ಬೆಳ್ತಂಗಡಿ: ಮುಂಡಾಜೆ ಜುಮ್ಮಾ ಮಸೀದಿಗೆ ಕಿಡಿಗೇಡಿಗಳಿಂದ ಕಲ್ಲುತೂರಾಟ

47949666ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕದಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿಗೆ ಶನಿವಾರ ನಡುರಾತ್ರಿ ಕಿಡಿಗೇಡಿಗಳು ಕಲ್ಲೆಸೆದು ಹಾಗೂ ಸಾರ್ವಜನಿಕ ದಾರಿದೀಪಗಳನ್ನು ಹಾನಿಗೊಳಿಸಿದ ಘಟನೆ ನಡೆದಿದೆ. ಮಸೀದಿಯ ಆಡಳಿತ ಸಮಿತಿ ಹಾಗೂ ಪೊಲೀಸರ ಸಕಾಲಿಕ ಮುಂಜಾಗ್ರತೆ ಕ್ರಮದಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

ಕಲ್ಲೆಸೆತದಿಂದ ಮಸೀದಿಯ ಕಿಟಕಿ ಗಾಜು ಪುಡಿಯಾಗಿದ್ದು, ಕಲ್ಲು ಮಸೀದಿಯೊಳಗೆ ಪತ್ತೆಯಾಗಿದೆ. ಅಲ್ಲದೆ ಮಸೀದಿ ಮುಂಭಾಗದಿಂದ ಹಾದುಹೋಗುವ ಸೋಮಂತಡ್ಕ-ದಿಡುಪೆ ರಸ್ತೆಯ ಐದಕ್ಕೂ ಅಧಿಕ ದಾರಿದೀಪಗಳ ಸಿಎಫ್‌ಎಲ್ ಬಲ್ಬುಗಳನ್ನೂ ಕಿಡಿಗೇಡಿಗಳು ಪುಡಿ ಮಾಡಿದ್ದಾರೆ.

ಭಾನುವಾರ ಮುಂಜಾನೆ ನಮಾಝ್‌ಗಾಗಿ ಮಸೀದಿಗೆ ಬಂದಾಗ ವಿಚಾರ ಬೆಳಕಿಗೆ ಬಂದಿದೆ. ಮಸೀದಿಗೆ ಕಲ್ಲೆಸೆದ ಬಗ್ಗೆ ಸುದ್ದಿ ಹರಡುತ್ತಿದಂತೆ ಜನ ಸೇರತೊಡಗಿದರು. ಆದರೆ ಮಸೀದಿ ಆಡಳಿತ ಸಮಿತಿ ಸೇರಿದ್ದ ಜನರನ್ನು ನಿಭಾಯಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಉಸ್ಮಾನ್ ಹಾಜಿ ಅವರು ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಶನಿವಾರ ನಡುರಾತ್ರಿ ಘಟನೆ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply