ಮಂಗಳೂರು: ಕುದ್ರೋಳಿಯಲ್ಲಿ ತಲವಾರಿನಿಂದ ಕಡಿದು ಕೊಲೆಗೆ ಯತ್ನ

ಮಂಗಳೂರು: ನಗರದ ಕುದ್ರೋಳಿ ಬಳಿ ಸೋಮವಾರ ಸಂಜೆ ತಂಡವೊಂದು ಇನ್ನೊಂದು ತಂಡದ ಇಬ್ಬರಿಗೆ ತಲವಾರಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದು, ಗಂಭೀರ ಗಾಯಗೊಂಡ ಅವರನ್ನು ಅಸ್ಪತ್ರೆಗೆ ದಾಖಲಿಸಿದ್ದಾರೆ.

group-rivelery-27072015-7 group-rivelery-27072015 (9)

ಮಾರುತಿ 800 ಕಾರಿನಲ್ಲಿ ಬಂದ ಕೋಡಿಕಲ್‌ನ ರವಿಚಂದ್ರ ಯಾನೆ ವಿಕ್ಕಿ ವಿಕ್ಕಿ ಪೂಜಾರಿ ಯಾನೆ ಸೈಕೋ ವಿಕ್ಕಿ ನೇತೃತ್ವದ ತಂಡವೊಂದು ರಸ್ತೆ ಬದಿ ನಿಂತಿದ್ದ ಇನ್ನೊಂದು ತಂಡದ ಕುದ್ರೋಳಿಯ ಲತೀಶ್‌ ಮತ್ತು ಬೊಕ್ಕಪಟ್ಣದ ಇಂದ್ರಜಿತ್‌ ಎಂಬವರಿಗೆ ತಲವಾರಿ ನಿಂದ ಕಡಿದು ಪರಾರಿಯಾಗಿದೆ ಎಂದು ಪ್ರಕರಣ ದಾಖಲಿಸಿರುವ ಕದ್ರಿ ಪೊಲೀಸರು ತಿಳಿಸಿದ್ದಾರೆ.
ರವಿಚಂದ್ರ ಯಾನೆ ವಿಕ್ಕಿಗೂ ಲತೀಶ್‌ಗೂ ಹಳೆ ದ್ವೇಷವಿತ್ತು. ಇಬ್ಬರ ಮೇಲೂ ಪೊಲೀಸ್‌ ಠಾಣೆಗಳಲ್ಲಿ ಬೇರೆ ಬೇರೆ ಪ್ರಕರಣ ದಾಖಲಾಗಿದ್ದು, ರೌಡಿಗಳಾಗಿ ಗುರುತಿಸಿಕೊಂಡಿದ್ದರು. ಸೋಮವಾರ ಸಂಜೆ ಸುಮಾರು 7 ಗಂಟೆಯ ವೇಳೆಗೆ ಕುದ್ರೋಳಿ ಸಮೀಪದ ಅಳಕೆ ಬಳಿಯ ರಸ್ತೆ ಪಕ್ಕ ನಿಂತಿದ್ದಾಗ ನಿತಿನ್‌, ಮೋಕ್ಷಿತ್‌ ಸಹಿತ ಐವರ ಜೊತೆ ಬಂದ ವಿಕ್ಕಿ ಏಕಾಏಕಿ ತಲವಾರಿನಿಂದ ಕಡಿದಿದ್ದಾನೆ. ಇದರಿಂದ ಲತೀಶ್‌ ಮತ್ತು ಇಂದ್ರತ್‌ ಕೈಗೆ ಗಾಯವಾಗಿದ್ದು, ಆ ಪೈಕಿ ಇಂದ್ರಜಿತ್‌ಗೆ ಗಂಭೀರ ಗಾಯವಾಗಿದೆ. ಗಾಯಾಳುಗಳಿಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲವಾರಿನಿಂದ ಕಡಿದ ಬಳಿಕ ಕಾರಿನಲ್ಲಿ ಪರಾರಿಯಾಗುವ ಭರಾಟೆಯಲ್ಲಿ ಆರೋಪಿಗಳು ಚಲಿಸುತ್ತಿದ್ದ ಕಾರು ಒಂದೆರಡು ವಾಹನಗಳಿಗೂ ಢಿಕ್ಕಿ ಹೊಡೆದಿದೆ. ಇದರಿಂದ ಕಾರು ಮಣ್ಣಗುಡ್ಡೆ ಬಳಿ ಕೆಟ್ಟು ನಿಂತಿತು ಎನ್ನಲಾಗಿದೆ. ಗಲಿಬಿಲಿಗೊಳಗಾದ ದುಷ್ಕರ್ಮಿ ಗಳು ಅದೇ ರಸ್ತೆಯಾಗಿ ಬರುತ್ತಿದ್ದ ಸ್ಕೂಟರೊಂದನ್ನು ತಡೆದು ನಿಲ್ಲಿಸಿ ಅದರ ಸವಾರನನ್ನು ತಳ್ಳಿ ಸ್ಕೂಟರ್‌ನಲ್ಲಿ ಪರಾರಿಯಾದರು ಎಂದು ತಿಳಿದು ಬಂದಿದೆ. ತನ್ಮಧ್ಯೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ

ಪೊಲೀಸರು ಅಲ್ಲಲ್ಲಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ತಲವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿ ಅಮಲುದ್ರವ್ಯ ಪದಾರ್ಥಗಳ ಬಾಟಲಿ ಪತ್ತೆಯಾಗಿದ್ದು, ಪೊಲೀಸರು ಕಾರು ಸಮೇತ ಅವುಗಳನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Please enter your comment!
Please enter your name here