ಮಂಗಳೂರು: ಏರ್ ಪೋಟ್೯ ಭೂಸ್ವಾಧೀನ: ಪರಿಹಾರ ಬಿಡುಗಡೆ

ಮಂಗಳೂರು: ವಿಮಾನನಿಲ್ದಾಣ ರನ್ ವೇ ವಿಸ್ತರಣೆಗೆ ಭೂಸ್ವಾಧೀನವಾಗಿದ್ದ ಭೂಮಾಲಕರಿಗೆ ರಾಜ್ಯ ಸರಕಾರ 34 ಕೋಟಿ ರೂ. ಪರಿಹಾರವನ್ನು ಇಂದು ಬಿಡುಗಡೆ ಮಾಡಿ ಆದೇಶಿಸಿದೆ.
ವಿಮಾನ ನಿಲ್ದಾಣದ 2ನೇ ರನ್ ವೇ ವಿಸ್ತರಣೆಗೆ 1990ರಲ್ಲಿ ಭೂಸ್ವಾಧೀನ ಮಾಡಲಾಗಿತ್ತು. ಆದರೆ ಹೆಚ್ಚುವರಿ ಪರಿಹಾರ ಕೋರಿ ಭೂಮಾಲಕರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯವು 77 ಮೊಕದ್ದಮೆಯಲ್ಲಿ ಸುಮಾರು ರೂ. 34 ಕೋಟಿ ಪರಿಹಾರ ನೀಡಲು ಆದೇಶಿಸಿತ್ತು.
ಈ ಪರಿಹಾರ ಪಾವತಿಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಮಧ್ಯೆ ಪರಿಹಾರ ಪಾವತಿಸಿಲ್ಲ ಎಂದು ಭೂಮಾಲಕರು, ಭೂಸ್ವಾಧಿನಾಧಿಕಾರಿಯಾಗಿದ್ದ ಮಂಗಳೂರು ಉಪವಿಭಾಗಾಧಿಕಾರಿಗಳ ಕಚೇರಿಯ ಚರಸೊತ್ತುಗಳನ್ನು ಮುಟ್ಟುಗೋಲು ಹಾಕಲು ನ್ಯಾಯಾಲಯವನ್ನು ಕೋರಿದ್ದರು. ನ್ಯಾಯಲಯದ ಆದೇಶದಂತೆ ಮುಟ್ಟುಗೋಲು ಹಾಕಲು ಮುಂದಾಗಲಾಗಿತ್ತು.
ಈ ಬಗ್ಗೆ ಜಿಲ್ಲಾಧಿಕಾರಿಗಳು ಸರಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಿದ ಹಿನ್ನೆಲೆಯಲ್ಲಿ ರೂ. 34 ಕೋಟಿ ಪರಿಹಾರವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿ ಇಂದು ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.

Leave a Reply

Please enter your comment!
Please enter your name here