ಬ್ರಹ್ಮಾವರ ಜನಸ್ಪಂದನ – 265 ಫಲಾನುಭವಿಗಳಿಗೆ ನೆರವು

ಬ್ರಹ್ಮಾವರ ಜನಸ್ಪಂದನ – 265 ಫಲಾನುಭವಿಗಳಿಗೆ ನೆರವು

ಉಡುಪಿ: ಬ್ರಹ್ಮಾವರದ ನಾರಾಯಣಗುರು ಸಭಾಭವನದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ 265 ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಸರ್ಕಾರದ ನೆರವನ್ನು ವಿತರಿಸಲಾಯಿತು.

janaspandana janaspandana1

ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಹೋಬಳಿ ಮಟ್ಟದ ಎರಡನೇ ಜನಸ್ಪಂದನ ಇದಾಗಿದ್ದು, ಜನರ ಬಳಿಗೆ ಸರ್ಕಾರ ಎಂಬುದನ್ನು ಚಾಚು ತಪ್ಪದೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಹಿಂದುಳಿದವರಿಗೆ, ಅಶಕ್ತರಿಗೆ ನೆರವು ನೀಡಲು ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಮನೆ ಬಾಗಿಲಿಗೆ ತೆರಳಿ ಸೌಲಭ್ಯ ಕಲ್ಪಿಸುತ್ತಿದ್ದೇವೆ; ಅವರ ದೂರು ದುಮ್ಮಾನಗಳನ್ನು ಆಲಿಸುತ್ತಿದ್ದೇವೆ; ಅಹವಾಲುಗಳಿಗೆ ಸಮಯಮಿತಿಯೊಳಗೆ ಪರಿಹಾರ ನೀಡುತ್ತಿದ್ದೇವೆ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.

ಜಿಲ್ಲೆಯಲ್ಲಿ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದಂದಿನಿಂದ 64000 ಬಿಪಿಎಲ್ ಕಾರ್ಡ್‍ಗಳನ್ನು ವಿತರಿಸಲಾಗಿದ್ದು, ಜನಪರ ಪ್ರಮುಖ ಯೋಜನೆಗಳಿಂದ ಸಾಮಾಜಿಕ ಸುರಕ್ಷೆಯನ್ನು ನೀಡಲಾಗುತ್ತಿದೆ.

ಬಡಜನರಿಗೆ ಹಕ್ಕುಪತ್ರ ನೀಡುವ ಸಂಬಂಧ 94 ಸಿ ಮತ್ತು 94 ಸಿಸಿಯಡಿ ಅರ್ಜಿ ಸಲ್ಲಿಸಲು ಕಂದಾಯ ಸಚಿವಾಲಯ ಮತ್ತೆರಡು ತಿಂಗಳು ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು. ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ಪಡೆದವರು ಇತರರಿಗೂ ಮಾಹಿತಿ ನೀಡಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ಮಾಡಿದರು.

ಭಾಗ್ಯಲಕ್ಷ್ಮಿ ಬಾಂಡ್, ಸ್ತ್ರೀ ಶಕ್ತಿ ಸುತ್ತು ನಿಧಿ ವಿತರಣೆ, 94 ಸಿ ಯಡಿ 15 ಫಲಾನುಭವಿಗಳಿಗೆ, ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆಯಡಿ 12 ಜನರಿಗೆ, ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಮೂವರಿಗೆ, ಪ್ರಾಕೃತಿಕ ವಿಕೋಪದಡಿ ಒಬ್ಬರಿಗೆ, ಅಂತ್ಯಸಂಸ್ಕಾರ ನಿಧಿಯಡಿ ಫಲಾನುಭವಿಗಳಿಗೆ ನೆರವನ್ನು ಒದಗಿಸಲಾಯಿತು.

ಮೀನುಗಾರಿಕೆ ಇಲಾಖೆಯಿಂದ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಯೋಜನೆಯಡಿ ಇಬ್ಬರು ಮೀನುಗಾರರ ವಾರಸುದಾರರಿಗೆ ತಲಾ ಎರಡು ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಯಿತು. ಇದಲ್ಲದೆ 10 ಮೀನುಗಾರರಿಗೆ ಅಕ್ರಮ ಸಕ್ರಮ ಯೋಜನೆಯಡಿ ನೆರವನ್ನು ನೀಡಲಾಯಿತು.

ಕೃಷಿ ಇಲಾಖೆಯಿಂದ 16 ರೈತರಿಗೆ ಪವರ್ ಟಿಲರ್, ಭತ್ತ ಕಟಾವು ಯಂತ್ರ, ಪವರ್ ವೀಡರ್, ಮಾದರಿ ದನದ ಕೊಟ್ಟಿಗೆಗೆ ನೆರವು, ಮಣ್ಣು ಆರೋಗ್ಯ ಕಾರ್ಡ್ ವಿತರಿಸಲಾಯಿತು.
ಬಸವ ವಸತಿ ಯೋಜನೆಯಡಿ 20 ಜನರಿಗೆ ವಸತಿಯೋಜನೆ ಅನುಮೋದನೆ ಸೇರಿದಂತೆ ನೆರವುಗಳನ್ನು ವಿತರಿಸಲಾಯಿತು.

janaspandana2 janaspandana3

ಬಳಿಕ ನಡೆದ ಅಹವಾಲು ಸ್ವೀಕಾರದಲ್ಲಿ 36 ಅಹವಾಲುಗಳನ್ನು ಸ್ವೀಕರಿಸಿದ ಸಚಿವರು, ಕೆಮ್ಮಣ್ಣಿನಲ್ಲಿ ವೈದ್ಯರ ಕೊರತೆ, ರಸ್ತೆ ಡಾಮರೀಕರಣ, ದಾರಿ ಬಿಡಿಸುವ ಬಗ್ಗೆ, ಹಾರಾಡಿಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದಿರುವ ಬಗ್ಗೆ, ಕೆಮ್ಮಣ್ಣು ಪಡುತೋನ್ಸೆಯಲ್ಲಿ ಪಂಚಾಯಿತಿ ನೌಕರರು ಇಲ್ಲದಿರುವ ಬಗ್ಗೆ, ಉಪ್ಪೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ, ಸಮುದಾಯ ಆರೋಗ್ಯ ಕೇಂದ್ರವಿಲ್ಲದಿರುವ ಬಗ್ಗೆ ಸ್ಥಳೀಯರು ಮನವಿ ನೀಡಿದರು.

ಚಾಂತಾರುವಿನಲ್ಲಿ ಪಡಿತರ ಅಕ್ರಮದ ಬಗ್ಗೆ, ಪವರ್ ಲಿಫ್ಟರ್ ರೊಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಬಗ್ಗೆ, ಶವಸಂಸ್ಕಾರಕ್ಕೆ ಸ್ಥಳ ನೀಡುವ ಬಗ್ಗೆ, ವಾರಂಬಳ್ಳಿಯಲ್ಲಿ ಕೊಳಚೆ ನೀರು ಹರಿಯುತ್ತಿರುವ ಬಗ್ಗೆ, ಬಿಪಿಎಲ್ ಕಾರ್ಡ್ ಕೋರಿ, ಚಾಂತಾರುವಿನಲ್ಲಿ ತ್ಯಾಜ್ಯ ವಿಲೆ ಬಗ್ಗೆ, ಕಾಲುಸಂಕ ನಿರ್ಮಾಣಕ್ಕೆ, ವಾರಂಬಳ್ಳಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೋಸ್ಟ್ ಮಾರ್ಟ್‍ಂ ಮಾಡಲು ವೈದ್ಯಾಧಿಕಾರಿಗಳು ಇಲ್ಲದಿರುವ ಬಗ್ಗೆ, ಹಂದಾಡಿಗೆ ರಸ್ತೆ ಬೇಕೆಂದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಮನೆ ಕಳೆದುಕೊಂಡವರಿಗೆ ಆದ್ಯತೆ ನೆಲೆಯಲ್ಲಿ ವಸತಿ ಒದಗಿಸಲು, ಮುಖ್ಯಮಂತ್ರಿ ವೈದ್ಯಕೀಯ ನೆರವು ಕೋರಿ, ಬ್ರಹ್ಮಾವರ ಬೋರ್ಡ್ ಹೈಸ್ಕೂಲ್ ಗೆ ಜಮೀನು ನೀಡಲು, ಗಡಿಗುರುತು ಮಾಡಿಸಲು ಕೋರಿ ಅರ್ಜಿಗಳು ಸಚಿವರಿಗೆ ಸಲ್ಲಿಸಲ್ಪಟ್ಟವು. ಹಲವು ಅರ್ಜಿಗಳಿಗೆ ಸಚಿವರು ಸ್ಥಳದಲ್ಲೇ ಪರಿಹಾರ ದೊರಕಿಸಿದರೆ, ಕೆಲವು ಅರ್ಜಿಗಳನ್ನು ಸಮಯಮಿತಿಯೊಳಗೆ ವಿಲೆ ಮಾಡಲು ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ಸೂಚಿಸಿದರು.
ಜನಸ್ಪಂದನಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್, ಜಿಲ್ಲಾ ಪಂಚಾಯತ್ ಸದಸ್ಯರಾದ ಸುಧಾಕರ ಶೆಟ್ಟಿ, ಚಂದ್ರಿಕಾ ಟಿ ಕೆ, ತಾಲೂಕು ಪಂಚಾಯತ್ ಸದಸ್ಯರಾದ ಗೋಪಿ ಕೆ ನಾಯಕ್, ಸುಧೀರ್ ಕುಮಾರ್, ಕುಸುಮಾ ಪೂಜಾರ್ತಿ, ನಗರಸಭೆ ಸದಸ್ಯರಾದ ಸುನಿತ, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಕೆಡಿಪಿ ಸದಸ್ಯರಾದ ಉಮೇಶ್ ಎ ನಾಯ್ಕ, ವಸಂತಿ ಪೂಜಾರ್ತಿ, ಧನಂಜಯ ಕುಮಾರ್ ಮುಂತಾದವರಿದ್ದರು. ಜಿಲ್ಲಾ ಪಂಚಾಯತ್ ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್, ತಹಸೀಲ್ದಾರ್ ಮಹೇಶ್ಚಂದ್ರ ಅವರನ್ನೊಳಗೊಂಡಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ವಿಶೇಷ ತಹಸೀಲ್ದಾರ್ ಪ್ರದೀಪ್ ಕಡ್ರ್ವೇಕರ್ ಸ್ವಾಗತಿಸಿದರು. ಶಿಕ್ಷಕ ಅಶೋಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು

Leave a Reply

Please enter your comment!
Please enter your name here