ಮಂಗಳೂರು: ಚಂಡಮಾರುತ ತಗ್ಗಿಸುವ ಯೋಜನೆ – ವಿಶ್ವ ಬ್ಯಾಂಕ್ ತಂಡ ಮೆಚ್ಚುಗೆ

Spread the love

ಮಂಗಳೂರು : ರಾಷ್ಟ್ರೀಯ ಚಂಡಮಾರುತ ಅಪಾಯ ತಗ್ಗಿಸುವ ಯೋಜನೆ ಗೆ ಸಂಬಂಧಿಸಿದಂತೆ ದ.ಕ ಜಿಲ್ಲೆಯಲ್ಲಿ ತೆಗೆದುಕೊಂಡಿರುವ ಕಾಮಗಾರಿಗಳು ಮತ್ತು ಯೋಜನೆಗಳ ಪರಿಶೀಲನೆ ನಡೆಸಲು ವಿಶ್ವಬ್ಯಾಂಕ್ ತಂಡವು ದ.ಕ ಜಿಲ್ಲೆಗೆ ಬುಧವಾರ ಭೇಟಿ ನೀಡಿತು.

ವಿಶ್ವಬ್ಯಾಂಕ್ ತಂಡದಲ್ಲಿ 15 ಜನ ಪರಿಣತರು ಮತ್ತು ತಜ್ಷರು ಸೇರಿದ್ದು, ತೊಕ್ಕೊಟಿಗೆ ಭೇಟಿ ನೀಡಿ ಉದ್ದೇಶಿತ ವಿವಿದೋದ್ದೇಶ ಚಂಡಮಾರುತ ಕೇಂದ್ರದ  ಸ್ಥಳ ಪರಿಶೀಲನೆ ನಡೆಸಿತು. ಅನಂತರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲಾಧಿಕಾರಿಯವರೊಂದಿಗೆ ಹಾಗೂ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ ಪಡೆಯಲಾಯಿತು.

 ರಾಷ್ಟ್ರೀಯ ಚಂಡಮಾರುತ ಅಪಾಯ ತಗ್ಗಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಹಾಗೂ ವಿಶ್ವಬ್ಯಾಂಕ್ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ ಚಂಡಮಾರುತ ಕೇಂದ್ರ,  ಉಪ್ಪು ನೀರು ತಡೆಗೋಡೆ ಮತ್ತು ಇತರೆ ಕಾಮಗಾರಿಗಳನ್ನು ಸುಮಾರು ರೂ. 35 ಕೋಟಿ ವೆಚ್ಚದಲ್ಲಿ ತೆಗೆದುಕೊಳ್ಳಲಾಗಿದೆ. ಯೋಜನೆ ಹಾಗೂ ಕಾಮಗಾರಿಗಳ ಕುರಿತು ವಿವರವಾದ ಚರ್ಚೆ ನಡೆಸಲಾಯಿತು. ಹಾಗೂ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಅತೀ ಅವಶ್ಯವಿರುವ ಯೋಜನೆಗಳನ್ನು  ರೂಪಿಸುವ ಕುರಿತು ಚರ್ಚಿಸಲಾಯಿತು.

ಚಂಡಮಾರುತ ಕೇಂದ್ರವನ್ನು ಉಳಿದ ಸಮಯದಲ್ಲಿ ಸಮುದಾಯ ಆಧಾರಿತ ಕಾಮಗಾರಿಗಳಿಗೆ ಬಳಸಿಕೊಳ್ಳಲು ಸಹಮತ ವ್ಯಕ್ತಪಡಿಸಲಾಯಿತು. ಒಟ್ಟಾರೆಯಾಗಿ ಯೋಜನೆಯ ಕುರಿತು ಮತ್ತು ವಿಪತ್ತು ನಿರ್ವಹಣೆಯನ್ನು ಜಿಲ್ಲಾಡಳಿತವು ಸಮರ್ಥವಾಗಿ ನಿಭಾಯಿಸಲು ಸನ್ನದ್ಧವಾಗಿರುವ ಬಗ್ಗೆ  ತಂಡದಿಂದ ಮೆಚ್ಚುಗೆ ವ್ಯಕ್ತವಾಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ, ಅಪರ ಜಿಲ್ಲಾಧಿಕಾರಿ ಕುಮಾರ್, ಅಭಿಯಂತರ ಗೋಪಾಲ ನಾಯ್ಕ್ ಮತ್ತಿತತರು ಉಪಸ್ಥಿತರಿದ್ದರು.


Spread the love