ಭಟ್ಕಳ: ಕಾನೂನು ನಿಂತ ನೀರಲ್ಲ, ಹರಿಯುವ ನೀರಾಗಿದೆ : ನ್ಯಾ. ಎಸ್. ಆರ್.ನಾಯಕ್

ಭಟ್ಕಳ : ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆ ಹಾಗೂ ಕಾನೂನಿಗೆ ಹೆಚ್ಚಿನ ಮಹತ್ವವಿದೆ. ಮನುಷ್ಯನ ಆಗುಹೋಗುಗಳಿಗೆ ಬದ್ಧತೆ ತೋರಿಸುವ, ಆ ಮೂಲಕ ಸ್ವೇಚಾಚ್ಛಾರಕ್ಕೆ ನಿಯಂತ್ರಣ ಹೇರಲು ಜಾರಿಗೆ ಬಂದಿರುವ ಕಾನೂನುಗಳು ಪ್ರಜೆಗಳ ಆಶೋತ್ತರಗಳಿಗೆ ವರ್ತಮಾನದಲ್ಲಿ ಪ್ರಸ್ತುತವಾಗುವುದು ಮುಖ್ಯವಾಗುತ್ತದೆ. ಕಾನೂನು ನಿಂತ ನೀರಲ್ಲ, ಹರಿಯುವ ನೀರಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಹೇಳಿದ್ದಾರೆ.

ಅವರು ಶನಿವಾರ ಸಂಜೆ ತಾಲೂಕಿನ ಬಾರ್ ಅಸೋಶಿಯೇಶನ್ ಆಶ್ರಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸಂಸ್ಕಾರ, ಸಮಾನತೆಯನ್ನು ಪ್ರತಿಪಾದಿಸಿದ ಬುದ್ಧ, ಬಸವಣ್ಣರ ಚಿಂತನೆಗಳನ್ನು ಕಪಾಟಿನಲ್ಲಿಟ್ಟು ತದ್ವಿರುದ್ಧ ನಡವಳಿಕೆಯನ್ನು ಪ್ರದರ್ಶಿಸಲಾಗುತ್ತಿದೆ. ಹೊಟ್ಟೆಗೆ ಅನ್ನಕ್ಕಾಗಿ ಪರದಾಡುವವರ ಮೇಲೆ ದೊಡ್ಡ ದೊಡ್ಡ ಕಾನೂನು ಪುಸ್ತಕಗಳನ್ನು ಹೇರಲಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಗಾಂಧಿ, ಅಂಬೇಡ್ಕರರ ಆಸೆಗಳು ಈಡೇರುತ್ತಿಲ್ಲ. ಲಿಂಗಭೇದ, ಮೇಲು ಕೀಳು, ಜಾತಿ ಧರ್ಮ ತಾರತಮ್ಯಗಳು ಎಲ್ಲೆಡೆ ತಾಂಡವವಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾನೂನು ಪಟ್ಟಿಗಳನ್ನೆಲ್ಲ ಸಮೀಕ್ಷೆಗೊಳಪಡಿಸುವ, ವರ್ತಮಾನಕ್ಕೆ ಅಗತ್ಯವಿರುವ ಕಾನೂನುಗಳನ್ನು ಹೊಸದಾಗಿ ರಚಿಸುವ, ಕಾನೂನು ಪ್ರಕ್ರಿಯೆಗಳಿಂದ ಹೊರಗುಳಿಯಲು ಯತ್ನಿಸುವ ಚಟುವಟಿಕೆಗಳ ಮೇಲೆ ಕಾನೂನು ವಿಧಿಸುವ ಬಗ್ಗೆ ನ್ಯಾಯಾಧೀಶರು, ವಕೀಲರು, ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರು ಎಲ್ಲರೂ ಚಿಂತನೆ ನಡೆಸುವ ಅಗತ್ಯವಿದೆ. ಆದ್ದರಿಂದಲೇ ಎಲ್ಲ ವಲಯಗಳಿಂದಲೂ ಅಗತ್ಯ ಸಲಹೆಗಳನ್ನು ಕಾನೂನು ಆಯೋಗದ ವತಿಯಿಂದ ಕೇಳಲಾಗುತ್ತಿದ್ದು, ಅದರ ಆಧಾರದ ಮೇಲೆ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ವಿವರಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಜೆಎಮ್‍ಎಫ್‍ಸಿ ನ್ಯಾಯಮೂರ್ತಿ ರೇಶ್ಮಾ ರೊಡ್ರಿಗೀಸ್ ಕಾನೂನು ಜಾರಿಯಲ್ಲಿ ಎದುರಿಸಬೇಕಾದ ತೊಡಕುಗಳನ್ನು ಪ್ರಸ್ತಾಪಿಸಿ, ಜಾನುವಾರು ಹತ್ಯೆ ನಿಷೇಧ ಕಾಯ್ದೆಯಡಿ ಜಫ್ತುಪಡಿಸಕೊಳ್ಳಲಾದ ಜಾನುವಾರುಗಳನ್ನು ರಕ್ಷಿಸಿಡಬೇಕಾದ ಕಾರ್ಯ ದೊಡ್ಡ ಸವಾಲಾಗಿ ಪರಿಣಮಿಸಿದೆ. ದಂಡ ವಿಧಿಸಿ ಪ್ರಕರಣವನ್ನು ಮುಗಿಸುವುದು ಸಮರ್ಪಕವಾಗಿದ್ದರೆ ಅಂತಹ ಕಾನೂನಿನ ಅಗತ್ಯತೆಯ ಬಗ್ಗೆಯೂ ಪ್ರಶ್ನೆ ಏಳುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಮಾಜಿ ಶಾಸಕ ಜೆ.ಡಿ.ನಾಯ್ಕ, ಹಿರಿಯ ನ್ಯಾಯವಾದಿ ಆರ್.ಆರ್.ಶ್ರೇಷ್ಠಿ, ಭಟ್ಕಳ ವಕೀಲರ ಸಂಘದ ಕಾರ್ಯದರ್ಶಿ ರಾಜವರ್ಧನ ನಾಯ್ಕ ಉಪಸ್ಥಿತರಿದ್ದರು. ನ್ಯಾಯವಾದಿ ಎಮ್.ಎಲ್.ನಾಯ್ಕ ಅತಿಥಿಗಳನ್ನು ಸ್ವಾಗತಿಸಿ, ಪರಿಚಯ ಮಾಡಿಕೊಟ್ಟರು. ನ್ಯಾಯವಾದಿ ದುರ್ಗಪ್ಪ ಮೊಗೇರ ವಂದಿಸಿದರು.

Leave a Reply

Please enter your comment!
Please enter your name here