ಭಟ್ಕಳ: ವಿದ್ಯುತ್ ಬಿಲ್‍ನಲ್ಲಿ ಏರುಪೇರು: ಭಟ್ಕಳ ಹೆಸ್ಕಾಂಗೆ ಮುತ್ತಿಗೆ

ಭಟ್ಕಳ: ಬೇಕಾಬಿಟ್ಟಿಯಾಗಿ ವಿದ್ಯುತ್ ಬಿಲ್ ಏರಿಕೆ ಮಾಡಿ ರಶೀದಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಅಸಮಾಧಾನಗೊಂಡ ತಾಲೂಕಿನ ಪುರಸಭಾ ವ್ಯಾಪ್ತಿಯ ಶೌಕತ್‍ಅಲಿ ರೋಡ್ ನಿವಾಸಿಗಳು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.

ನಮ್ಮ ಕೇರಿಯಲ್ಲಿ ಹೊಸ ವಿದ್ಯುತ್ ಮೀಟರುಗಳನ್ನು ಅಳವಡಿಸಿದ ನಂತರ ವಿದ್ಯುತ್ ಬಿಲ್‍ನಲ್ಲಿಯೂ ಏರಿಕೆಯಾಗಿದೆ. ನಮಗೆ ಇಷ್ಟು ಹಣವನ್ನು ಭರಿಸಲು ಸಾಧ್ಯವಿಲ್ಲ. ಇದಕ್ಕೆ ಹೆಸ್ಕಾಂ ಇಲಾಖೆಯೇ ಹೊಣೆಯಾಗಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಭಟ್ಕಳ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ, ವಿದ್ಯುತ್ ಬಿಲ್ ಪಾವತಿಯನ್ನು ಆನ್‍ಲೈನ್‍ಗೊಳಿಸಲು ಇಲಾಖೆ ಕ್ರಮ ಕೈಗೊಂಡಿದೆ. ಹಳೆಯ ವಿದ್ಯುತ್ ಮೀಟರುಗಳನ್ನು ಬದಲಿಸಿ ಹೊಸ ಮೀಟರ್ ಅಳವಡಿಸುವ ಕೆಲಸವೂ ಪ್ರಗತಿಯಲ್ಲಿದೆ. ಕೆಲ ತಾಂತ್ರಿಕ ದೋಷದಿಂದಾಗಿ ವಿದ್ಯುತ್ ಬಿಲ್ ಏರುಪೇರಾಗಿರುವುದು ನಿಜ. ಆದರೆ ಸಂಪೂರ್ಣವಾಗಿ ಆನ್‍ಲೈನ್‍ಗೆ ಅಳವಡಿಸುವ ಕಾರ್ಯ ಪೂರ್ಣಗೊಂಡ ನಂತರ ಎಲ್ಲವೂ ಸರಿಯಾಗಲಿದೆ. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಸಮಾಧಾನ ಪಡಿಸಿದರು.

ಈ ಸಂದರ್ಭದಲ್ಲಿ ನಯೀಮ್ ಮೋಟಿಯಾ, ಅನ್ಸಾರ್ ಮಟ್ಟಾ, ದಿಲ್‍ಶಾದ್, ಫಾತಿಮಾ, ಬಿಬಿ ಖತೀಜಾ ಮುಂತಾದವರು ಉಪಸ್ಥಿತರಿದ್ದರು.

Leave a Reply