದಾರೆ. ಅನುಮಾನಗೊಂಡ ಅವರು ಪಾತ್ರೆಯಿಂದ ಚಿನ್ನದ ಸರವೊಂದನ್ನು ತೆಗೆದಾಗ ತುಂಡು ತುಂಡಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅವರು ನೆರೆಕರೆಯವರಿಗೆ ಮಾಹಿತಿ ನೀಡಿ ಯುವಕರ ತಂಡದ ಹುಡುಕಾಟ ನಡೆಸಿದಾಗ ಮೂವರು ಯುವಕರು ಸಾರ್ವಜನಿಕರ ಬಲೆಗೆ ಬಿದ್ದಿದ್ದಾರೆ. ಅವರನ್ನು ಬೆಳ್ತಂಗಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Leave a Reply

Please enter your comment!
Please enter your name here