ಮಂಗಳೂರು: ಗರ್ಭಿಣಿಯರ ಸ್ಕ್ಯಾನಿಂಗ್: 5 ವರ್ಷಗಳ ದಾಖಲೆ ಪರಿಶೀಲನೆಗೆ  ಸಿಇಓ ಸೂಚನೆ

ಮಂಗಳೂರು:  ಕಳೆದ 5 ವರ್ಷಗಳಲ್ಲಿ ಜಿಲ್ಲೆಯ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ನಡೆದಿರುವ ಗರ್ಭಿಣಿಯರಿಗೆ ಸಂಬಂಧಪಟ್ಟ ಎಲ್ಲಾ ಸ್ಕ್ಯಾನಿಂಗ್‍ಗಳ ದಾಖಲೆ ಪರಿಶೀಲನೆ ನಡೆಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಸೂಚಿಸಿದ್ದಾರೆ.

ಜನನ ಪೂರ್ವ ಲಿಂಗ ನಿರ್ಣಯ- ನಿರ್ಬಂಧ ಮತ್ತು ದುರ್ಬಳಕೆ ತಡೆ ಕಾಯಿದೆಗೆ (ಪಿಸಿ & ಪಿಎನ್‍ಡಿಟಿ) ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಲಿಂಗಾನುಪಾತದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣ,  ಬಗ್ಗೆ ಸರಿಪಡಿಸಲು ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತು ಚರ್ಚಿಸಲು ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ  ಅವರು ಮಂಗಳವಾರ ಮಾತನಾಡಿದರು.

ceo

ಸ್ಕ್ಯಾನಿಂಗ್ ದಾಖಲೆ ಆಧರಿಸಿ, ಸದರಿ ಗರ್ಭದ ಮಗುವಿನ ಜನನ ಮತ್ತು ಬೆಳವಣಿಗೆಯ ಮೇಲೆ ನಿಗಾ ಇರಿಸುವ ಕುರಿತು ಪರಿಶೀಲಿಸಬೇಕಿದೆ. ಕಳೆದ 6 ವರ್ಷಗಳಲ್ಲಿ ಜಿಲ್ಲೆಯಲ್ಲಿ ಗಂಡು ಹೆಣ್ಣಿನ ಅನುಪಾತದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕುಸಿಯುತ್ತಿರುವುದು ಕಳವಳಕಾರಿಯಾಗಿದೆ. ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಅಧ್ಯಯನ ಮಾಡಲು, ಹಿಂದಿನ ಎಲ್ಲಾ ಸ್ಕ್ಯಾನಿಂಗ್‍ಗಳನ್ನು ಪರಿಶೀಲಿಸುವಂತೆ ಅವರು ತಿಳಿಸಿದರು.

ದ.ಕ. ಜಿಲ್ಲೆಯಲ್ಲಿ 145 ಸ್ಕ್ಯಾನಿಂಗ್ ಕೇಂದ್ರಗಳು ನೋಂದಣಿಗೊಂಡಿವೆ. ಜನನ ಪೂರ್ವ ಲಿಂಗ ನಿರ್ಣಯ (ನಿರ್ಬಂಧ ಮತ್ತು ದುರ್ಬಳಕೆ) ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೂಡಲೇ ಆರೋಗ್ಯ ಇಲಾಖೆ ಕ್ರಿಯಾಯೋಜನೆ ರೂಪಿಸಬೇಕು. ಈಗಾಗಲೇ ಜಿಲ್ಲಾಧಿಕಾರಿಗಳು ಅಧಿಕಾರಿಗಳ 16 ತಂಡ ರಚಿಸಿದ್ದು, ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆಯ ಆರೋಗ್ಯ ವಿಭಾಗವು ಈ ನಿಟ್ಟಿನಲ್ಲಿ ಸಹಕರಿಸಬೇಕು. ಲಿಂಗಪತ್ತೆಯನ್ನು ತಡೆಗಟ್ಟಲು ಟೋಲ್‍ಫ್ರೀ ಸಂಖ್ಯೆಯ ದೂರವಾಣಿ ಆರಂಭಿಸಿದರೆ,  ಸಾರ್ವಜನಿಕರು ಅಂತಹ ಸ್ಕ್ಯಾನಿಂಗ್ ಕೇಂದ್ರಗಳ ಮಾಹಿತಿ ನೀಡಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಟೋಲ್‍ಫ್ರೀ ದೂರವಾಣಿ ಆರಂಭಿಸುವಂತೆ ಸಿಇಓ ತಿಳಿಸಿದರು.

ಸಾರ್ವಜನಿಕರಲ್ಲಿ ಜನನ ಪೂರ್ವ ಲಿಂಗ ನಿರ್ಣಯ (ನಿರ್ಬಂಧ ಮತ್ತು ದುರ್ಬಳಕೆ) ತಡೆ ಕಾಯಿದೆಯ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮ ನಡೆಸಲು ಶ್ರೀವಿದ್ಯಾ ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಮಾತನಾಡಿ, ಸ್ಕ್ಯಾನಿಂಗ್ ಯಂತ್ರವನ್ನು ಖರೀದಿಸುವ ವೈದ್ಯರು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕಿದೆ. ಒಂದೇ ಪರವಾನಿಗೆಯಲ್ಲಿ ಎರಡು ಸ್ಕ್ಯಾನಿಂಗ್ ಯಂತ್ರಗಳನ್ನು ಬಳಸುವಂತಿಲ್ಲ. ಹಳೆಯ ಸ್ಕ್ಯಾನಿಂಗ್ ಯಂತ್ರವನ್ನು ಹೊಸ ಯಂತ್ರಕ್ಕೆ ಬದಲಾಯಿಸಲು ಕೂಡಾ ಪ್ರತ್ಯೇಕ ಅನುಮತಿ ಪಡೆಯಬೇಕು. ಅಲ್ಲದೇ, ಸ್ಕ್ಯಾನಿಂಗ್ ಯಂತ್ರವನ್ನು ಬಳಸಲು ಅನುಮತಿ ಪಡೆದ ವೈದ್ಯರೇ ಅದನ್ನು ನಿರ್ವಹಿಸಬೇಕೇ ಹೊರತು ಬೇರೆ ವೈದ್ಯರು ಅದನ್ನು ಬಳಸುವಂತಿಲ್ಲ  ಎಂದು ಅವರು ತಿಳಿಸಿದರು.

ಎಂಬಿಬಿಎಸ್ ಪದವಿ ಪಡೆದಿದ್ದರೂ, ಪ್ರತ್ಯೇಕ ನಿಗದಿತ ಪರೀಕ್ಷೆ ಪಾಸಾಗಿದ್ದರೆ ಮಾತ್ರ ಅಂತಹ ವೈದ್ಯರು ಸ್ಕ್ಯಾನಿಂಗ್ ಮಾಡಲು ಅರ್ಹತೆ ಹೊಂದಿದ್ದಾರೆ. ಹೆಚ್ಚು ಗರ್ಭಪಾತ ನಡೆಸುವ ವೈದ್ಯರ ಮೇಲೆ ನಿಗಾ ಇರಿಸಲಾಗುವುದು ಎಂದು ಅವರು ಹೇಳಿದರು.

ಸಮಾಜಸೇವಕಿ ಹಿಲ್ಡಾ ರಾಯಪ್ಪನ್ ಮಾತನಾಡಿ, ಕಳೆದ ಹಲವು ವರ್ಷಗಳಿಂದಲೂ ಪಿಸಿ & ಪಿಎನ್‍ಡಿಟಿ ಕಾಯಿದೆಯ ಬಗ್ಗೆ ಚರ್ಚೆಗಳಾಗುತ್ತಿದೆಯೇ ಹೊರತು ಪರಿಣಾಮಕಾರಿ ಅನುಷ್ಠಾನಗೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಕಾಯಿದೆಯ ಸಮರ್ಪಕ ಅನುಷ್ಠಾನ ತ್ವರಿತವಾಗಿ ಆರಂಭಗೊಳ್ಳಬೇಕು ಎಂದರು. ದ.ಕ. ಜಿಲ್ಲೆಯಲ್ಲಿ ಬಾಲಕಾರ್ಮಿಕರ ನಿಯಂತ್ರಣ ಕಾಯಿದೆ ಯಶಸ್ವಿಯಾಗಿದ್ದು, ಇದೇ ಮಾದರಿ ಪಿಸಿ & ಪಿಎನ್‍ಡಿಟಿ ಕಾಯಿದೆ ಕಟ್ಟುನಿಟ್ಟಾಗಿ ಜಾರಿಯಾಗಬೇಕು ಎಂದರು.

ಸಭೆಯಲ್ಲಿ ಪಿಸಿ & ಪಿಎನ್‍ಡಿಟಿ ಕಾಯಿದೆಯ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸದಸ್ಯರಾದ ಮಹಿಳಾ ಮತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರಪೂಜಾರಿ, ವಾರ್ತಾಧಿಕಾರಿ ಖಾದರ್ ಶಾ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ಸಿಕಂದರ್ ಪಾಶಾ, ತಾಲೂಕು ವೈದ್ಯಾಧಿಕಾರಿಗಳು, ತಜ್ಞ ವೈದ್ಯರು ಮತ್ತಿತರರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here