ಬೆಳ್ತಂಗಡಿ :ವೃದ್ಧ ದಂಪತಿಯನ್ನು ಕೊಲೆಗೈದು ಚಿನ್ನಾಭರಣ ಲೂಟಿ

ಬೆಳ್ತಂಗಡಿ : ವೃದ್ಧ ದಂಪತಿಯನ್ನು ಕೊಲೆಗೈದು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ. ಕಕ್ಕಿಂಜೆ ಪೇಟೆಯ ಸಮೀಪ ಇರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಬದಿಯ ಮನೆಯ ನಿವಾಸಿ ಕೆ.ವಿ.ವರ್ಗೀಸ್‌ ಯಾನೆ ವರ್ಕಿ(84) ಹಾಗೂ ಅವರ ಪತ್ನಿ ಏಲಿಯಾಮ್ಮ (78) ಕೊಲೆಯಾದವರು. ವರ್ಗೀಸ್‌ರ ಮೃತದೇಹ ಮನೆಯಿಂದ ಸುಮಾರು ನೂರು ಮೀಟರ್‌ ದೂರದಲ್ಲಿ ಶಾಲೆಯ ಮೈದಾನದ ಬದಿಯಲ್ಲಿ ಮನೆಗೆ ಬರುವ ದಾರಿಯಲ್ಲಿ ಬಿದ್ದಿತ್ತು. ಅವರ ತಲೆಗೆ ಗಾಯವಾಗಿದ್ದು, ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಹತ್ಯೆ ಮಾಡಲಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಏಲಿಯಮ್ಮ ಅವರ ಮೃತದೇಹ ಮನೆಯ ಒಳಗಿನ ಕೋಣೆಯಲ್ಲಿ ಪತ್ತೆಯಾಗಿದ್ದು, ಅವರನ್ನೂ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಕೊಲೆಗೈಯಲಾಗಿದೆ. ವೃದ್ದ ದಂಪತಿ ಮಾತ್ರ ಮನೆಯಲ್ಲಿ ಇರುತ್ತಿದ್ದು, ಮಕ್ಕಳು ಬೇರೆ ಕಡೆಗಳಲ್ಲಿ ವಾಸಿಸುತ್ತಿದ್ದಾರೆ. ಈ ವಿಚಾರ ತಿಳಿದವರೇ ಈ ದುಷ್ಕೃತ್ಯ ಎಸಗಿರುವ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಕಳ್ಳರು ಮನೆಯೊಳಗೆ ನುಗ್ಗಿ ಎಲ್ಲೆಡೆ ಜಾಲಾಡಿದ್ದು, ಬಟ್ಟೆಬರೆಗಳನ್ನು, ಕಾಗದ ಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕಪಾಟುಗಳ ಬಾಗಿಲನ್ನು ಒಡೆದಿದ್ದು, ಅದರೊಳಗಿದ್ದ ಸಾಮಗ್ರಿಗಳನ್ನು ಎಳೆದು ಹಾಕಿದ್ದಾರೆ. ಏಲಿಯಮ್ಮ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕದ್ದೊಯ್ಯಲಾಗಿದೆ. ಇದಲ್ಲದೆ ಮನೆಯಲ್ಲಿ ಯಾವೆಲ್ಲ ಸೊತ್ತುಗಳನ್ನು ಕಳವುಗೈಯಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಕೆಲಸದಾಳುಗಳು ಪ್ರತಿದಿನ ಬಂದು ಮನೆಕೆಲಸ ಹಾಗೂ ತೋಟದ ಕೆಲಸವನ್ನು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಎಂದಿನಂತೆ ಕೆಲಸದವರು ಬಂದು ನೋಡಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದು ಬೆಳ್ತಂಗಡಿ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದರು. ಜಿಲ್ಲಾ ಎಸ್ಪಿ ಡಾ.ಶರಣಪ್ಪ$ಎಸ್‌.ಡಿ. ಹಾಗೂ ಬಂಟ್ವಾಳ ಎಎಸ್ಪಿ ರಾಹುಲ್‌ ಕುಮಾರ್‌ ಬೆಳ್ತಂಗಡಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಬಿ.ಆರ್‌.ಲಿಂಗಪ್ಪ$ಆಗಮಿಸಿ ಪರಿಶೀಲನೆ ನಡೆಸಿ ತನಿಖೆಯ ನೇತೃತ್ವ ವಹಿಸಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಘಟನೆಯ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Reply