ಮಂಗಳೂರು: ಆನೆ ಹಾವಳಿ: ಉಭಯ ರಾಜ್ಯಗಳಿಂದ ಸೋಲಾರ್ ಬೇಲಿ ಅಳವಡಿಸಲು ನಿರ್ಧಾರ

Spread the love

ಮಂಗಳೂರು: ಸುಳ್ಯ ತಾಲೂಕಿನ ಕರ್ನಾಟಕ-ಕೇರಳ ಗಡಿ ಪ್ರದೇಶಗಳಲ್ಲಿ ಆನೆಗಳು ನಾಡಿಗೆ ಬಂದು ಹಾವಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇದರ ನಿಯಂತ್ರಣಕ್ಕೆ ಎರಡೂ ರಾಜ್ಯಗಳು ಸೋಲಾರ್ ಬೇಲಿ ಅಳವಡಿಸಲು ನಿರ್ಧರಿಸಲಾಗಿದೆ.

ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಬಿ.ಸಿ.ರೋಡ್‍ನಲ್ಲಿ ಸಚಿವರ ಕಚೇರಿಯಲ್ಲಿ ನಡೆದ ಉಭಯ ರಾಜ್ಯಗಳ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು. ಸುಳ್ಯ ತಾಲೂಕಿನ ಮಂಡೆಕೋಲು, ಅಜ್ಜಾವರ, ಆಲೆಟ್ಟಿ, ಮತ್ತಿತರ ಪ್ರದೇಶಗಳಲ್ಲಿ ಆನೆಗಳು ಕೇರಳ ಕಡೆಯಿಂದ ಬಂದು ಇಲ್ಲಿನ ಜನವಸತಿ ಪ್ರದೇಶಗಳಿಗೆ ದಾಳಿ ಮಾಡಿ ಅಪಾರ ಹಾನಿ ಮಾಡುತ್ತಿದೆ. ಬಾಳೆ, ತೆಂಗು, ಅಡಿಕೆ ಸೇರಿದಂತೆ ಅಪಾರ ಬೆಳೆ ಹಾನಿಯಾಗುತ್ತಿದ್ದು, ಸಾರ್ವಜನಿಕರು ಸಂಚರಿಸಲು ಆತಂಕಪಡುವಂತಾಗಿದೆ ಎಂದು ಸಚಿವರು ಹೇಳಿದರು.

rai

ಎರಡೂ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು. ಮುಂದಿನ ಎರಡು ತಿಂಗಳಿನಲ್ಲಿ ಸೋಲಾರ್ ಬೇಲಿ ಅಳವಡಿಸುವ ಕಾರ್ಯ ಪೂರ್ಣಗೊಳ್ಳಬೇಕು ಎಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮಾತನಾಡಿ,  ಸುಳ್ಯ ತಾಲೂಕಿನ ಗಡಿ ಭಾಗ, ಕೇರಳದ ದೇಲಂಪಾಡಿ, ಮುಳಿಯಾರ್ ಮತ್ತಿತರ ಕಡೆ  ಕಳೆದ ಮಾರ್ಚ್‍ನಿಂದ ಆನೆಗಳ ನಿರಂತರ ಹಾವಳಿ ಇದೆ. 5 ಆನೆಗಳು ಸಂಚರಿಸುತ್ತಿದ್ದು, ಸುಳ್ಯ ವ್ಯಾಪ್ತಿಯಲ್ಲಿ ಇದರ ನಿಯಂತ್ರಣಕ್ಕೆ ತುರ್ತಾಗಿ ಸೋಲಾರ್ ಬೇಲಿ ಅಳವಡಿಸಲಾಗುವುದು ಎಂದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ. ಹನುಮಂತಪ್ಪ, ಕಾಸರಗೋಡು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಇಂತಿಯಾಝ್, ಎಸಿಎಫ್ ಅಬ್ಬಾಸ್, ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬುಡಕಟ್ಟು ಜನರಿಗೆ ಅರಣ್ಯ ಹಕ್ಕು:  ಅನುಸೂಚಿತ ಬುಡಕಟ್ಟುಗಳ ಜನರಿಗೆ ಅರಣ್ಯ ಹಕ್ಕು ಕಾಯಿದೆಯಂತೆ ಭೂಮಿಯ ಹಕ್ಕು ನೀಡುವ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕರ್ನಾಟಕದ ಅಧಿಕಾರಿಗಳ ತಂಡವನ್ನು ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಿಗೆ ಕಳುಹಿಸಲಾಗುವುದು ಎಂದು ಅರಣ್ಯ ಸಚಿವ ರಮಾನಾಥ ರೈ ತಿಳಿಸಿದರು.

ಅವರು ತಮ್ಮ ಕಚೇರಿಯಲ್ಲಿ ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ, ಆಂಧ್ರ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಈ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಬುಡಕಟ್ಟು ಜನರಿಗೆ ಅರಣ್ಯ ಹಕ್ಕು ನೀಡಲಾಗಿದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸಲು ಅಧಿಕಾರಿಗಳ ತಂಡ ಕಳುಹಿಸಿ, ಕರ್ನಾಟಕದಲ್ಲೂ  ತ್ವರಿತಗತಿಯಲ್ಲಿ ಬುಡಕಟ್ಟು ಜನರಿಗೆ ಭೂಹಕ್ಕು ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಬುಡಕಟ್ಟು ಜನರ ಹಿತ ಕಾಪಾಡುವುದರೊಂದಿಗೆ ಅರಣ್ಯ ಸಂರಕ್ಷಣೆಯ ಉದ್ದೇಶವೂ ಕಾಯಿದೆಯಲ್ಲಿದೆ. ಅರಣ್ಯ ಪ್ರದಶದಲ್ಲಿ ಪಾರಂಪರಿಕವಾಗಿ ಕೃಷಿ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡ ಬುಡಕಟ್ಟು ಜನಾಂಗದವರಿಗೆ ಈ ಹಕ್ಕು ನೀಡಲಾಗುತ್ತದೆ ಎಂದು ಸಚಿವರು ಹೇಳಿದರು. ಕಂದಾಯ ಮತ್ತು ಅರಣ್ಯ ಭೂಮಿಯ ಸಮಸ್ಯೆ ಉದ್ಭವಿಸದಂತೆ ಎರಡೂ ಇಲಾಖೆಗಳು ಜಂಟಿಯಾಗಿ ಸರ್ವೇ ಮಾಡಿ, ತಮ್ಮ ವ್ಯಾಪ್ತಿಯ ಭೂಮಿಗಳನ್ನು ಗುರುತಿಸಬೇಕು ಎಂದು ಸಚಿವರು ಸೂಚಿಸಿದರು.

ಗ್ರಾಮ ಪಂಚಾಯತ್ ಪಿ.ಡಿ.ಓ. ಗಳಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ, ಬುಡಕಟ್ಟು ಜನಾಂಗದವರಿಂದ ಅರಣ್ಯ ಹಕ್ಕು ಕಾಯಿದೆಯಡಿ ಅರ್ಜಿಗಳನ್ನು ಪಡೆದುಕೊಳ್ಳಲು ಕ್ರಮ ವಹಿಸಬೇಕು. ಜೂನ್ 25ರಿಂದ ಈ ಬಗ್ಗೆ ಪ್ರಕ್ರಿಯೆಗಳು ಪ್ರಾರಂಭವಾಗಬೇಕು ಎಂದು ರಮಾನಾಥ ರೈ ತಿಳಿಸಿದರು.

ಡೀಮ್ಡ್ ಫಾರೆಸ್ಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯ ಬಗ್ಗೆ ಗೊಂದಲಗಳಿದ್ದವು. ಹಿಂದೆ ಪುನರ್ರಚಿತ ತಜ್ಞರ ಸಮಿತಿಯು ಜಿಲ್ಲೆಯಲ್ಲಿ 217244 ಎಕರೆ ಪ್ರದೇಶವನ್ನು ಡೀಮ್ಡ್ ಅರಣ್ಯ ಎಂದು ಪರಿಗಣಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗಿತ್ತು. ಈ ನಿಟ್ಟಿನಲ್ಲಿ ನಿಖರವಾಗಿ ಸಮೀಕ್ಷೆ ಮಾಡಿ ಇದೀಗ 146173 ಎಕರೆ ಪ್ರದೇಶವನ್ನು ಡೀಮ್ಡ್ ಫಾರಸ್ಟ್ ವ್ಯಾಪ್ತಿಯಿಂದ ಹೊರಗಿಡಲಾಗಿದೆ.  ಅಂತಿಮವಾಗಿ ಜಿಲ್ಲೆಯಲ್ಲಿ 78329 ಎಕರೆ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್‍ಗೆ ಯೋಗ್ಯವಾದ ಪ್ರದೇಶ ಎಂದು ಗುರುತಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ. ಹನುಮಂತಪ್ಪ ಸಭೆಗೆ ಮಾಹಿತಿ ನೀಡಿದರು.


Spread the love