ಮಂಗಳೂರು: ಕದಳಿ ಯೋಗೇಶ್ವರ (ಜೋಗಿ) ಮಠದ ಪರ್ಯಾಯ ರಾಜ ಪಟ್ಟಾಭಿಷೇಕ

ಮಂಗಳೂರು: ಕದಳಿ ಯೋಗೇಶ್ವರ (ಜೋಗಿ) ಮಠದ ನೂತನ ಪೀಠಾಧಿಪತಿ ಶ್ರೀ ಶ್ರೀ ನಿರ್ಮಲ್‍ನಾಥ್‍ಜಿಯವರ ಪಟ್ಟಾಭಿಷೇಕವು ಮಾ.7 ರಂದು ಬೆಳಿಗ್ಗೆ 9.25 ಕ್ಕೆ ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿಯವರು ಪೌರೋಹಿತ್ಯದಲ್ಲಿ ನೆರವೇರಲಿದೆ.

ಕದಳಿ ಮಠಕ್ಕೆ ನೂತನ ಪೀಠಾಧಿಪತಿಗಳನ್ನು ಪ್ರತಿ 12 ವರ್ಷಗಳಿಗೊಮ್ಮೆ ನೇಮಿಸಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ ವಿವಿಧ ಅರಸರು ಶ್ರೀ ಕ್ಷೇತ್ರದ ಪೀಠಾಧಿಪತಿಗಳಿಗೆ ಸುಮಾರು 150 ಎಕರೆಗಳಷ್ಟು ಜಮೀನು ದಾನ ನೀಡಿ ಈ ಪ್ರದೇಶದ ಆಳುವಿಕೆಯನ್ನು ನಡೆಸುವಂತೆ ಕೋರಿದ ಹಿನ್ನಲೆಯಲ್ಲಿ ಪೀಠಾಧಿಪತಿಗಳನ್ನು “ರಾಜ” ಎಂದು ಸಂಬೋಧಿಸಲಾಗುತ್ತದೆ. ರಾಜರ ಆಯ್ಕೆ ವಾಡಿಕೆಯಂತೆ ತ್ರೈಂಬಕೇಶ್ವರ (ನಾಸಿಕ) ದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಶ್ರಾವಣ ಮಾಸದಲ್ಲಿ ಜರಗುವ ಕುಂಭ ಮೇಳದಲ್ಲಿ ನಡೆಯುತ್ತದೆ. ನಾಥಪಂಥದ 12 ಕವಲುಗಳಿಗೆ (ನಟೇಶ್ವರಿ, ಗಂಗಾನಾಥ್, ಕಪಲಾನಿ, ಬೈರಾಗ್, ಸತ್ಯನಾಥ್, ಆಯಿ, ಧರ್ಮನಾಥ್, ಕನ್ಹಡಿ, ಮಾನ್‍ನಾಥ್, ಪಾಗಲ್ ಮತ್ತು ದ್ವಜಾ) ಸೇರಿದ ಸಾಧುಗಳು ಅಖಿಲ ಭಾರತ ವರ್ಷೀಯ ಅವಧೂತ ಯೋಗಿ ಮಹಾಸಭಾ ಬೇಖ್ ಬಾರಹಪಂಥ್‍ದ ಪದಾಧಿಕಾರಿಗಳ ಸಮ್ಮುಖದಲ್ಲಿ ನೂತನ ರಾಜರ ಆಯ್ಕೆಯನ್ನು ನಡೆಸುತ್ತಾರೆ. ಗಂಗಾನಾಥ್, ನಟೇಶ್ವರಿ, ಬೈರಾಗ್ ಮತ್ತು ಕಪಲಾನಿ ಕವಲುಗಳಿಗೆ ಸೇರಿದ ಸಾಧುಗಳು ಮಾತ್ರ ಕದಳಿ ಮಠಕ್ಕೆ ರಾಜರಾಗಿ ಆಯ್ಕೆಗೊಳ್ಳಲು ಅರ್ಹರಾಗಿರುತ್ತಾರೆ. ಹೀಗೆ ಪ್ರತೀ ಕವಲಿಗೆ 48 ವರ್ಷಗಳಿಗೊಮ್ಮೆ ರಾಜರಾಗಿ ಆಯ್ಕೆಗೊಳ್ಳುವ ಅವಕಾಶ ಇರುತ್ತದೆ. ಮುಂದಿನ ರಾಜರು ಬೈರಾಗಿ ಕವಲಿಗೆ ಸೇರಿದವರಾಗಿರುತ್ತಾರೆ.

Raja-elect-Shri-Shri-Nirmalnath-ji

ಕದ್ರಿ ಗುಡ್ಡದ ತುದಿಯಲ್ಲಿರುವ ಯೋಗೇಶ್ವರ (ಜೋಗಿ) ಮಠ ಸುಮಾರು 1000 ವರ್ಷಗಳ ಇತಿಹಾಸವನ್ನು ಹೊಂದಿದೆ. ಇದು ದಕ್ಷಿಣ ಭಾರತದಲ್ಲಿರುವ ನಾಥಪಂಥದ ಪ್ರಮುಖ ಕೇಂದ್ರವಾಗಿರುತ್ತದೆ. ಇಲ್ಲಿ ಪರಶುರಾಮರು ತಪಸ್ಸನ್ನಾಚರಿಸಿದ ಕುರುಹಾಗಿ ಸದಾ ಅಗ್ನಿ ಪ್ರಜ್ವಲಿಸುತ್ತಿರುವ ಪರಶುರಾಮ ಅಗ್ನಿಕುಂಡ ಇರುತ್ತದೆ. ಮಠದ ಸುತ್ತ ಇರುವ ವನವನ್ನು “ಕದಳಿವ£”À ಎನ್ನುತ್ತಾರೆ. ಇಲ್ಲಿ ಈ ಹಿಂದೆ ರಾಜರಾಗಿ ಪಟ್ಟಾಭಿಷಿಕ್ತರಾದವರ ಸಮಾಧಿಗಳನ್ನು ಕಾಣಬಹುದು. ಈ ಪೈಕಿ ಸಿದ್ದಗುರು ಜ್ವಾಲಾನಾಥರ ಸಮಾಧಿ ಅತ್ಯಂತ ಪವಿತ್ರವಾದುದು. ಇಲ್ಲಿ ಮುಕ್ತಿ ಹೊಂದುವ ಪರಿಪಾಟವಿದ್ದು ಇದನ್ನು “ಮುಕ್ತಿವನ” ಎಂದೂ ಕರೆಯುತ್ತಾರೆ.
ಮತ್ಸ್ಯೆಂದ್ರನಾಥರು ಮತ್ತು ಅವರ ಪ್ರಮುಖ ಶಿಷ್ಯ ಗೋರಕ್ಷನಾಥರು ನಾಥಪಂಥದ ಮೂಲ ಪ್ರವರ್ತಕರಾಗಿರುತ್ತಾರೆ. ನಾಥಪಂಥವು ಗುರು ಶಿಷ್ಯ ಪರಂಪರೆಯಾಗಿದ್ದು ಯೋಗದ ಮುಖೇನ ಮುಕ್ತಿಹೊಂದುವುದನ್ನು ಬೋಧಿಸುತ್ತದೆ. ಈ ಪರಂಪರೆ ಭಾರತದೆಲ್ಲೆಡೆ ಅಲ್ಲದೆ ನೆರೆ ರಾಷ್ಟ್ರಗಳಾದ ನೇಪಾಳ, ಟಿಬೆಟ್, ಸಿಂಹಳ, ಬರ್ಮ, ಪಾಕಿಸ್ತಾನ, ಅಫಘಾನಿಸ್ಥಾನ, ಬಲುಚಿಸ್ಥಾನ, ಇರಾನ್‍ಗಳಲ್ಲೂ ಪಸರಿಸಿದೆ. 1938ರಲ್ಲಿ ಕೊಲ್ಕತ್ತದಲ್ಲಿ ಪ್ರಕಟವಾದ ಆಂಗ್ಲ ವಿದ್ವಾಂಸ ಜಿ.ಡಬ್ಲೂ. ಬ್ರಿಗ್ಸ್ ಬರೆದ “ಗೋರಕ್ಷನಾಥ ಆ್ಯಂಡ್ ಕಾನ್‍ಫಟಾ ಯೋಗಿಸ್” ಪುಸ್ತಕದಲ್ಲಿ ನಾಥಪಂಥದ ಬಗ್ಗೆ ಅಪಾರ ಮಾಹಿತಿ ಲಭ್ಯವಿದೆ.
ಕುಂಭಮೇಳದಲ್ಲಿ ಆಯ್ಕೆಯಾದ ರಾಜರು ತ್ರೈಂಬಕೇಶ್ವರದಿಂದ ಹೊರಟು ಕಾಲ್ನಡಿಗೆಯಲ್ಲಿ ಮಂಗಳೂರು ವರೆಗಿನ ಸುಮಾರು 1100ಕಿ.ಮೀ ದೂರವನ್ನು 500ಕ್ಕೂ ಮಿಕ್ಕಿ ಸಾಧುಗಳೊಡಗೂಡಿ ಆರು ತಿಂಗಳಲ್ಲಿ ಕ್ರಮಿಸುತ್ತಾರೆ. ಈ ಪಾದಯಾತ್ರೆಯನ್ನು “ನವನಾಥ ಝುಂಡಿ” ಯಾತ್ರೆ ಎನ್ನುತ್ತಾರೆ. ರಾಜರು ತಮ್ಮೊಂದಿಗೆ “ಪಾತ್ರ ದೇವತೆ”ಯನ್ನು ಹೊತ್ತು ತರುತ್ತಾರೆ. ಯಾತ್ರೆಯ ಸಂದರ್ಭದಲ್ಲಿ ಹಾಗೂ ಮುಂದಿನ 12 ವರ್ಷಗಳ ಕಾಲ ಪೀಠಾಧಿಪತಿಗಳಾಗಿರುವ ಅವಧಿಯಲ್ಲಿ ಪಾತ್ರದೇವತೆಗೆ ನಿತ್ಯ ಪೂಜೆ ಜರಗುತ್ತದೆ. ಝುಂಡಿ ಯಾತ್ರೆಯು ನಾಗರ ಪಂಚಮಿಯಂದು ತ್ರ್ಯೆಂಬಕೇಶ್ವರದಿಂದ ಹೊರಟು ಶಿವರಾತ್ರಿಗೆ ಸುಮಾರು 10 ದಿನ ಮೊದಲು ಮಂಗಳೂರನ್ನು ತಲುಪುತ್ತದೆ. ಈ ಅವಧಿಯಲ್ಲಿ ಝುಂಡಿಯು ದಾರಿಯಲ್ಲಿ ನಾಥಪಂಥದ 17 ಮಠಗಳು ಸೇರಿದಂತೆ 92 ಕಡೆ ತಂಗುತ್ತದೆ.
ಕದಳಿ ಯೋಗೇಶ್ವರ (ಜೋಗಿ) ಮಠದ ಪೀಠಾಧಿಪತಿಗಳಿಗೆ ಕದ್ರಿ ದೇವಸ್ಥಾನದ ಜಾತ್ರೆಗಳಲ್ಲಿ ವಿಶಿಷ್ಟ ಪಾತ್ರವಿದೆ. ಕದ್ರಿ ರÀಥೋತ್ಸವದ ದಿನ ಪೀಠಾಧಿಪತಿಗಳು ಬ್ರಹ್ಮರಥದ ಎದುರಿನಲ್ಲಿ ಕುದುರೆಯನ್ನೇರಿ ರಥದ ಮುಂದೆ ಚಲಿಸುವ ಪದ್ಧತಿ ಮತ್ಸ್ಯೆಂದ್ರನಾಥ, ಗೋರಕ್ಷನಾಥರ ಸಮಯದಿಂದ ನಡೆದು ಬಂದಿರುತ್ತದೆ. ಹಾಗೆನೇ ಕದ್ರಿ ಮಂಜುನಾಥ ದೇವಸ್ಥಾನದ ಜಾತ್ರೆ ಪ್ರಾರಂಭದ ಮುನ್ನಾದಿನ ಕದಳಿ ಪೀಠಾಧಿಪತಿಗಳು ಮಂಗಳಾದೇವಿ ದೇವಸ್ಥಾನಕ್ಕೆ ತೆರಳಿ ಫಲ, ಪುಷ್ಪ, ಸೀರೆ, ಅರ್ಪಿಸಿ ಕದ್ರಿ ದೇವಸ್ಥಾನದ ಜಾತ್ರೆ ನಿರ್ವಿಘ್ನವಾಗಿ ಜರಗಲಿ ಎಂದು ಪ್ರಾರ್ಥಿಸುವ ಪದ್ಧತಿ ಇಂದಿಗೂ ನಡೆದು ಬಂದಿದೆ. ನವನಾಥ ಝುಂಡಿಯು ಮಂಗಳೂರು ನಗರದಲ್ಲಿ ಸಾಗುವ ದಾರಿ ಮಧ್ಯೆ ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರ ಹಾಗೂ ರಥಬೀದಿಯ ವೆಂಕಟರಮಣ ದೇವಸ್ಥಾನದಲ್ಲಿ ಆಥಿತ್ಯ ಸ್ವೀಕರಿಸಿ ಸ್ವಲ್ಪಹೊತ್ತು ವಿಶ್ರಮಿಸುತ್ತದೆ. ಇದು ನಾಥಪಂಥಕ್ಕೂ ಈ ಎರಡು ಕ್ಷೇತ್ರಗಳಿಗೂ ಇರುವ ಸಂಬಂಧವನ್ನು ತೋರಿಸುತ್ತದೆ. ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಶ್ರೀ ವೀರವೆಂಕಟೇಶ ದೇವರ ಮೂರ್ತಿ 1804 ನೇ ಇಸವಿಯಲ್ಲಿ ನಾಥ ಸನ್ಯಾಸಿಯೊಬ್ಬರು ನೀಡಿರುವುದಕ್ಕೆ ಪುರಾವೆ ಲಭ್ಯವಿದೆ.
2015ರಲ್ಲಿ ನಡೆದ ಕುಂಭಮೇಳದಲ್ಲಿ ಯೋಗಿ ಶ್ರೀ ಶ್ರೀ ನಿರ್ಮಲನಾಥ್ ಜೀ ಕದಳಿ ಪೀಠದ ನೂತನ ರಾಜರಾಗಿ ಆಯ್ಕೆಗೊಂಡಿರುತ್ತಾರೆ. ಅವರನ್ನೊಳಗೊಂಡ ನವನಾಥ ಝುಂಡಿಯು ಫೆ.26ರಂದು ಬೆಳಿಗ್ಗೆ ಗಂಟೆ 7ಕ್ಕೆ ಕೊಟ್ಟಾರ ಚೌಕಿಯಲ್ಲಿ ಮಂಗಳೂರು ಪುರ ಪ್ರವೇಶಗೈಯಲಿದೆ. ಬಳಿಕ ಕೊಟ್ಟಾರ, ಉರ್ವಸ್ಟೋರ್, ಲೇಡಿಹಿಲ್, ಕುದ್ರೋಳಿ, ರಥಬೀದಿ, ಹಂಪನಕಟ್ಟ, ಪಿ.ವಿ.ಎಸ್, ಬಂಟ್ಸ್ ಹೋಸ್ಟೆಲ್, ಮಲ್ಲಿಕಟ್ಟೆ, ಕದ್ರಿ ಮಂಜುನಾಥ ದೇವಸ್ಥಾನಕ್ಕಾಗಿ ಕದಳಿ ಮಠಕ್ಕೆ ತಲುಪಲಿದೆ. ಈ ಝುಂಡಿಯಲ್ಲಿ 2 ವೈದ್ಯ, 3 ಇಂಜಿನಿಯರ್, 19 ಸ್ನಾತಕೋತ್ತರ ಪದವೀದರ ಸನ್ಯಾಸಿಗಳಿದ್ದಾರೆ, ಅಲ್ಲದೆ ಹಠಯೋಗಿಗಳಿದ್ದಾರೆ. ಯೋಗಿ ರಾಜೇಂದ್ರನಾಥ್ ಕಳೆದ 15 ವರ್ಷಗಳಿಂದ ನಿಂತುಕೊಂಡೇ ಹಠಯೋಗ ನಿರತರಾಗಿದ್ದ್ದಾರೆ.
ಫೆ.26ರಿಂದ ಮಾ.7ರ ವರೆಗೆ ದಿನಾ ಸಂಜೆ ಕದಳಿ ಮಠದಲ್ಲಿ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ.28ರಂದು ಸಂಜೆ 3.30ಕ್ಕೆ ಮಂಗಳಾದೇವಿ ದೇವಸ್ಥಾನದಿಂದ ಹೊರಡುವ “ಹೊರೆ ಕಾಣಿಕೆ” ಯಾತ್ರೆ ದೇವಳದ ಮೊಕ್ತೇಸರರಾದ ರಮಾನಾಥ ಹೆಗ್ಡೆ ಉಪಸ್ಥಿತಿಯಲ್ಲಿ, ವಿನಯಾನಂದರವರ ಮುಂದಾಳುತನದಲ್ಲಿ ಕಂಕನಾಡಿ, ಮಲ್ಲಿಕಟ್ಟೆ, ಕದ್ರಿ ದೇವಸ್ಥಾನ ಮಾರ್ಗವಾಗಿ ಕದಳಿ ಮಠಕ್ಕೆ ತಲುಪಲಿದೆ.

ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಮುಕ್ತಾನಂದ ಸ್ವಾಮೀಜಿ, ಕರಿಂಜೆ, ಶ್ರೀ ಮೋಹನದಾಸ ಸ್ವಾಮೀಜಿ, ಮಾಣಿಲ, ಶ್ರೀಯೋಗಾನಂದ ಸ್ವಾಮೀಝಿ ಕೊಂಡೆವೂರು, ಯೋಗಿ ಶ್ರೀ ಮಹಂತ್ ಆದಿತ್ಯನಾಥ್ ಜೀ, ಶ್ರೀ ಮಹಂತ್ ಶಿವನಾಥ್‍ಜೀ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಜೆ. ಆರ್. ಲೋಬೊ,, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಜಯರಾಮ ಭಟ್, ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಎ. ಜೆ. ಸಮೂಹದ ಅಧ್ಯಕ್ಷ, ಎ. ಜೆ. ಶೆಟ್ಟಿ, ಕರಾವಳಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್, ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಎಸ್. ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವರು.
ಮಾ.6ರಂದು ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರಸ್ತುತ ಮಠಾಧಿಪತಿ ಶ್ರೀ ರಾಜಾಯೋಗಿ ಸಂಧ್ಯಾನಾಥ್ ಜೀ ಮತ್ತು ನೂತನ ಮಠಾಧಿಪತಿ ಶ್ರೀ ಶ್ರೀ ನಿರ್ಮಲ್‍ನಾಥ್‍ಜೀಯವರನ್ನು ಅಭಿನಂದಿಸಲಾಗುವುದು.

Leave a Reply

Please enter your comment!

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

Please enter your name here