ಭಟ್ಕಳ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭಟ್ಕಳಿಗನಿಗೆ ಕಿರಿಕಿರಿ!

ಭಟ್ಕಳ: ಭಟ್ಕಳಿಗನೆಂಬ ಕಾರಣಕ್ಕೆ ವಿದೇಶಕ್ಕೆ ತೆರಳಲು ಅನುವಾಗಿದ್ದ ಯುವಕನೋರ್ವನನ್ನು ತಡೆದು ನಿಲ್ಲಿಸಿದ ವಲಸೆ ವಿಭಾಗದ ಅಧಿಕಾರಿಗಳು, ವಿಚಾರಣೆಯ ನೆಪದಲ್ಲಿ ಆತನ ಕಿರಿಕಿರಿ ನೀಡಿ ಪ್ರಯಾಣ ಮೊಟಕಿಗೆ ಕಾರಣವಾದ ಘಟನೆ ಬುಧವಾರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

bhatkal

 ಅಧಿಕಾರಿಗಳಿಂದ ಸತಾಯಿಸಲ್ಪಟ್ಟ ಯುವಕನನ್ನು ತಾಲೂಕಿನ ಜಾಮೀಯಾ ಇಸ್ಲಾಮಿಯಾದ ವಿದ್ಯಾರ್ಥಿ ಅರ್ಸಲಾನ್ ಅಹ್ಮದ್ ಖಾಜಿ (21) ಎಂದು ಗುರುತಿಸಲಾಗಿದೆ. ಈತ ತನ್ನ ಮದರಸಾ ರಜೆಯ ಅವಧಿಯನ್ನು ದುಬೈನಲ್ಲಿರುವ ತನ್ನ ತಂದೆ ತಾಯಿಗಳೊಂದಿಗೆ ಕಳೆಯುವ ಉದ್ದೇಶದೊಂದಿಗೆ ಬುಧವಾರ ನಸುಕಿನ ವೇಳೆ 4.35ರ ವಿಮಾನವನ್ನೇರಲು ರಾತ್ರಿ 1 ಗಂಟೆಯ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಎಂದು ಹೇಳಲಾಗಿದೆ. ಈತ ತನ್ನ ಪಾಸ್‍ಪೋರ್ಟ, ವೀಸಾವನ್ನು ತಪಾಸಣೆಗೆ ನೀಡಿದ್ದು, ನಂತರ ವಲಸೆ ವಿಭಾಗದ ಅಧಿಕಾರಿಗಳು ವಿಚಾರಣೆಗಾಗಿ ಅರ್ಸಲಾನ್‍ನನ್ನು ಕರೆಯಿಸಿಕೊಂಡಿದ್ದಾರೆ. `ನಿನಗೆ ಯಾಸೀನ್ ಭಟ್ಕಳನ ಪರಿಚಯ ಇದೆಯೇ?’ ಎಂದು ಕೇಳಿದ ಅಧಿಕಾರಿಯೋರ್ವ, ಅರ್ಸಲಾನ್ `ಇಲ್ಲ’ ಎನ್ನುತ್ತಿದ್ದಂತೆಯೇ ಭಟ್ಕಳದವನಾಗಿ ನಿನಗೆ ಆತನ ಪರಿಚಯವಿಲ್ಲವೇ? ಎಂದು ಅಲ್ಲಿಯೇ ಕುಳ್ಳಿರಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ರೀತಿ 2-3 ಬಾರಿ ( 4 ಗಂಟೆಗೂ ಹೆಚ್ಚು ಕಾಲ) ವಿಚಾರಣೆ ನಡೆಯುವಷ್ಟರಲ್ಲಿ ವಿಮಾನ ಅಲ್ಲಿಂದ ಹೊರಟು ಹೋಗಿದೆ. ಅರ್ಸಲಾನ್ ಮಾರನೆಯ ದಿನ ಮತ್ತೆ 9 ಸಾವಿರಕ್ಕೂ ಹೆಚ್ಚು ಹಣ ನೀಡಿ ಟಿಕೇಟ್ ಖರೀದಿಸಿ ಗುರುವಾರದ ವಿಮಾನದಲ್ಲಿ ತಂದೆ ತಾಯಿಗಳಿದ್ದಲ್ಲಿಗೆ ತೆರಳಿದ್ದಾನೆ ಎಂದು ಹೇಳಲಾಗಿದೆ.

 ಭಟ್ಕಳ ತಂಜೀಮ್ ಸಿಡಿಮಿಡಿ: ಭಟ್ಕಳಿಗನೆಂಬ ಕಾರಣಕ್ಕೆ ವಲಸೆ ಅಧಿಕಾರಿಗಳು ಯುವಕನಿಗೆ ಹಾನಿಯನ್ನುಂಟು ಮಾಡಿದ ಬಗ್ಗೆ ಭಟ್ಕಳ ಮುಸ್ಲೀಮರ ಪರಮೋಚ್ಚ ಸಂಸ್ಥೆ ಮಜ್ಲಿಸೇ-ಇಸ್ಲಾ-ವ ತಂಜೀಮ್ ಆಕ್ರೋಶ ವ್ಯಕ್ತಪಡಿಸಿದೆ. ಇದು ಅಧಿಕಾರಿಗಳ ಉದ್ಧಟತನವಾಗಿದ್ದು, ಈ ಸಂಬಂಧ ಅಧಿಕಾರಿಯ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು ನೀಡಲು ಮುಂದಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.

Leave a Reply