ಮಂಗಳೂರು : ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿ- ನ.20ರವರೆಗೆ ಪ್ರತಿಭಟನೆಗೆ ಅವಕಾಶವಿಲ್ಲ: ಜಿಲ್ಲಾಧಿಕಾರಿ

Spread the love

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ಸಂಪೂರ್ಣವಾಗಿ ಸರಕಾರದ ನಿಯಂತ್ರಣದಲ್ಲಿದ್ದು, ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿರುವುದಿಲ್ಲ. ಶಾಂತಿ ಕಾಪಾಡಲು ಸಹಕರಿಸುತ್ತಿರುವ ಜಿಲ್ಲೆಯ ಜನತೆಯನ್ನು ಅಭಿನಂಧಿಸುವುದಾಗಿ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದಾರೆ.
ಜಿಲ್ಲೆಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಭಾನುವಾರ ರಾತ್ರಿ ಅಂತ್ಯಗೊಳ್ಳಲಿದೆ. ಆದರೂ ಕೆಲವೊಂದು ಪ್ರದೇಶಗಳಲ್ಲಿ ಬಿಗುವಿನ ವಾತಾವರಣ ಇದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣವಾದ ಸಹಜ ವಾತಾವರಣಕ್ಕೆ ಇನ್ನಷ್ಟು ಕಾಲಾವಕಾಶ ಅಗತ್ಯವಿರುವುದರಿಂದ ನವೆಂಬರ್ 20ರವರೆಗೆ ಜಿಲ್ಲೆಯಲ್ಲಿ ಯಾವುದೇ ಬಂದ್, ಬಹಿರಂಗ ಸಭೆ, ಜಾಥಾ, ಪ್ರತಿಭಟನೆ, ಮುತ್ತಿಗೆ, ರಾಸ್ತಾರೋಕೋ, ಧರಣಿ ಮತ್ತು ಮುಷ್ಕರ ನಡೆಸುವುದನ್ನು ನಿಷೇಧಿಸಲಾಗಿದೆ. ಅನಿವಾರ್ಯ ತುರ್ತು ಸಂದರ್ಭಗಳಲ್ಲಿ ಕಾರ್ಯಕ್ರಮ ನಡೆಸುವವರು ಅನುಮತಿಗೆ ಜಿಲ್ಲಾಧಿಕಾರಿಗೆ ಕೋರಿಕೆ ಸಲ್ಲಿಸಬಹುದು. ಈ ಬಗ್ಗೆ ಪರಿಶೀಲಿಸಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಗೆ ಮತ್ತಷ್ಟು ಪೊಲೀಸ್ ಭದ್ರತೆಯನ್ನು ತರಿಸಲಾಗಿದೆ. ರ್ಯಾಪಿಡ್ ಆಕ್ಷನ್ ಫೋರ್ಸ್‍ನಿಂದ ಇಂದು ಸಂಜೆ ಉಳ್ಳಾಲದಲ್ಲಿ ಪಥಸಂಚಲನ ನಡೆಸಲಾಗಿದೆ. ಹೊರಜಿಲ್ಲೆಗಳಿಂದಲೂ ಪೊಲೀಸ್ ಪಡೆಗಳನ್ನು ಕರೆಸಲಾಗಿದೆ. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯೂ ಹಾಗೂ ಅರೆ ಮೀಸಲು ಪಡೆಯೂ ಜಿಲ್ಲೆಗೆ ಆಗಮಿಸಿದೆ. ಮಂಗಳೂರು ನಗರಕ್ಕೆ 10 ಕೆಎಸ್‍ಆರ್‍ಪಿ ಪ್ಲಟೂನ್ ಗಸ್ತನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯೊಂದಿಗೆ ಕಂದಾಯ ಇಲಾಖಾಧಿಕಾರಿಗಳೂ ಕಾನೂನು ಸುವ್ಯವಸ್ಥೆ ಮೇಲೆ ನಿಗಾ ಇಟ್ಟಿದ್ದಾರೆ. ಜಿಲ್ಲೆಯ ಇನ್ನಷ್ಟು ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಲು ಪೊಲೀಸ್ ಇಲಾಖೆಗೆ ಅನುದಾನ ಬಿಡುಗಡೆ ಮಾಡಲಾಗುವುದು.
ಕಳೆದೆರಡು ದಿನಗಳಲ್ಲಿ ತಾನು ಜಿಲ್ಲೆಯ ವಿವಿದೆಡೆ ಸಂಚರಿಸಿದ ಸಂದರ್ಭದಲ್ಲಿ ರಾತ್ರಿ ವೇಳೆಯಲ್ಲಿ ಸಾರ್ವಜನಿಕರು ಮುಕ್ತವಾಗಿ ನಡೆದಾಡುತ್ತಿರುವುದು ಕಂಡುಬಂದಿದೆ. ರಾತ್ರಿ ವೇಳೆಯಲ್ಲಿಯೇ ಅನೇಕ ಅಹಿತಕರ ಘಟನೆಗಳು ನಡೆದಿರುವುದರಿಂದ ಸೂಕ್ಷ ಸಂದರ್ಭಗಳಲ್ಲಿ ಕತ್ತಲಾದ ನಂತರ ಸಾರ್ವಜನಿಕರು ಸಾಧ್ಯವಾದಷ್ಟು ಸಂಚಾರ ಕಡಿಮೆಗೊಳಿಸಬೇಕು ಎಂದು ಮನವಿ ಮಾಡಿರುವ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಜಿಲ್ಲೆಯ ಎಲ್ಲಾ ಗಡಿ ಪ್ರದೇಶಗಳಲ್ಲಿ ವಿಶೇಷ ನಾಕಾಬಂಧಿ ಹಾಕಲಾಗಿದ್ದು, ವಾಹನಗಳ ತಪಾಸಣೆಗೆ ವಿಶೇಷ ಚೆಕ್‍ಪೋಸ್ಟ್ ಸ್ಥಾಪಿಸಲಾಗಿದೆ. ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳ ಮೇಲೆ ನಿಗಾ ಇಡಬೇಕು ಎಂದು ತಿಳಿಸಿದ್ದಾರೆ.
ಅಹಿತಕರ ಘಟನೆಯಲ್ಲಿ ಗಾಯಗೊಂಡಿದ್ದ 6 ಜನರ ಪೈಕಿ ಒಬ್ಬರು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಗಾಯಾಳುಗಳ ವೈದ್ಯಕೀಯ ವೆಚ್ವವನ್ನು ಜಿಲ್ಲಾಡಳಿತ ಭರಿಸಲಿದೆ. ಜಿಲ್ಲೆಯಲ್ಲಿ ಶಾಂತಿ ನೆಮ್ಮದಿ ಮೂಡಲು ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಮುಂದೆಯೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸ್ಪತ್ರೆಗೆ ಭೇಟಿ: ಜಿಲ್ಲಾಧಿಕಾರಿಗಳು ಭಾನುವಾರ ಅಹಿತಕರ ಘಟನೆಯಲ್ಲಿ ಗಾಯಗೊಂಡಿರುವವರು ಚಿಕಿತ್ಸೆ ಪಡೆಯುತ್ತಿರುವ ಮಂಗಳೂರಿನ ವೆನ್‍ಲಾಕ್ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.


Spread the love