ಮಂಗಳೂರು ನಗರಕ್ಕೆ ಸೋಮವಾರದಿಂದ 3 ದಿನ ನೀರಿಲ್ಲ

Spread the love

ಮಂಗಳೂರು ನಗರಕ್ಕೆ ಸೋಮವಾರದಿಂದ 3 ದಿನ ನೀರಿಲ್ಲ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆಯ ರೇಷನಿಂಗ್‌ ವ್ಯವಸ್ಥೆಯನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಮೇ 20ರವರೆಗೂ 4 ದಿನ ನೀರು ಪೂರೈಸಿ, 3 ದಿನ ಬಿಡುವು ನೀಡಲಾಗುತ್ತದೆ. ನಂತರ ಬಿಡುವಿನ ಅವಧಿಯನ್ನು 4 ದಿನಗಳಿಗೆ ಹೆಚ್ಚಿಸಲಾಗುತ್ತದೆ.

ಸೋಮವಾರ ಬೆಳಿಗ್ಗೆ ನೀರು ಸರಬ ರಾಜು ಸ್ಥಗಿತಗೊಳ್ಳಲಿದೆ. ಮುಂದಿನ 72 ಗಂಟೆಗಳವರೆಗೆ ನೀರು ಪೂರೈಕೆ ಇರುವುದಿಲ್ಲ. ಇದೇ 16 ರ ಬೆಳಿಗ್ಗೆ 6 ಗಂಟೆಗೆ ನೀರು ಸರಬರಾಜು ಮತ್ತೆ ಆರಂಭವಾಗಲಿದ್ದು, ಮುಂದಿನ 96 ಗಂಟೆಗಳವರೆಗೆ ಮತ್ತೆ ನೀರು ಪೂರೈಕೆ ನಿರಂತರವಾಗಿ ನಡೆಯಲಿದೆ. ಆದರೆ ಮೇ 20ರ ಮುಂಜಾನೆ 6 ಗಂಟೆಗೆ ಮತ್ತೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು. 96 ಗಂಟೆಗಳ ಬಳಿಕ ಅಂದರೆ 24ರ ಬೆಳಿಗ್ಗೆ 6 ಗಂಟೆಗೆ ಮತ್ತೆ ನೀರು ಪೂರೈಕೆ ಆರಂಭಿಸಲಾಗುವುದು ಎಂದು ಎಂದು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಳಿಸಿದ್ದಾರೆ.

ಭಾನುವಾರ ನೇತ್ರಾವತಿ ನದಿಯ ತುಂಬೆ ಕಿಂಡಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ 3.95 ಮೀಟರ್‌ ಇದ್ದು, 1.5 ಮೀಟರ್‌ವರೆಗೆ ನೀರನ್ನು ಪಡೆಯುವ ಅವಕಾಶವಿದೆ. ಹಾಗಾಗಿ ಇರುವ ನೀರನ್ನು ಕುಡಿಯಲು ಸದ್ಬಳಕೆ ಮಾಡುವ ಉದ್ದೇಶದಿಂದ ಕಟ್ಟುನಿಟ್ಟಿನ ರೇಷನಿಂಗ್‌ ಪದ್ಧತಿ ಅನಿವಾರ್ಯವಾಗಿದೆ. ಮೇ 28ರ ಮುಂಜಾನೆ 6 ಗಂಟೆಗೆ ನೀರು ಪೂರೈಕೆ ಸ್ಥಗಿತಗೊಳ್ಳಲಿದ್ದು, ಮುಂದಿನ 96 ಗಂಟೆಗಳ ಕಾಲ ನೀರು ಪೂರೈಕೆ ಇರುವುದಿಲ್ಲ.

ಈ ಅವಧಿಯೊಳಗೆ ಮಳೆ ಬಂದಲ್ಲಿ ನೀರಿನ ಮಟ್ಟ ಏರುವ ನಿರೀಕ್ಷೆ ಇದೆ. ಸಾರ್ವಜನಿಕರು ಮನೆಗಳಲ್ಲಿ ಕೈತೋಟಗಳಿಗೆ, ವಾಹನ ತೊಳೆಯಲು ಮತ್ತು ಇನ್ನಿತರ ಕೆಲಸಗಳಿಗೆ ನೀರನ್ನು ಬಳಸದೇ ಮಿತವ್ಯಯ ಮಾಡುವಂತೆಯೂ ಸೂಚಿಸಲಾಗಿದೆ.


Spread the love