ಮಂಗಳೂರು : ಪೊಲೀಸ್ ಇನ್‌ಸ್ಪೆಕ್ಟರ್ ಪ್ರಮೋದ್ ಪ್ರಕರಣದಲ್ಲಿ ಇಲಾಖೆಯ ಮೇಲೆ ಒತ್ತಡ ಹೇರಿಲ್ಲ : ಶಾಸಕ ಮೊಯ್ದಿನ್ ಬಾವ

ಮಂಗಳೂರು : ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಮೋದ್ ಅವರು ಮೇಲಧಿಕಾರಿಯ ಆದೇಶದ ಮೇರೆಗೆ ರಜೆಯಲ್ಲಿ ತೆರಳಬೇಕಾಗಿ ಬಂದಿತ್ತು. ಈ ಬಗ್ಗೆ ಪೊಲೀಸರು ಠಾಣೆಯಲ್ಲಿ ಪ್ರತಿಭಟನೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವರ ಮೂಲಕ ಇಲಾಖಾ ತನಿಖೆ ನಡೆಯಲಿ. ಆ ಮೂಲಕ ಪ್ರಕರಣದ ನೈಜ ಸಂಗತಿ ಜನತೆಗೆ ಗೊತ್ತಾಗಲಿ ಎಂದು ಶಾಸಕ ಮೊಯ್ದಿನ್ ಬಾವ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಪಚ್ಚನಾಡಿಯ ವೃದ್ಧ ಮಹಿಳೆಯೊಬ್ಬರು ತಮ್ಮ ಮಗ ಅಮಾಯಕ, ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ನನ್ನ ಬಳಿ ದೂರು ನೀಡಿದ ಕಾರಣ ನಾನು ಮಂಗಳೂರು ಕಮಿಶನರೇಟ್ ಅಪರಾಧ ವಿಭಾಗದ ಡಿಸಿಪಿಯವರಲ್ಲಿ ಈ ಬಗ್ಗೆ ವಿಚಾರಿಸಿದ್ದೆ. ಆರೋಪಿ ಅಮಾಯಕನಾಗಿದ್ದರೆ ಆತನನ್ನು ವಿಚಾರಿಸಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಿ ಎನ್ನುವ ಸೂಚನೆ ನೀಡಿದ್ದೆ. ಮರುದಿನ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಮೋದ್ ರಜೆಯಲ್ಲಿ ತೆರಳಲು ಮೇಲಧಿಕಾರಿ ಸೂಚನೆ ನೀಡಿದ್ದಾರೆ. ಆ ಬಳಿಕ ಅಲ್ಲಿದ್ದ ಪೊಲೀಸರು ಠಾಣೆಯಲ್ಲಿ ಪ್ರತಿಭಟನೆ ನಡೆಸಿರುವುದು ವಿಷಾದಕರ ಘಟನೆ. ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಪೊಲೀಸರು ಈ ರೀತಿ ಪ್ರತಿಭಟನೆಗೆ ತೊಡಗುವುದು ಕರ್ತವ್ಯಲೋಪವಾಗುತ್ತದೆ. ಪೊಲೀಸ್ ಇಲಾಖೆಯ ಬಗ್ಗೆ ದೂರುಗಳಿದ್ದರೆ ಪೊಲೀಸರ ಯಾವುದೇ ಬೇಡಿಕೆಗಳಿದ್ದರೂ ಈ ಬಗ್ಗೆ ಮೊದಲು ಮೇಲ ಧಿಕಾರಿಗಳ ಗಮನಕ್ಕೆ ತರಬೇಕಾಗಿತ್ತು. ಏಕಾಏಕಿ ಪ್ರತಿಭಟನೆಗೆ ಇಳಿಯಬಾರದಿತ್ತು. ಈ ನಡುವೆ ಕೆಲವು ಸಂಘಟನೆಗಳು ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದು ಮೊಯ್ದಿನ್ ಬಾವ ತಿಳಿಸಿದ್ದಾರೆ.
ಪ್ರತಿಭಟನೆಯ ಸಂದರ್ಭದಲ್ಲಿ ನನ್ನ ವಿರುದ್ಧ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆಯನ್ನು ಕೂಗಿದ್ದಾರೆ. ಈ ಪ್ರಕರಣದಲ್ಲಿ ನಾನು ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿದ್ದೇವೆ ಎನ್ನುವುದು ಸರಿಯಲ್ಲ. ಪ್ರಮೋದ್ ಅವರನ್ನು ಕಮಿಷನರ್ ಕಚೇರಿಯಿಂದ ಒಒಡಿಯ ಮೇಲೆ ಗ್ರಾಮಾಂತರ ಠಾಣೆಗೆ ನೇಮಿಸಲಾಗಿದ್ದರೂ ಅವರನ್ನು ಬೇರೆ ಕಡೆಗೆ ನೇಮಿಸುವ ಬಗ್ಗೆ ನಾವು ಪ್ರಯತ್ನ ನಡೆಸಿಲ್ಲ. ಅವರನ್ನು ರಜೆಯ ಮೇಲೆ ತೆರಳಲು ನಾವು ಸೂಚನೆ ನೀಡಿಲ್ಲ. ಈ ನಡುವೆ ಅನಗತ್ಯವಾಗಿ ನಮ್ಮ ಮೇಲೆ ಕೆಲವು ಸಂಘಟನೆಗಳು ಮಾಡುತ್ತಿರುವ ಆರೋಪ ಸರಿಯಲ್ಲ ಎಂದು ಮೊಯ್ದಿನ್ ಬಾವ ತಿಳಿಸಿದರು.

Leave a Reply