ಮಂಗಳೂರು: ಅಹಿಂದ ಹಾಸ್ಟೆಲ್‍ಗಳ ಅವ್ಯವಹಾರ ತನಿಖೆ ನಡೆಯಲಿ -ಸುನೀಲ್ ಕುಮಾರ್

ಮಂಗಳೂರು: ಪಕ್ಷದ ಮಂಗಳೂರು ವಿಭಾಗ ಮಟ್ಟದ ಎಸ್.ಸಿ., ಎಸ್.ಟಿ., ಹಿಂ.ವ., ಮತ್ತು ಮಹಿಳಾ ಮೋರ್ಚಾಗಳ ವತಿಯಿಂದ ಸರಕಾರಿ ಬಾಲಕರ, ಬಾಲಕಿಯರ ಹಾಸ್ಟೆಲ್‍ಗಳ ಸ್ಥಿತಿಗತಿ ಅಧ್ಯಯನ 2015ರ ಕಾರ್ಯಗಾರವನ್ನು ಪಕ್ಷದ ಜಿಲ್ಲಾ ಕಚೇರಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರು ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಸುನೀಲ್ ಕುಮಾರ್ ಉದ್ಘಾಟಿಸಿದರು. ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿ ಅಧಿಕಾರದ ಗದ್ದುಗೆಗೆ ಹೇರಿದ ಸಿ.ಎಂ. ಸಿದ್ಧರಾಮಯ್ಯ ಈ ವರ್ಗದ ಅಭಿವೃದ್ಧಿಗೆ ಕಿಂಚಿತ್ತು ಗಮನ ಹರಿಸುತ್ತಿಲ್ಲ. ಸರಕಾರದ ಈ ವರ್ತನೆಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 3 ವರ್ಷಗಳೇ ಗತಿಸುತ್ತಾ ಬಂದರೂ ಹಾಸ್ಟೆಲ್‍ಗಳ ಅಭಿವೃದ್ಧಿಗೆ ಚಿಕ್ಕಾಸು ನೀಡಿಲ್ಲ. 2013-14ನೇ ಬಜೆಟ್‍ನಲ್ಲಿ ಸರಕಾರವೇ 100 ಹೊಸ ಹಾಸ್ಟೆಲ್ ಗಳನ್ನು ನಿರ್ಮಿಸುವುದಾಗಿ ನೀಡಿದ್ದ ಭರವಸೆ ಕಡತದಲ್ಲಿ ಉಳಿದುಕೊಂಡಿದೆ. ಬಿಜೆಪಿ ಸರಕಾರದ ಆಡಳಿತದಲ್ಲಿ ಹಾಸ್ಟೇಲ್‍ಗಳಿಗೆ 200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು ಎಂದು ಅವರು ನೆನಪಿಸಿಕೊಂಡರು.

1-bjp 2-bjp-001

ನಮ್ಮ ಪಕ್ಷವು ಬೇರೆ ರಾಜಕೀಯ ಪಕ್ಷಗಳಿಂದ ವಿಭಿನ್ನವಾದ ಪಕ್ಷವಾಗಿದ್ದು, ವಿಚಾರಧಾರೆಗಳು, ದೃಷ್ಟಿಕೋನಗಳು ಸಹ ವಿಭಿನ್ನವಾಗಿದ್ದು, ಕೇವಲ ಪಕ್ಷ ರಾಜಕಾರಣವನ್ನು ಮಾತ್ರ ಮಾಡದೆ ಇಡೀ ಸಮಾಜ ಮತ್ತು ಸಮುದಾಯಗಳ ಶೋಷಿತ ವರ್ಗಗಳ ವಿಕಾಸದ ಮೂಲಕ ರಾಷ್ಟ್ರವನ್ನು ಕಟ್ಟುವ ಉದ್ದೇಶದೊಂದಿಗೆ ಕಾರ್ಯವನ್ನು ಮಾಡುವ ವಿಚಾರಧಾರೆಯುಳ್ಳ ಪಕ್ಷವಾಗಿದೆ. ಆ ಹಿನ್ನಲೆಯಲ್ಲಿ ಪಕ್ಷದ ವಿವಿಧ ಮೋರ್ಚಾದ ರಾಜ್ಯ ಘಟಕಗಳು ರಾಜ್ಯದಲ್ಲಿರುವ ವಿವಿಧ ಹಾಸ್ಟೆಲ್‍ಗಳ ಪರಿಸ್ಥಿತಿಗಳ ಅಧ್ಯಯನವನ್ನು ಮಾಡಿ ನ್ಯೂನತೆಗಳು, ಕೊರತೆಗಳನ್ನು ಸರಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ವಸ್ತುನಿಷ್ಠ ವರದಿಯನ್ನು ಕೊಡುವುದರ ಮೂಲಕ ಸರಿ ಮಾಡುವ ಉದ್ದೇಶದೊಂದಿಗೆ ಈ ಕಾರ್ಯಗಾರದ ಮೂಲಕ ಮಾಹಿತಿಯನ್ನು ಪಡಕೊಂಡು ತಮ್ಮ ತಮ್ಮ ಜಿಲ್ಲೆಗಳ ವಿವಿಧ ವರ್ಗಗಳ ಹಾಸ್ಟೆಲ್‍ಗಳ ಅಧ್ಯಯನವನ್ನು ನಡೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ರಾಜ್ಯ ಎಸ್.ಸಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕರಾದ ಶ್ರೀ ಬಸವರಾಜ್ ನಾಯಕ್‍ರವರು ಗೋಷ್ಠಿಯಲ್ಲಿ ಮಾತನಾಡುತ್ತಾ ಹಾಸ್ಟೆಲ್ ಗಳಲ್ಲಿ ದಿಂಬು ಹಾಗೂ ಹಾಸಿಗೆ ಖರೀದಿಯಲ್ಲಿ ಕೋಟ್ಯಾಂತರ ರೂ.ಗಳ ಅವ್ಯವಹಾರ ನಡೆದಿದೆ. ಮಾರುಕಟ್ಟೆಯಲ್ಲಿ 153 ರೂ. ಲಭ್ಯವಾಗುವ ದಿಂಬನ್ನು 503 ರೂ.ಗೆ ಖರೀದಿಸಲಾಗಿದೆ. ಅದೇ ರೀತಿ 1700 ರೂ.ಗಳ ಹಾಸಿಗೆಯನ್ನು 3700 ರೂ.ಗೆ ಖರೀದಿಸಲಾಗಿದೆ ಎಂದು ಖಾತೆಯಲ್ಲಿ ಲೆಕ್ಕ ತೋರಿಸಲಾಗಿದೆಎಂದು ದೂರಿದರು. ಹಾಸ್ಟೆಲ್ ಗಳಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವುದನ್ನು ಸಮಾಜ ಕಲ್ಯಾಣ ಸಚಿವ ಆಂಜನೇಯರು ಅಧಿವೇಶನದಲ್ಲಿ ಒಪ್ಪಿಕೊಂಡಿದ್ದರೂ ಈ ಹಗರಣದಲ್ಲಿ ಭಾಗಿಯಾಗಿರುವ 3 ಅಧಿಕಾರಿಗಳ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಾರ್ಯಕ್ರಮವನ್ನು ಎಲ್ಲಾ ಮೋರ್ಚಾಗಳು ತಮ್ಮ ತಮ್ಮ ಜಿಲ್ಲೆಯಲ್ಲಿರುವ ಹಾಸ್ಟೆಲ್‍ಗಳ ಪಟ್ಟಿಯನ್ನು ಪಡಕೊಳ್ಳುವುದರ ಮೂಲಕ ಅಗೋಸ್ಟ್ 06 ರಿಂದ 10 ರವರೆಗೆ ಸಮಗ್ರವಾದ ಅಧ್ಯಯನವನ್ನು ನಡೆಸಿ ವರದಿ ನೀಡುವಂತೆ ಕೋರಿಕೊಂಡು, ಕಾರ್ಯದ ಯೋಜನೆಯನ್ನು ಹಮ್ಮಿಕೊಳ್ಳುವಂತೆ ಸಲಹೆಯನ್ನು ನೀಡಿದರು.

ಮಹಾಸಂಪರ್ಕ ಅಭಿಯಾನ ಕಾರ್ಯದ ಪೂರ್ಣ ಮಾಹಿತಿಯನ್ನು ರಾಜ್ಯ ಸಹಪ್ರಮುಖ್, ವಿ.ಪ.ಮಾಜಿ ಸದಸ್ಯ ಶ್ರೀ ಎಂ.ಮೋನಪ್ಪ ಭಂಡಾರಿಯವರು ನೀಡಿದರು. ಜಿಲ್ಲಾಧ್ಯಕ್ಷರಾದ ಶ್ರೀ ಪ್ರತಾಪಸಿಂಹ ನಾಯಕ್‍ರವರು ಕಾರ್ಯಗಾರದ ಸಮಾರೋಪವನ್ನು ನಡೆಸಿಕೊಟ್ಟರು.

ವೇದಿಕೆಯಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ರಾಜ್ಯ ಪರಿಶಿಷ್ಟ ವರ್ಗ(ಎಸ್.ಸಿ.)ದ ಉಪಾಧ್ಯಕ್ಷರಾದ ಶ್ರೀ ರುಕ್ಮಯ್ಯ ನಾಯಕ್ ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನಕಾರ್ಯದರ್ಶಿ ಶ್ರೀಮತಿ ರೂಪಾ ಡಿ.ಬಂಗೇರಾ ವಂದೇ ಮಾತರಂ ಹಾಡಿ, ಹಿಂ.ವರ್ಗ ಪ್ರಧಾನ ಕಾರ್ಯದರ್ಶಿ ಶ್ರೀ ಆರ್.ಸಿ.ನಾರಾಯಣ್ ಸ್ವಾಗತಿಸಿದರು. ಹಿಂ.ವರ್ಗದ ಜಿಲ್ಲಾ ಅಧ್ಯಕ್ಷರಾದ ಶ್ರೀ ಮೋಹನ್ ರಾಜ್ ಕೆ.ಆರ್. ವಂದನಾರ್ಪಣೆ ಸಲ್ಲಿಸಿ, ಎಸ್.ಟಿ.,ಮೋರ್ಚಾದ ಜಿಲ್ಲಾಧ್ಯಕ್ಷ ಶ್ರೀ ಮಂಜುನಾಥ್ ಎನ್.ಎಸ್.ರವರು ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು. ಕೊಡಗು, ಉಡುಪಿ ಮತ್ತು ದ.ಕ.ಜಿಲ್ಲೆಗಳ ಎಸ್.ಟಿ., ಎಸ್.ಸಿ., ಓ.ಬಿ.ಸಿ ಮತ್ತು ಮಹಿಳಾ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply