ಮಂಗಳೂರು: ಬಿಸಿಯೂಟ ಕಾರ್ಮಿಕರ ವೇತನ ಹೆಚ್ಚಿಸಿ – ವಸಂತ ಆಚಾರಿ

ಮಂಗಳೂರು: ಕಳೆದ 7 ವರ್ಷಗಳಿಂದ ಕೇಂದ್ರ ಸರಕಾರವು ಬಿಸಿಯೂಟ ಕಾರ್ಮಿಕರ ವೇತನ ಏರಿಸಿಲ್ಲ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2015-16ರ ಸಾಲಿನ ಬಜೆಟ್‍ನಲ್ಲಿ ಮಹಿಳೆ ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆಗೆ 8 ಸಾವಿರ ಕೋಟಿ ಇಳಿಕೆ ಮಾಡಿದ್ದು, 2014-15ರಲ್ಲಿ 16,361 ಕೋಟಿ ರೂಪಾಯಿ ಇತ್ತು. 2016-17ರ ಸಾಲಿನ ಬಜೆಟ್‍ನಲ್ಲಿ 13,888 ಕೋಟಿ ರೂಪಾಯಿ ನಿಗದಿ ಪಡಿಸಿದ್ದು ಇದರಿಂದ ಬಿಸಿಯೂಟ ನೌಕರರಿಗೆ ಏನೇನೂ ಪ್ರಯೋಜನವಾಗದು. ಕನಿಷ್ಠ ರೂ, 1,000/- ಮಾಸಿಕ ವೇತನ ಏರಿಕೆ ಮಾಡಬೇಕಾಗಿತ್ತು.

ಈ ಬಜೆಟ್ ಅಧಿವೇಶನದಲ್ಲಿಯೇ ರೂ. 1,000/- ವೇತನವನ್ನು ಕೇಂದ್ರ ಸರಕಾರ ನೀಡಬೇಕು ಎಂದು ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿಯವರು ಒತ್ತಾಯಿಸಿದರು. ಅಕ್ಷರದಾಸೋಹ ನೌಕರರು ಮೂರು ಬಾರಿ ಪಾರ್ಲಿಮೆಂಟ್ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಕೇಂದ್ರ ಸರಕಾರದ ಕ್ರಮ ಶೂನ್ಯವಾಗಿದೆ. ರಾಜ್ಯದ ಸಿದ್ದರಾಮಯ್ಯ ಸರಕಾರದ ಮುಂದೆ ಫೆಬ್ರವರಿ 19ರಂದು ಬೃಹತ್ ಪ್ರತಿಭಟನೆ ನಡೆಸಿ ಮಾಸಿಕ ವೇತನ ಏರಿಕೆಗಾಗಿ ಒತ್ತಾಯಿಸಲಾಗಿದೆ. ಸುಪ್ರೀಂ ಕೋರ್ಟ್‍ನ ನಿರ್ದೇಶನ ಮೇರೆಗೆ ಜಾರಿಯಾದ ಬಿಸಿಯೂಟ ಯೋಜನೆಯನ್ನು ಯಶಸ್ವಿಗೊಳಿಸುವ ಬಿಸಿಯೂಟ ನೌಕರರಿಗೆ ಸಾಮಾಜಿಕ ಭದ್ರತೆ ಹಾಗೂ ಮೂಲ ಸೌಕರ್ಯವನ್ನು ಸರಕಾರ ನೀಡಬೇಕಾಗಿದೆ ಎಂದು ಅವರು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿಯವರು ಮಾತನಾಡುತ್ತಾ ಶಾಸಕ, ಸಂಸದರುಗಳಿಗೆ ವೇತನ, ಪಿಂಚಣಿ ಇತ್ಯಾದಿ ಸೌಲಭ್ಯ ಹೆಚ್ಚಿಸುವ ಸರಕಾರ ಬಡಜನರ ಜೀವನ ಮಟ್ಟ ಸುಧಾರಿಸಲು ಸರಕಾರ ಮುಂದಾಗುತ್ತಿಲ್ಲ ಎಂದರು. ಪ್ರತಿಭಟನೆಗಾರರನ್ನು ಉದ್ದೇಶಿಸಿ ಸಂಘದ ಅಧ್ಯಕ್ಷರಾದ ಪದ್ಮಾವತಿ ಶೆಟ್ಟಿ, ಕಾರ್ಯದರ್ಶಿ ಗಿರಿಜ ಮೂಡುಬಿದ್ರಿ  ಮಾತನಾಡಿದರು.

ಪ್ರತಿಭಟನಾ ಪ್ರದರ್ಶನದ ನೇತೃತ್ವವನ್ನು ಸಿಐಟಿಯು ಮುಂದಾಳು ಸದಾಶಿವದಾಸ್, ಜಯಶ್ರೀ, ಯಶೋಧಾ, ಹೇಮಲತಾ, ಮೋನಮ್ಮ ಮುಂತಾದವರು ವಹಿಸಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಎ ಮನವಿಯನ್ನು ಸಲ್ಲಿಸಲಾಯಿತು.

ಪ್ರಾರಂಭದಲ್ಲಿ ಭವ್ಯ ಮುಚ್ಚೂರುರವರು ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ನೀಡಿದರು.

Leave a Reply

Please enter your comment!
Please enter your name here