ಮಂಗಳೂರು  : ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ

ಮಂಗಳೂರು: ದ.ಕ ಜಿಲ್ಲೆ ರಾಜ್ಯದಲ್ಲಿ ಅತ್ಯಂತ ಸೂಕ್ಷ್ಮ ಜಿಲ್ಲೆಯಾಗಿದ್ದು ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೋಲೀಸ್ ಇಲಾಖೆ ಅತ್ಯಂತ ದಕ್ಷ ಹಾಗೂ ನಿಷ್ಠೆಯಿಂದ ಕಾರ್ಯಾಚರಿಸುವ ಮೂಲಕ ಮಾದರಿಯಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಮಾ ಎನ್.ಜಿ. ಅವರು ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಅವರು ಸೋಮವಾರ ಜಿಲ್ಲಾ ಪೋಲೀಸ್ ಮತ್ತು ಮಂಗಳೂರು ನಗರ ಪೋಲೀಸ್ ಕಮಿಷನರೇಟ್  ವತಿಯಿಂದ ಪೋಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಪೋಲೀಸ್ ಕ್ರೀಡಾಕೂಟವನ್ನು  ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಶೇ: 75 ರಷ್ಟು ಜನ ಶಾಂತಿಪ್ರಿಯರು ಆದರೆ ಶೇ: 25 ರಷ್ಟು ಕಿಡಿಗೇಡಿಗಳಿಂದ ಜಿಲ್ಲೆಯಲ್ಲಿ ಆಗಿಂದಾಗ್ಗೆ ಕೋಮು ಸೌಹಾರ್ದತೆಗೆ ಧಕ್ಕೆಯುಂಟಾಗಿ ಅಶಾಂತಿಗೆ ನಾಂದಿಯಾಗುತ್ತಿದೆ. ಆದರೆ ಜಿಲ್ಲೆಯ ನಿಷ್ಠಾವಂತ ಪೋಲೀಸರು ಇಂತಹಾ ಸಂದರ್ಭಗಳಲ್ಲಿ ಶಾಂತ ಚಿತ್ತರಾಗಿ ಸದೃಢವಾದ ಮನಸ್ಸಿನಿಂದ ಕ್ಷಿಷ್ಠ ಪರಿಸ್ಥಿತಿಗಳನ್ನು ಸಂಧರ್ಭೋಚಿತವಾಗಿ ನಿರ್ವಹಿಸುವ ಮೂಲಕ ಜಿಲ್ಲೆಯಲ್ಲಿ ಶಾಂತಿಸೌಹಾರ್ದತೆಯನ್ನು ಕಾಪಾಡುವಲ್ಲಿ ಕಾರ್ಯ ತತ್ಪರತೆಯನ್ನು ಮೆರೆಯುತ್ತಿರುವುದು ಅತ್ಯಂತ ಶ್ಲಾಘನೀಯವಾದುದು ಎಂದು ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು.

ಪ್ರಾರಂಭದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ:ಎಸ್.ಡಿ ಶರಣಪ್ಪ ಸ್ವಾಗತಿಸಿದರು. ಅಪರ ಜಿಲ್ಲಾ ಪೋಲೀಸ್ ವರಿಷ್ಠಾಧಿಕರಿ ವಿನ್ಸೆಂಟ್ ಶಾಂತ ಕುಮಾರ್ ವಂದಿಸಿದರು. ಮಂಗಳೂರು ನಗರ ಪೋಲೀಸ್ ಕಮೀಷನರ್ ಮುರುಗನ್, ಡಿ.ಸಿ.ಪಿ ಸಂಜೀವ ಪಾಟೀಲ್ ಮುಂತಾದವರು ಹಾಜರಿದ್ದರು. ಸುಮಾರು 100 ಪೋಲೀಸ್ ಕ್ರೀಡಾಪಟುಗಳು ಇಂದು ಮತ್ತು ನಾಳೆ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸುವರು.

Leave a Reply

Please enter your comment!
Please enter your name here