ಮಂಗಳೂರಿನ ಲಕ್ಷ್ಮಿ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್​ನ ವಿದ್ಯಾರ್ಥಿನಿಯರಿಗೆ ಎಂಆರ್​ಎಸ್​ಎ ಸೂಪರ್ ಬಗ್ ಸೋಂಕು, ಮುಷ್ಕರ

ಮಂಗಳೂರು: ಮಂಗಳೂರಿನ ಲಕ್ಷ್ಮಿ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್​ನ ವಿದ್ಯಾರ್ಥಿನಿಯರಿಗೆ ’ಎಂಆರ್​ಎಸ್​ಎ ಸೂಪರ್​ಬಗ್’ (ಮೆಥಿಲಿಸಿನ್-ರೆಸಿಸ್ಟೆಂಟ್ ಸ್ಟಾಫಿಲೊಕೊಕ್ಕಸ್ ಔರೆಯಸ್) ಸೋಂಕು ತಗುಲಿದ್ದು, ಕಾಲೇಜಿನ ವಿದ್ಯಾರ್ಥಿಗಳು ಸೋಂಕಿನ ವಿರುದ್ಧ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟಿಸಿ ಶನಿವಾರ ಮುಷ್ಕರ ಆರಂಭಿಸಿದ್ದಾರೆ.

Laxmi_memorial_protest-012 Laxmi_memorial_protest-011

ವರದಿಗಳ ಪ್ರಕಾರ ಬಹುತೇಕ ಕೇರಳದ ನಿವಾಸಿಗಳಾದ ಕಾಲೇಜು ವಿದ್ಯಾರ್ಥಿನಿಯರ ಪೈಕಿ ಸುಮಾರು 80ರಿಂದ 100 ಮಂದಿಗೆ ಈ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ.

ಈ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾವು ವ್ಯಾಪಕವಾಗಿ ಬಳಸಲಾಗುವ ಹಲವಾರು ಪ್ರತಿಜೀವಕಗಳಿಗೆ (ಆಂಟಿಬಯೋಟಿಕ್ಸ್) ಬಗ್ಗುವುದಿಲ್ಲ, ಹೀಗಾಗಿ ಜೀವ ಬೆದರಿಕೆ ಒಡ್ಡುವಂತಹ ಅಂಟುರೋಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂಬುದು ತಜ್ಞ ವೈದ್ಯರ ಅಭಿಪ್ರಾಯ. ಕಾಲೇಜಿನ ವಿದ್ಯಾರ್ಥಿನಿಯರು ಹೇಳುವ ಪ್ರಕಾರ ಶಿಕ್ಷಣ ಸಂಸ್ಥೆಯು ಮೊದಲಿಗೆ ಈ ಸೋಂಕು ಇರುವುದನ್ನೇ ಮುಚ್ಚಿ ಹಾಕಲು ಯತ್ನಿಸಿದೆ. ಆದರೆ ಬಳಿಕ ಚಿಕಿತ್ಸಾ ವೆಚ್ಚ ಭರಿಸಲು ಒಪ್ಪಿಕೊಂಡಿದೆ ಎನ್ನಲಾಗಿದೆ.

ಕೊಟ್ಟಾಯಂ ವಿದ್ಯಾರ್ಥಿಯೊಬ್ಬರು ಹೇಳುವ ಪ್ರಕಾರ ಸುಮಾರು 100 ನರ್ಸಿಂಗ್ ವಿದ್ಯಾರ್ಥಿಗಳಿಗೆ ಎಂಆರ್​ಎಸ್​ಎ ಸೋಂಕು ತಗುಲಿರುವುದು ಪರೀಕ್ಷೆಗಳಲ್ಲಿ ದೃಢಪಟ್ಟಿದೆ ಎಂದು ಹೇಳಲಾಗುತ್ತಿದೆ.

ಆರಂಭದಲ್ಲಿ ಇದು ನೂರಾರು ಮಂದಿ ಸಾವಿಗೆ ಕಾರಣವಾಗಿರುವ ‘ಎಂಇಆರ್​ಎಸ್’ (ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ ಎಂದು ವದಂತಿ ಹರಡಿತ್ತು. ಆದರೆ ಇದು ಎಂಆರ್​ಎಸ್​ಎ ಖಚಿತಗೊಂಡಿದೆ. ಇದು ಚರ್ಮದ ಸೋಂಕು, ಸೂಕ್ತ ಚಿಕಿತ್ಸೆ ಪಡೆಯದೇ ಇದ್ದರೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

‘ಎಂಆರ್​ಎಸ್​ಎ ಸೋಂಕಿನ ಲಕ್ಷಣಗಳು ಮೊದಲಿಗೆ ಆಸ್ಪತ್ರೆಯ ಹೆರಿಗೆ ಪೂರ್ವ ವಾರ್ಡಿನ ಕೆಲವು ವಿದ್ಯಾರ್ಥಿನಿಯರಲ್ಲಿ ಕಾಣಿಸಿತು. ನನ್ನ ತಂಡವನ್ನು (ನಂತರದ ತಂಡ) ಕೆಲಸಕ್ಕೆ ಕಳುಹಿಸಿದಾಗ, ಆಸ್ಪತ್ರೆಯ ಅಧಿಕಾರಿಗಳು ನನಗೆ ವಾಸ್ತವವನ್ನು ತಿಳಿಸಲಿಲ್ಲ. ಹಿಂದಿನ ತಂಡದ ವಿದ್ಯಾರ್ಥಿನಿಯರ ಪರೀಕ್ಷೆಯ ಫಲಿತಾಂಶದ ಬಳಿಕ, ನಮಗೂ ಸೋಂಕು ತಗುಲಿದ್ದು ಪರೀಕ್ಷೆಯಲ್ಲಿ ದೃಢಪಟ್ಟಿತು’ ಎಂದು ವಿದ್ಯಾರ್ಥಿನಿ ಹೇಳಿದರು.

ಸೋಂಕು ತಗುಲಿರುವ ಬಗ್ಗೆ ದೃಢಪಡಿಸಿಕೊಳ್ಳುವ ಸಲುವಾಗಿ ಮರು ಪರೀಕ್ಷೆ ನಡೆಸುವಂತೆ ವಿದ್ಯಾರ್ಥಿನಿಯರು ಮನವಿ ಮಾಡಿದಾಗ ಅಧಿಕಾರಿಗಳು ಅದಕ್ಕೆ ನಿರಾಕರಿಸಿದರು. ಬದಲಾಗಿ ಉಳಿದ ವಿದ್ಯಾರ್ಥಿನಿಯರಿಂದ ಪ್ರತ್ಯೇಕವಾಗಿ ಇರಿ ಎಂದು ಸೂಚಿಸಿದರು. ಸೋಂಕು ತಗುಲಿದ ವಿದ್ಯಾರ್ಥಿನಿಯರನ್ನು ಆಮೇಲಿನ ವಾರ ಹೆರಿಗೆ ಪೂರ್ವ ವಾರ್ಡ್​ಗೆ ಕೆಲಸಕ್ಕೆ ಕಳುಹಿಸಲಾಯಿತು ಎಂದು ಹೇಳಲಾಗಿದೆ.

’ನಾವು ವಿಷಯವನ್ನು ಪ್ರಾಂಶುಪಾಲರಿಗೆ ತಿಳಿಸಿದಾಗ, ಕಾಲೇಜು ಇಂತಹುದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ, ಎಚ್​ಐವಿ ಪಾಸಿಟಿವ್ ಬಂದರೂ ನಾವು ಚಿಂತಿಸುವುದಿಲ್ಲ’ ಎಂದು ಆಕೆ ಹೇಳಿದರು’ ಎಂಬುದು ವಿದ್ಯಾರ್ಥಿನಿಯರ ದೂರು.

ಏನಿದ್ದರೂ, ಪ್ರಾಂಶುಪಾಲರಾದ ಡಾ. ಲಾರಿಸ್ಸಾ ಮಾರ್ಥಾ ಸ್ಯಾಮ್್ಸ ಅವರು ’ಕೆಲವೇ ಕೆಲವು ವಿದ್ಯಾರ್ಥಿನಿಯರಿಗೆ ಎಂಆರ್​ಎಸ್​ಎ ಸೋಂಕು ತಗುಲಿದ್ದು, ಅವರಿಗೆ ಪ್ರತಿಜೀವಕ (ಆಂಟಿ ಬಯೋಟಿಕ್ಸ್) ನೀಡಲಾಗಿದೆ ಎಂದು ಹೇಳಿದ್ದಾರೆ. ಆಸ್ಪತ್ರೆ ಮತ್ತು ಕಾಲೇಜಿನ ಕೆಲಸ ಕಾರ್ಯಗಳಿಗೆ ಇದರಿಂದ ಯಾವುದೇ ಧಕ್ಕೆ ಉಂಟಾಗಿಲ್ಲ ಎಂದೂ ಅವರು ಹೇಳಿದ್ದಾರೆ.

ಏನಿದು ಎಂಆರ್​ಎಸ್​ಎ?

ಇದು ಮೆಥಿಸಿಲ್ಲಿನ್- ರೆಸಿಸ್ಟೆಂಟ್ ಸ್ಟಾಫಿಲೊಕೊಕ್ಕಸ್ ಔರೆಯಸ್ (ಎಂಆರ್​ಎಸ್​ಎ) ಎಂದು ಕರೆಯಲಾಗುವ ಬ್ಯಾಕ್ಟೀರಿಯಾಗಳ ಅತ್ಯಂತ ಸಣ್ಣ ಗುಂಪು. ಇದನ್ನು ಸೂಕ್ಷ್ಮದರ್ಶಕದಲ್ಲಿ ಮಾತ್ರವೇ ಕಾಣಲು ಸಾಧ್ಯ. ಸಾಮಾನ್ಯವಾಗಿ ‘ಸ್ಟಾಫ್’ ಎಂದು ಕರೆಯಲಾಗುವ ಈ ಬ್ಯಾಕ್ಟೀರಿಯಾ ಚರ್ಮ, ಶ್ವಾಸಕೋಶ ಮತ್ತು ಇತರ ಪ್ರದೇಶ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಸೋಂಕಿಗೆ ಕಾರಣವಾಗುತ್ತದೆ. ಈ ’ಎಂಆರ್​ಎಸ್​ಎ’ ಬ್ಯಾಕ್ಟೀರಿಯಾವನ್ನು ಕೆಲವೊಮ್ಮೆ ’ಸೂಪರ್ ಬಗ್’ ಎಂದು ಕರೆಯಲಾಗುತ್ತದೆ ಏಕೆಂದರೆ ಅದು ಹಲವಾರು ಆಂಟಿಬಯೋಟಿಕ್ಸ್​ಗಳಿಗೆ ಜಗ್ಗುವುದಿಲ್ಲ.

ತಜ್ಞರ ಪ್ರಕಾರ ಬಹುತೇಕ ಎಂಆರ್​ಎಸ್​ಎ ಸೋಂಕುಗಳು ಅತ್ಯಂತ ಅಲ್ಪ ಪ್ರಮಾಣದವಾಗಿದ್ದರೂ, ಕೆಲವೊಮ್ಮೆ ಪ್ರಾಣಾಪಾಯಕ್ಕೂ ಕಾರಣವಾಗಬಲ್ಲವು. ಉಸಿರಾಟದಿಂದ ಅಥವಾ ಚರ್ಮ-ಚರ್ಮ ಸಂಪರ್ಕದಿಂದ ಸೋಂಕು ಹರಡಬಹುದು. ನ್ಯೂಮೋನಿಯಾ ರೂಪದಲ್ಲಿ ಸಾಮಾನ್ಯವಾಗಿ ಬರಬಹುದಾದ ಈ ಸೋಂಕು, ಇತರ ಭಾಗಗಳಿಗೂ ವ್ಯಾಪಿಸಬಹುದು. ಎಂಆರ್​ಎಸ್​ಎ ಸೋಂಕಿನ ಲಕ್ಷಣಗಳು ನಿಮಗೆ ಅದು ಎಲ್ಲಿ ತಟ್ಟಿದೆ ಎಂಬುದನ್ನು ಅವಲಂಬಿಸಿದೆ. ಬಹುತೇಕ ಸಂದರ್ಭಗಳಲ್ಲಿ ಅದು ಚರ್ಮದಲ್ಲಿ ಕಜ್ಜಿ, ತುರಿಕೆ ರೂಪದಲ್ಲಿ ಸಣ್ಣ ಸೋಂಕಾಗಿ ಕಾಣಿಸುತ್ತದೆ. ಆದರೆ ಮುಂದೆ ಅದು ಗಂಭೀರ ಚರ್ಮದ ಅಂಟುರೋಗವಾಗಿ ಗಾಯದ ಜಾಗ, ರಕ್ತ ಮತ್ತು ಶ್ವಾಸಕೋಶದಲ್ಲಿ ಅಥವಾ ಮೂತ್ರನಾಳದಲ್ಲಿ ಹರಡಿ ಗಂಭೀರವಾಗುತ್ತದೆ.

ಇಂತಹ ಸಂದರ್ಭಗಳಲ್ಲಿ ಸಂಪೂರ್ಣ ವಿಶ್ರಾಂತಿ ಮತ್ತು ಸೂಕ್ತ ಚಿಕಿತ್ಸೆ ಅತ್ಯಗತ್ಯ. ಸೋಂಕು ಖಚಿತಗೊಂಡಲ್ಲಿ ಅದು ಹರಡದಂತೆ ತತ್ ಕ್ಷಣ ಸೂಕ್ತ ಮುಂಜಾಗರೂಕತಾ ಕ್ರಮಗಳನ್ನೂ ಕೈಗೊಳ್ಳಬೇಕು.

ಎಂಆರ್​ಎಸ್​ಎ ಮತ್ತು ಎಂಇಆರ್​ಎಸ್ (ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ ಮಧ್ಯೆ ಆರಂಭಿಕ ಹಂತದಲ್ಲಿ ಸಾಮ್ಯತೆಗಳಿವೆ. ಎಂಆರ್​ಎಸ್​ಎ ನುಮೋನಿಯಾ ರೂಪದಲ್ಲಿ ಸಾಮಾನ್ಯವಾಗಿ ಬರುತ್ತದೆ. ಇದರಲ್ಲಿ ಉಸಿರಾಟದ ತೊಂದರೆ ಮುಖ್ಯವಾಗಿ ಕಾಡುತ್ತದೆ. ಎಂಇಆರ್​ಎಸ್​ನಲ್ಲೂ ಮುಖ್ಯವಾಗಿ ಕಾಡುವುದು ಉಸಿರಾಟದ ತೊಂದರೆಯೇ.

Leave a Reply