ಮಂಗಳೂರು : ಗೃಹ ಸಚಿವರ ಹೇಳಿಕೆಯ ಬೆನ್ನಲ್ಲೇ ನಗರದಲ್ಲಿ ಪುನಃ ನೈತಿಕ ಪೊಲೀಸ್‍ಗಿರಿ!

ಮಂಗಳೂರು : ನೈತಿಕ ಪೊಲೀಸ್‍ಗಿರಿ ಮಾಡುವವರನ್ನು ಗಡಿಪಾರು ಮಾಡುತ್ತೇವೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಮಂಗಳೂರಲ್ಲಿ ಹೇಳಿದ ಮರುದಿನವೇ ನಗರದ ಸಿಟಿ ಸೆಂಟರ್ ಮುಂಭಾಗದಲ್ಲಿ ಯುವಕ, ಯುವತಿ ಮಾತನಾಡುತ್ತಿದ್ದ ವೇಳೆ ನೈತಿಕ ಪೊಲೀಸ್‍ಗಿರಿ ನಡೆದಿದೆ.
ಮುಸ್ಲಿಂ ಯುವತಿ ಜತೆ ಹಿಂದೂ ಯುವಕ ಇದ್ದಾನೆ ಎಂಬ ಕಾರಣಕ್ಕೆ ಆ ಭಾಗದ ಮುಸ್ಲಿಂ ಯುವಕರು ಒಟ್ಟು ಸೇರಿ ವಿಚಾರಣೆ ನಡೆಸಿ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಮುಸ್ಲಿಂ ಯುವತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಸರಗೋಡು ಕಾಲೇಜಿನ ಮೂವರು ವಿದ್ಯಾರ್ಥಿಗಳು ಸಿಟಿ ಸೆಂಟರ್‍ಗೆ ಮಂಗಳವಾರ ಬಂದಿದ್ದರು. ಹಿಂದೂ ಯುವಕ, ಯುವತಿ ಮತ್ತು ಮುಸ್ಲಿಂ ಯುವತಿ ಇದ್ದರು.
ಇದನ್ನೇ ಗಮನಿಸಿದ ಕೆಲ ಪುಂಡರು ಭಿನ್ನ ಕೋಮಿನ ಜೋಡಿ ಎಂದು ಗೊತ್ತಾದ ತಕ್ಷಣ ಹಲ್ಲೆ ನಡೆಸಿದ್ದಾರೆ.
ಬಂದರು ಪೊಲೀಸರಿಗೆ ಈ ಮಾಹಿತಿ ಲಭಿಸಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿ ಪೊಲೀಸ್ ವಾಹನದಲ್ಲಿ ಸಂತ್ರಸ್ತರನ್ನು ಕರೆದುಕೊಂಡು ಹೋಗಿದ್ದಾರೆ. ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣಾಧಿಕಾರಿಗಳನ್ನು ಪ್ರಶ್ನಿಸಿದರೆ ನಮಗೆ ಗೊತ್ತೇ ಇಲ್ಲ ಎಂದು ಹೇಳಿದ್ದಾರೆ. ನೈತಿಕ ಪೊಲೀಸ್‍ಗಿರಿ ನಡೆದರೆ ಆ ವ್ಯಾಪ್ತಿಯ ಠಾಣಾಧಿಕಾರಿಯನ್ನೇ ಹೊಣೆ ಮಾಡಲಾ ಗುವುದು ಎಂದು ಗೃಹ ಸಚಿವರು ಹೇಳಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಯುವತಿಯರು ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದಾರೆ.

Leave a Reply