ಮಂಗಳೂರು: ಆಮಂತ್ರಣ ಪತ್ರಿಕೆ ವಿವಾದದಲ್ಲಿ ಅಸಹಿಷ್ಣುತೆಯ ನಡೆ ನೋವು ತಂದಿದೆ ; ಜಿಲ್ಲಾಧಿಕಾರಿ ಇಬ್ರಾಹಿಂ

Spread the love

ಮಂಗಳೂರು: ಪುತ್ತೂರು ದೇವಳದ ಜಾತ್ರೆ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಪ್ರಕಟಿಸಿ ಯಾವುದೇ ಶಿಷ್ಟಾಚಾರ ಉಲ್ಲಂಘನೆ ಮಾಡಿಲ್ಲ. ಪ್ರಸ್ತುತ ನಡೆಯುತ್ತಿರುವ ಅನೀರೀಕ್ಷಿತ ಹಾಗೂ ಅಸಹಿಷ್ಣುತೆಯ ನಡೆ ತಮಗೆ ನೋವು ತಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಹೇಳಿದರು.
ಅವರು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಗುರುವಾರ ಪುತ್ತೂರು ದೇವಳ ಜಾತ್ರೆಯ ಆಮಂತ್ರಣ ಪತ್ರಿಕೆಯ ಬದಲಾವಣೆ ಕುರಿತಾದ ವಿಚಾರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ ಹಿಂದು ಧಾಮಿಕ ದತ್ತಿ ಕಾಯಿದೆಯ ಪೂಜಾ ವಿದಿವಿಧಾನಗಳಲ್ಲಿ ಹಿಂದೂಯೇತರಿಗೆ ಅವಕಾಶವಿಲ್ಲ ಎಂಬ ಉಲ್ಲೇಖವಿದೆಯೇ ಹೊರತು, ಆಮಂತ್ರಣ ನೀಡುವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಯಾರಾದರೂ ಹೇಳುವುದಾದರೆ ಸರಕಾರದಿಂದ ಸ್ಪಷ್ಟೀಕರಣ ಪಡೆದು ನೀಡಲಾಗುವುದು ಎಂದರು.
ಶಿಷ್ಟಾಚಾರದಂತೆ ಡಿಸಿಯ ನೆಲೆಯಲ್ಲಿ ಆಡಳಿತಾಕಾರಿ ನನ್ನ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿದ್ದು, ಅದಕ್ಕೆ ನನ್ನ ಅನುಮತಿ ಕೇಳಿರಲೂ ಇಲ್ಲ. ಶಿಷ್ಟಾಚಾರ ಬಗ್ಗೆ ಪುತ್ತೂರು ಶಾಸಕರ ಗಮನಕ್ಕೆ ತಂದಿದ್ದು, ಅವರಿಗೂ ಮನವರಿಕೆಯಾಗಿದೆ. ಲೋಪದೋಷ ಆಗಿರುವ ಬಗ್ಗೆ ಯಾರಾದರೂ ಸ್ಪಷ್ಟವಾಗಿ ಎತ್ತಿ ಹಿಡಿದಲ್ಲಿ ತಿದ್ದಿಕೊಳ್ಳಲು ಸಿದ್ಧ ಎಂದು ಅವರು ತಿಳಿಸಿದರು.
ತಾನು ಮೈಸೂರು ದಸರಾ ವೇಳೆ ಮೂರು ವರ್ಷ ಕಾಲ ವಿಶೇಷ ಅದಿಕಾರಿಯಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಜಿಲ್ಲೆಯಲ್ಲಿ ಎರಡು ವರ್ಷಗಳಲ್ಲಿ ದೇವಸ್ಥಾನಗಳ ಭದ್ರತೆ, ಸುರಕ್ಷತೆ, ಆಭರಣಗಳ ಲೆಕ್ಕಾಚಾರ ಮತ್ತಿತರ ವಿಷಯ ಕುರಿತು 25ಕ್ಕೂ ಹೆಚ್ಚು ಸಭೆ ನಡೆಸಿದ್ದೇನೆ. ಕೊಲ್ಲೂರು ಘಟನೆ ಮರುಕಳಿಸದಂತೆ ನಾಳೆ ಕೂಡಾ ಸಭೆ ಕರೆಯಲಾಗಿದೆ. ಪುತ್ತೂರು ದೇವಳಕ್ಕೆ ವಾಹನ ಮಂಜೂರು ಮಾಡಿಸಿದಾಗ, ಬೇಡ ಎಂದು ಯಾರೂ ಹೇಳಿರಲಿಲ್ಲ ಎಂದು ಎಂದು ಡಿಸಿ ಹೇಳಿದರು.
ಹಲವು ದೇವಸ್ಥಾನಗಳ ಪೂಜಾ ಕಾರ್ಯಕ್ರಮಗಳಲ್ಲ್ಲಿ ನಾನು ಭಾಗವಹಿಸಿ, ಪ್ರಸಾದವನ್ನೂ ಸ್ವೀಕರಿಸಿದ್ದೇನೆ. ಹಾಗಂತ ಅಂಕುರ ಪ್ರಸಾದ ಸ್ವೀಕರಿಸಿ ಎಂದು ಸವಾಲು ಹಾಕುವುದಕ್ಕೆ ಅರ್ಥವಿಲ್ಲ. ಈಗ ನಡೆಯುತ್ತಿರುವ ಅನಿರೀಕ್ಷಿತ ಹಾಗೂ ಅಸಹಿಷ್ಣುತೆಯ ನಡೆಯಿಂದ ನೋವಾಗಿದ್ದರೂ ಎಲ್ಲರನ್ನೂ ಒಗ್ಗೂಡಿಸುವುದು ನನ್ನ ಜವಾಬ್ದಾರಿ ಎಂದರು.
ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಪ್ರಕಟಿಸಿರುವ ಬಗ್ಗೆ ಪುತ್ತೂರು ಬಂದ್ ಮಾಡುವ ಬೆದರಿಕೆ ಕುರಿತ ಪ್ರಶ್ನೆಗೆ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಜತೆ ನಿಕಟ ಸಂಪರ್ಕದಲ್ಲಿದ್ದೇನೆ. ಕಾನೂನು ಮತ್ತು ಸ್ಯುವಸ್ಥೆಗೆ ಸಂಬಂದಿಸಿ ಗೃಹ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.
ತುಳುನಾಡು ಸೀಮೆಯ ಚರಿತ್ರೆ ಗಮನಿಸಿದರೆ ಹಿಂದು- ಮುಸ್ಲಿಮರ ನಡುವೆ ಅನ್ಯೋನ್ಯ ಸಂಬಂಧವಿದೆ. ಮೂಲ್ಕಿಯಲ್ಲಿ ಬಪ್ಪ ಬ್ಯಾರಿ, ಉದ್ಯಾವರ ಮಾಡ ದೈವಸ್ಥಾನ, ಕುಂಬಳೆಯಲ್ಲಿ ಆಲಿ ಚಾಮುಂಡಿ ಕ್ಷೇತ್ರಗಳಲ್ಲಿ ಇಂಥ ನಿದರ್ಶನಗಳಿವೆ. ಉತ್ತರ ಕರ್ನಾಟಕದ ಕೆಲವೆಡೆ ಮುಸ್ಲಿಮರು ಇಲ್ಲದಿದ್ದರೂ ಹಿಂದುಗಳು ಮೊಹರಂ ಆಚರಿಸುತ್ತಾರೆ. ಇಂಥ ಹಿರಿಮೆಯ ನಾಡಿನಲ್ಲಿ ಒಡಕು ಮೂಡಿಸುವುದು ಸರಿಯಲ್ಲ. ಇದರ ಬದಲಾಗಿ ಕೂಡಿ ಬಾಳುವ ಸಾಮರಸ್ಯದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಧಾರ್ಮಿಕ ದತ್ತಿ ಇಲಾಖೆಯಡಿ ಆರಾಧನಾ ಯೋಜನೆ, ತಸ್ದೀಕ್ ಅನುದಾನ ಜಿಲ್ಲಾದಿಕಾರಿಗೆ ಬರುತ್ತದೆ. ಅವರೇ ಅದನ್ನು ವಿವಿಧ ದೇವಸ್ಥಾನಗಳಿಗೆ ಬಿಡುಗಡೆ ಮಾಡುತ್ತಾರೆ. ಇಲ್ಲಿ ವಿವಾದಕ್ಕೆ ಅವಕಾಶ ಇಲ್ಲ ಎಂದು ಹೆಚ್ಚುವರಿ ಜಿಲ್ಲಾದಿಕಾರಿ ಕುಮಾರ ಹೇಳಿದರು.


Spread the love