ಬೈಂದೂರು: ರೈಲು ಪ್ರಯಾಣಿಕರ ಚಿನ್ನಾಭರಣ ಕಳವು: ದೂರು

ಬೈಂದೂರು: ಮಡಗಾವ್- ಮಂಗಳೂರು ಇಂಟರ್ ಸಿಟಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಕಳವಾಗಿರುವ ಬಗ್ಗೆ ವರದಿಯಾಗಿದೆ.
ಬಾಲಕೃಷ್ಣ ಶ್ರೀಧರ ಪೈ ತನ್ನ ಪತ್ನಿ ದೀಪಾ ಪೈ ಜೊತೆ ರೈಲಿನ ಜನರಲ್ ಬೋಗಿಯಲ್ಲಿ ಕಾರವಾರದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದು, ಈ ಮಧ್ಯೆ ದೀಪಾ ಮಲಗಿದ್ದರೆ, ಬಾಲಕೃಷ್ಣ ಅಲ್ಲಿಯೇ ಎರಡು ಸೀಟು ಮುಂದೆ ಸ್ನೇಹಿತರೊಂದಿಗೆ ಮಾತನಾ ಡುತ್ತಿದ್ದರು. ರೈಲು ಕುಮಟಾ ನಿಲ್ದಾಣದಿಂದ ಸಾಗಿ ದಾಗ ಮಲಗಿದ ದೀಪಾ ಪೈ ಬೈಂದೂರು ನಿಲ್ದಾಣದ ಬಳಿ ಎಚ್ಚರಗೊಂಡರು. ದೀಪಾ ಪೈ ಅವರ ಬ್ಯಾಗ್ ಕಳವಾಗಿರುವುದು ಕಂಡು ಬಂತು ಎನ್ನಲಾಗಿದೆ.
ಈ ಬ್ಯಾಗಿನಲ್ಲಿ 30 ಗ್ರಾಂ ತೂಕದ 1.10ಲಕ್ಷ ರೂ. ವೌಲ್ಯದ ಚಿನ್ನದ ಸರ, 10 ಗ್ರಾಂ ತೂಕದ 40 ಸಾವಿರ ರೂ. ವೌಲ್ಯದ ಚಿನ್ನದ ಕರಿಮಣಿ, 20 ಸಾವಿರ ರೂ. ವೌಲ್ಯದ ಚಿನ್ನದ ಕಿವಿಯ ಜುಮ್ಕಿ, 5ಸಾವಿರ ರೂ. ವೌಲ್ಯದ ಚಿನ್ನದ ಕಿವಿಯ ರಿಂಗ್, ಚಾಲನ ಪರವಾನಿಗೆ, 6ಸಾವಿರ ರೂ. ವೌಲ್ಯದ ಮೊಬೈಲ್, ಕನ್ನಡಕ, ಛತ್ರಿ, 200ರೂ. ನಗದು ಇತ್ತೆನ್ನಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Leave a Reply