ಭಟ್ಕಳದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ

ಭಟ್ಕಳ: ಉತ್ತರ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಿ ನ್ಯೂ ಇಂಗ್ಲೀಷ್ ಸ್ಕೂಲ್ ಭಟ್ಕಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವು ನಡೆಯಿತು.

23june1

 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಟ್ಕಳ ಪುರಸಭಾ ಅಧ್ಯಕ್ಷೆ ಮಂಜಮ್ಮ ರವೀಂದ್ರ, ಜನರು ಸುತ್ತಮುತ್ತಲಿನ ಪರಿಸರದ ಶುಚಿತ್ವವನ್ನು ಕಾಪಾಡಿಕೊಳ್ಳುವುದರ ಮೂಲಕ ರೋಗಗಳನ್ನು ತಡೆಗಟ್ಟಬೇಕು. ಮಲೇರಿಯಾ ಬಗ್ಗೆ ಜನರಲ್ಲಿ ಜಾಗೃತಿ ಅತ್ಯವಶ್ಯವಾಗಿದೆ ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣಾಧಿಕಾರಿ ಎಸ್.ಟಿ.ನಾಯ್ಕ ಮಾತನಾಡಿ, ರೋಗ ನಿಯಂತ್ರಣ ಕಾರ್ಯದಲ್ಲಿ ಸರಕಾರದ ಜೊತೆಗೆ ಸಮುದಾಯಕ್ಕೂ ಜವಾಬ್ದಾರಿ ಇದೆ. ಜನರು ಕಾಯಿಲೆಯ ಬಗ್ಗೆ ಅರಿವನ್ನು ಪಡೆಯುವುದಲ್ಲದೇ, ಆರೋಗ್ಯ ಸೇವೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ. ಪ್ರತಿ ವರ್ಷ ಜಗತ್ತಿನಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಮಲೇರಿಯಾಕ್ಕೆ ತುತ್ತಾಗಿ ಅಸು ನೀಗುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಈ ವರ್ಷ ಕಳೆದ 6 ತಿಂಗಳ ಅವಧಿಯಲ್ಲಿ 32 ಪ್ರಕರಣಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಮಲೇರಿಯಾ ಇಳಿಮುಖವಾಗುತ್ತಿದ್ದು, ರೋಗದ ಕುರಿತಂತೆ ಜನರಲ್ಲಿ ಇನ್ನಷ್ಟು ಎಚ್ಚರಿಕೆ ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.

ಡಾ.ರಮೇಶ ರಾವ್, ಮಲೇರಿಯಾ ರೋಗ ಮತ್ತು ಕಾರಣ, ತಡೆಗಟ್ಟುವ ಮಾರ್ಗೋಪಾಯಗಳ ಬಗ್ಗೆ ಉಪನ್ಯಾಸ ನೀಡಿದರು. ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ವೇದಿಕೆಯಲ್ಲಿ ಭಟ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣ ಜಿ., ಸಿಡಿಪಿಓ ಜಯಶ್ರೀ ನಾಯ್ಕ, ದಿ ನ್ಯೂ ಇಂಗ್ಲೀಷ್ ಸ್ಕೂಲ್ ಮುಖ್ಯೋಪಾಧ್ಯಾಯ ಎಮ್.ಕೆ.ನಾಯ್ಕ, ಡಾ.ಪ್ರಿಯಾ ಗೋನ್ಸಾಲೀಸ್ ಮುಂತಾದವರು ಉಪಸ್ಥಿತರಿದ್ದರು.

ಡಾ.ಮೂರ್ತಿರಾಜ್ ಭಟ್ ಎಲ್ಲರನ್ನೂ ಸ್ವಾಗತಿಸಿದರು. ಭಟ್ಕಳ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಈರಯ್ಯ ದೇವಡಿಗ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಪೂರ್ವದಲ್ಲಿ ದಿ ನ್ಯೂ ಇಂಗ್ಲೀಷ್ ಸ್ಕೂಲ್‍ನಿಂದ ಹೊರಟ ಮಲೇರಿಯಾ ವಿರೋಧಿ ಜಾಥಾವು ಶಂಶುದ್ದೀನ್ ಸರ್ಕಲ್ ಹಾಗೂ ಭಟ್ಕಳ ಶಹರ ಪೊಲೀಸ್ ಠಾಣೆಯ ಮಾರ್ಗವಾಗಿ ಸಾಗಿ ದಿ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ಸಮಾಪ್ತಿಯಾಯಿತು. ತಾಲೂಕಿನ ವಿವಿಧ ಭಾಗಗಳಿಂದ ಬಂದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ನ್ಯೂ ಇಂಗ್ಲೀಷ್ ಸ್ಕೂಲ್ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡರು.

Leave a Reply

Please enter your comment!
Please enter your name here