ಮಂಗಳೂರು: ಪ್ರಧಾನ ಮಂತ್ರಿ ಮುದ್ರಾ ಸಾಲ ಅಭಿಯಾನ

ಮಂಗಳೂರು: ಮಾನ್ಯ ಪ್ರಧಾನ ಮಂತ್ರಿಗಳು ತಾ|| 08.04.2015 ರಂದು ಪ್ರಧಾನಮಂತ್ರಿ ಮುದ್ರಾ ಸಾಲ ಯೋಜನೆಯನ್ನು ಘೋಷಿಸಿರುತ್ತಾರೆ. ಈ ಯೋಜನೆಯಡಿಯಲ್ಲಿ ಸ್ವ ಉದ್ಯೋಗದಲ್ಲಿ ಆಸಕ್ತಿಯುಳ್ಳ  ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಒದಗಿಸುವ ವ್ಯವಸ್ಥೆಯಿರುತ್ತದೆ. ಇದರಲ್ಲಿ ಫಲಾನುಭವಿಗಳು ಕೃಷಿ ಹಾಗೂ ಕೃಷಿ ಸಂಬಂಧಿ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ಆರ್ಥಿಕ ಚಟುವಟಿಕೆ/ಕಿರುಉದ್ದಿಮೆಗಳಲ್ಲಿ ಸ್ವ ಉದ್ಯೋಗ ಪ್ರಾರಂಭಿಸಲು ದೇಶದ ಎಲ್ಲಾ ಬ್ಯಾಂಕ್‍ಗಳ ಮೂಲಕ ಸಾಲ ನೀಡಲಾಗುತ್ತದೆ.

ಈ ಯೋಜನೆಯಲ್ಲಿ ಆಸಕ್ತ ಫಲಾನುಭವಿಗಳು ವ್ಯಾಪಾರ, ಸೇವೆ ಹಾಗೂ ಸಣ್ಣ ಕೈಗಾರಿಕೆಗಳಲ್ಲಿ ಸ್ವಂತ ಉದ್ಯೋಗ ಪ್ರಾರಂಭಿಸಬಹುದು.

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಒಟ್ಟು 5.77 ಕೋಟಿ ಕಿರು ಉದ್ದಿಮೆಗಳಿದ್ದು ಅವುಗಳಲ್ಲಿ ಸುಮಾರು 12 ಕೋಟಿ ಜನರಿಗೆ ಜೀವನೋಪಾಯದ  ಮಾರ್ಗ ದೊರೆತಿದೆ. ದೇಶದ ಆರ್ಥಿಕ ವಲಯದಲ್ಲಿ ಇವುಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಇವುಗಳಲ್ಲಿ, ಹೆಚ್ಚಿನ ಉದ್ದಿಮೆಗಳನ್ನು ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಇತರ  ಹಿಂದುಳಿದ ವರ್ಗದ ಜನಾಂಗದವರು ನಿರ್ವಹಿಸುತ್ತಿದ್ದಾರೆ. ಈ ಉದ್ದಿಮೆಗಳ ಶೇ. 95 ಕ್ಕೂ ಹೆಚ್ಚಿನ ಉದ್ದಿಮೆಗಳು ಯಾವುದೇ ಸಾಂಸ್ಥಿಕ ಮೂಲಗಳಿಂದ ಹಣಕಾಸಿನ  ಸಹಾಯ ಪಡೆದುಕೊಂಡಿರುವುದಿಲ್ಲ.

ಈ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರವು ‘ಮುದ್ರಾ’  ಬ್ಯಾಂಕ್ ಸ್ಥಾಪಿಸಿ, ದೇಶದ ಎಲ್ಲಾ ವಾಣಿಜ್ಯ ಹಾಗೂ ಗ್ರಾಮೀಣ ಬ್ಯಾಂಕ್‍ಗಳ ಮೂಲಕ ಕಿರು ಉದ್ದಿಮೆದಾರರಿಗೆ ಸಾಲ ಯೋಜನೆಗಳನ್ನು ರೂಪಿಸಿದೆ. ಈ ಸಾಲ ಯೋಜನೆಗಳನ್ನು ಸಾಲದ ಮೊತ್ತದ ಆಧಾರದ ಮೇಲೆ ಮೂರು ವರ್ಗಗಳಲ್ಲಿ ವಿಂಗಡಿಸಲಾಗಿದೆ.

1)            ರೂ. 50,000/ ದ ವರೆಗಿನ ಸಾಲವನ್ನು ‘ಶಿಶು’.

2)            ರೂ. 50,000 ಕ್ಕೂ ಮೇಲ್ಟಟ್ಟು ರೂ 5.00 ಲಕ್ಷದ ವರೆಗಿನ ಸಾಲವನ್ನು ‘ಕಿಶೋರ’ ಹಾಗೂ

3)            ರೂ 5.00 ಲಕ್ಷ ಕ್ಕೂ ಮೇಲ್ಪಟ್ಟು ರೂ. 10.00 ಲಕ್ಷದ  ವರೆಗಿನ ಸಾಲವನ್ನು ‘ತರುಣ್’ ಎಂದು ವಿಂಗಡಿಸಲಾಗಿದೆ.

ಈ ಯೋಜನೆಯಲ್ಲಿ ಕಿರು ಉದ್ದಿಮೆಗಳನ್ನು ಪ್ರಾರಂಭಿಸಲು, ಸರಳ ಷರತ್ತುಗಳ ಮೇಲೆ ಸಾಲ ನೀಡುವ ವ್ಯವಸ್ಥೆಯಿದ್ದು ಸಾಲದ ಗರಿಷ್ಠ ಮೊತ್ತವನ್ನು ರೂ 10.00 ಲಕ್ಷಕ್ಕೆ ಮಿತಿಗೊಳಿಸಲಾಗಿದೆ.

ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ, ದೇಶದಾದ್ಯಂತ ಎಲ್ಲಾ ವಾಣಿಜ್ಯ ಹಾಗೂ ಗ್ರಾಮೀಣ ಬ್ಯಾಂಕ್‍ಗಳ ಮೂಲಕ     ತಾ|| 25.09.2015 ರಿಂದ 02.10.2015 ರವರೆಗೆ ಶಿಬಿರಗಳನ್ನು ಆಯೋಜಿಸಿ, ಆಸಕ್ತ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರಗಳನ್ನು ನೀಡಲಾಗುವುದು. ಅಲ್ಲದೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಅವಧಿಯಲ್ಲಿ ಮಹಾ ಶಿಬಿರವನ್ನು ಆಯೋಜಿಸಿ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರಗಳನ್ನು ನೀಡಲಾಗುವುದು. ಅಂಥ ಒಂದು ಮಹಾ ಶಿಬಿರ (ಮೆಗಾ ಕ್ಯಾಂಪ್) ವನ್ನು, ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ. ತಾ|| 28.09.2015, ಸೋಮವಾರ, ಸಾಯಂಕಾಲ 4.00 ಘಂಟೆಗೆ, ಮಂಗಳೂರು. ದ.ಕ. ಜಿಲ್ಲಾ ಪಂಚಾಯ್ತನ  ‘ನೇತ್ರಾವತಿ’ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಆಸಕ್ತರು ತಾವು ವ್ಯವಹರಿಸುತ್ತಿರುವ ಬ್ಯಾಂಕ್ ಸಂಪರ್ಕಿಸಿ, ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

Leave a Reply