ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಸಿಐಡಿಗೆ, ಆರೋಪಿಗಳಿಗೆ ಅ.24 ರ ವರೆಗೆ ನ್ಯಾಯಾಂಗ ಬಂಧನ

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಸಿಐಡಿಗೆ, ಆರೋಪಿಗಳಿಗೆ ಅ.24 ರ ವರೆಗೆ ನ್ಯಾಯಾಂಗ ಬಂಧನ

ಉಡುಪಿ: ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಿರುವ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣವನ್ನು ರಾಜ್ಯ ಸರಕಾರ ಮಂಗಳವಾರ ಸಿಐಡಿಗೆ ಹಸ್ತಾಂತರಿಸಿದೆ ಎಂದು ತಿಳಿದು ಬಂದಿದೆ.

ತೀವ್ರ ಕುತೂಹಲ ಕೆರಳಿಸಿದ್ದ ಹಾಗೂ ಅನುಮಾನಗಳಿಗೆ ಕಾರಣವಾಗಿದ್ದ ಭಾಸ್ಕರ್ ಶೆಟ್ಟಿಯವರ ಕೊಲೆ ಪ್ರಕರಣದ ತನಿಖೆಯ ಕುರಿತು ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದವು. ಪೋಲಿಸರ ಆರಂಬಿಕ ತನಿಖೆಯಲ್ಲಿ ಲೋಪವಾಗುವುದರೊಂದಿಗೆ ಸಾಕ್ಷ ನಾಶವಾಗಿದೆ ಎನ್ನುವ ಗಂಭೀರ ಆರೋಪಗಳು ಕೇಳಿಬಂದಿದ್ದವು. ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ, ಭಾಸ್ಕರ್ ಶೆಟ್ಟಿಯವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಭಾಸ್ಕರ್ ಶೆಟ್ಟಿಯವರ ತಾಯಿ ಗುಲಾಬಿ ಶೆಟ್ಟಿ ಸೇರಿದಂತೆ ಹಲವಾರು ಸಂಘಸಂಸ್ಥೆಗಳು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮನವಿ ಕೂಡ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಸಚಿವ ಪ್ರಮೋದ್ ಮಧ್ವರಾಜ್ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ಬಳಿ ಮಾತುಕತೆ ನಡೆಸಿ ಮನವಿ ಮಾಡಿಕೊಂಡಿದ್ದರು.

ಇದರೊಂದಿಗೆ ಪ್ರಕರಣದಲ್ಲಿ ಕರ್ತವ್ಯ ಲೋಪ ಮಾಡಿದ ಹಿಂದಿನ ವಿಚಾರಣಾಧಿಕಾರಿ ಗಿರೀಶ್ ಅವರನ್ನು ವರ್ಗಾವಣೆ ಮಾಡುವಂತೆ ಕೂಡ ಗೃಹಸಚಿವರನ್ನು ಪ್ರಮೋದ್ ಮಧ್ವರಾಜ್ ವಿನಂತಿಸಿದ್ದಾರೆ.

ಈ ನಡುವೆ ಪೋಲಿಸ್ ಕಸ್ಟಡಿಯಲ್ಲಿದ್ದ ಮೂವರು ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಅವರನ್ನು ಉಡುಪಿ ನ್ಯಾಯಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಮೂವರಿಗೆ ಅಗೊಸ್ತ್ 24 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ನ್ಯಾಯಾಂಗ ಬಂಧನಕ್ಕೆ ಒಳಗಾದ ಆರೋಪಿಗಳಾದ ನವನೀತ್ ಮತ್ತು ನಿರಂಜನ್ ಭಟ್ಟನನ್ನು ಹಿರಿಯಡ್ಕ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ದರೆ, ರಾಜೇಶ್ವರಿಯನ್ನು ಮಂಗಳೂರು ಕಾರಾಗೃಹಕ್ಕೆ ಕಳುಹಿಸಲಾಯಿತು.

Leave a Reply

Please enter your comment!
Please enter your name here