ಮಂಗಳೂರು: ಮರಳುಗಾರಿಕೆಗೆ ಪ್ರತಿ ಎಕರೆಗೆ ತಿಂಗಳಿಗೆ 10 ಪರವಾನಿಗೆಯನ್ನು ನೀಡಲು ಜಿಲ್ಲಾಧಿಕಾರಿ ಸೂಚನೆ

Spread the love

ಮಂಗಳೂರು: ದಕ್ಷಿಣ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಸಭೆ ಗುರುವಾರ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಜರುಗಿತು

ಸಭೆಯ ಅಧ್ಯಕ್ಷತೆಯನ್ನುವಹಿಸಿದ ಜಿಲ್ಲಾಧಿಕಾರಿಗಳು ಚರ್ಚಿಸಬೇಕಾದ ವಿಷಯದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ಸಮಿತಿ ಸದಸ್ಯರಿಗೆ ತಿಳಿಸುವಂತೆ ಸದಸ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.

ಉಪ ನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿ ಇವರು ಜಿಲ್ಲೆಯಲ್ಲಿ ಪ್ರಸಕ್ತ ಮರಳುಗಾರಿಕೆಯನ್ನು ನಿಷೇಧಿಸಿರುವುದರಿಂದ ಕಟ್ಟಡ ಕಾಮಗಾರಿಗಳಿಗೆ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಮರಳಿನ ಕೊರತೆಯುಂಟಾಗಿರುವುದಾಗಿ ಸಾರ್ವಜನಿಕರು ಬರಕೊಂಡಿರುವ ಮನವಿಗಳಿಗೆ ಸಂಬಂಧಿಸಿದಂತೆ ಮಳೆಗಾಲದಲ್ಲಿ ಮರಳುಗಾರಿಕೆಗೆ ಪರವಾನಿಗೆ ನೀಡುವ ಬಗ್ಗೆ ದಿನಾಂಕ:10-07-2015 ರಂದು ನಡೆದ ಸಭೆಯಲ್ಲಿ ಚರ್ಚಿಸಿದಂತೆ ಸಾಂಪ್ರದಾಯಿಕ ವಿಧಾನದಿಂದ ಮಳೆಗಾಲದಲ್ಲಿ ಮರಳನ್ನು ತೆಗೆಯುವುದರಿಂದ ಮೀನುಗಾರಿಕೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಆಕ್ಷೇಪಣೆ ಸಲ್ಲಿಸಲು ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿದ್ದು, ಈ ಬಗ್ಗೆ 1) ಪಾವೂರು ಉಳಿಯ, 2) ಬಾವಲಿ ಕುದ್ರು ಪರಿಸರ ಹೊಳೆ ಬದಿ ನಿವಾಸಿಗಳು, 3) ಹನೀಫ್ ಸಾಹೇಬ್ ಪಾಜೆಪಳ್ಳ ಇವರಿಂದ ಆಕ್ಷೇಪಣೆ ಬಂದಿರುವುದಾಗಿ ತಿಳಿಸಿದರು.

ಪಾವೂರು ಉಳಿಯ ಪ್ರದೇಶದಲ್ಲಿ ಮರಳು ತೆಗೆದಲ್ಲಿ ಕುಡಿಯುವ ನೀರಿನ ಬಾವಿಗೆ ಉಪ್ಪು ನೀರು ಹರಿದು ಕುಡಿಯುವ ನೀರಿಗೆ ತೊಂದರೆಯುಂಟಾಗುವುದರಿಂದ  ಈ ಪ್ರದೇಶದಲ್ಲಿ ಮರಳುಗಾರಿಕೆಗೆ ಪರವಾನಿಗೆ ನೀಡಬಾರದಾಗಿ ಕೋರಿಕೊಂಡಿದ್ದರು, ಈ ವಿಚಾರವನ್ನು ಸಭೆಯಲ್ಲಿ ಚರ್ಚಿಸಲಾಗಿ ಪ್ರೊ|| ಎಸ್.ಜಿ.ಮಯ್ಯ ಇವರು ಮಳೆಗಾಲದಲ್ಲಿ ನದಿಗಳಲ್ಲಿ ಮಳೆ ನೀರಿನ ಹರಿವು ಸಾಕಷ್ಟು ಇರುವುದರಿಂದ ಮರಳು ತೆಗೆಯುವುದರಿಂದ ಬಾವಿಗಳಲ್ಲಿ ಉಪ್ಪಿನಾಂಶ ಸೇರುವ ಸಾಧ್ಯತೆ ಕಡಿಮೆ ಇರುವುದಾಗಿ ಹಾಗೂ ಅಖZ ಪ್ರದೇಶದ ಮೇಲ್ಭಾಗದಲ್ಲಿ ಅಣೆಕಟ್ಟುಗಳಿರುವುದರಿಂದ ನದಿಯ ಮೇಲ್ಭಾಗದಿಂದ ನೀರಿನ ಹರಿವು ಇರದ ಕಾರಣ ಬೇಸಿಗೆ ಕಾಲದಲ್ಲಿ ಮಾತ್ರ ಉಪ್ಪಿನಾಂಶ ಸೇರುವ ಸಾಧ್ಯತೆಗಳಿರುವುದಾಗಿ ಹಾಗೂ ಮಳೆಗಾಲದಲ್ಲಿ ಮಾನವ ಶ್ರಮದಿಂದ ಮರಳು ನಿಯಮಿತ ಪ್ರಮಾಣದಲ್ಲಿ ತೆಗೆದಲ್ಲಿ ಪರಿಸರಕ್ಕೆ ಯಾವುದೇ ರೀತಿಯಿಂದ ತೊಂದರೆಯಾಗುವುದಿಲ್ಲವೆಂದು ತಿಳಿಸಿದರು.

ಈ ಪ್ರದೇಶದಲ್ಲಿ ದ್ವೀಪದ 500 ಮೀಟರ್ ಸರಹದ್ದಿನಲ್ಲಿ ಮರಳುಗಾರಿಕೆ ನಡೆಸುವುದನ್ನು ಈಗಾಗಲೇ ನಿರ್ಬಂಧಿಸಲಾಗಿರುತ್ತದೆ. ಸಭೆಯು ನೀಡಿರುವ ಅಭಿಪ್ರಾಯದಂತೆ ದ್ವೀಪದ 500 ಮೀಟರ್ ಸುತ್ತಳತೆಯನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಮರಳುಗಾರಿಕೆ ನಡೆಸಲು ಅನುಮತಿ ನೀಡಬಹುದಾಗಿರುತ್ತದೆ ಹಾಗೂ  ಈ ಹಿಂದಿನಂತೆ ನಿಷೇಧವನ್ನು ಮುಂದುವರಿಸುವುದು.

ಕೆಂಜಾರು ಗ್ರಾಮ ಬಾವಲಿ ಕುದ್ರು ಪರಿಸರ ಹೊಳೆ ಬದಿ ನಿವಾಸಿಗಳು ತಮ್ಮ ಮನವಿಯಲ್ಲಿ ನದಿಯಿಂದ ಮರಳು ತೆಗೆದಲ್ಲಿ ನದಿ ಆಳವಾಗಿ ತಮಗೆ ದೋಣಿ ನಡೆಸಲು ತೊಂದರೆಯುಂಟಾಗುತ್ತಿರುವುದಾಗಿ ಹಾಗೂ ಮರಳುಗಾರಿಕೆ ವಾಹನ ಸಂಚಾರದಿಂದ ರಸ್ತೆಗಳು ಹದಗೆಟ್ಟಿದ್ದು, ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ತೊಂದರೆಯುಂಟಾಗುವುದರಿಂದ ಮರಳುಗಾರಿಕೆಗೆ ಪರವಾನಿಗೆ ನೀಡಬಾರದಾಗಿ ಕೋರಿಕೊಂಡಿರುತ್ತಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ ಕೇವಲ ಮಾನವ ಶ್ರಮದಿಂದ ಮರಳು ತೆಗೆಯುವುದರಿಂದ ನದಿಯು ಆಳವಾಗುವ ಸಂಭವವಿರುವುದಿಲ್ಲ ಎಂಬ ಅಭಿಪ್ರಾಯವನ್ನು ಸಭೆಯು ಸೂಚಿಸಿರುವುದರಿಂದ ನಿರ್ದಿಷ್ಟ ಮಟ್ಟದಲ್ಲಿ ಮರಳು ತೆಗೆಯಲು ಅನುಮತಿಸಲು ತೀರ್ಮಾನಿಸಲಾಯಿತು.

ಹನೀಫ್ ಸಾಹೇಬ್ ಪಾಜೆಪಳ್ಳ ದೂರು ಮತ್ತು ನ್ಯಾಯ ಸಮಿತಿಯ ಅಧ್ಯಕ್ಷರು, ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ, ಮಂಗಳೂರು ಇವರು ಜೂನ್ ತಿಗಳಿನಿಂದ ಸೆಪ್ಟೆಂಬರ್ ತಿಂಗಳ ತನಕ ಮೀನಿನ ಸಂತಾನೋತ್ಪತ್ತಿ ಸಮಯವಾಗಿದ್ದು, ಈ ಸಮಯದಲ್ಲಿ ಮರಳುಗಾರಿಕೆ ನಡೆಸಿದಲ್ಲಿ ಮೀನಿನ ಸಂತಾನ ನಾಶವಾಗುವುದರಿಂದ ಮಳೆಗಾಲದಲ್ಲಿ ಮೀನುಗಾರಿಕೆಗೆ ಪರವಾನಿಗೆ ನೀಡಬಾರದಾಗಿ ಕೋರಿಕೊಂಡಿರುವುದನ್ನು ಪರಿಶೀಲಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆಯನ್ನು ಸಮುದ್ರದಿಂದ ಮಾಡಲಾಗುತ್ತಿದ್ದು, ಅತೀ ಅಲ್ಪ ಪ್ರಮಾಣದಲ್ಲಿ ನದಿಗಳಿಂದ ಮಾನವ ಶ್ರಮದಿಂದ ಸಾಂಪ್ರದಾಯಿಕವಾಗಿ ಮರಳು ತೆಗೆಯುವುದರಿಂದ ಮೀನಿನ ಸಂತಾನೋತ್ಪತ್ತಿಗೆ ಯಾವುದೇ ತೊಂದರೆಯುಂಟಾಗುವ ಸಾಧ್ಯತೆಗಳಿರುವುದಿಲ್ಲ ಎಂಬುದಾಗಿ ಅಭಿಪ್ರಾಯಟ್ಟಿತ್ತು.  ಮೀನಿನ ಸಂತಾನೋತ್ಪತ್ತಿ ಕಾಂಡ್ಲಾ ಗಿಡ ಇರುವ ಪ್ರದೇಶದಲ್ಲಿ ಹಾಗೂ ಚಿಪ್ಪು ಮೀನುಗಳು ಅಡಗಿರುವ  2 ಅಡಿಗಿಂತ ಕಡಿಮೆ ನೀರಿರುವ ಪ್ರದೇಶದಲ್ಲಿ ಕೂಡಾ ಮರಳುಗಾರಿಕೆ ನಡೆಸದಂತೆ ಕ್ರಮ ಜರುಗಿಸಲು ನಿರ್ದೇಶಿಸಲಾಯಿತು.

ಹಾಲಿ ಮರಳು ಲಭ್ಯವಿಲ್ಲದೇ ಇರುವುದರಿಂದ ವಿವಿಧ ಖಾಸಗಿ ಹಾಗೂ ಸರ್ಕಾರಿ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿರುತ್ತವೆ. ಈ ಕಾಮಗಾರಿಯನ್ನು ಮುಂದುವರೆಸಲು ಹಾಗೂ ಅವಶ್ಯ ಮರಳನ್ನು ಒದಗಿಸುವಂತೆ ವಿವಿಧ ಸಂಘಟನೆಗಳು, ಬಿಲ್ಡರ್ಸ್ ಅಸೋಸಿಯೇಷನ್, ಲಾರಿ ಮಾಲೀಕರ ಸಂಘ, ಸಿಪಿಎಂ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಇವರು ಧರಣಿ ನಡೆಸಿ ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಿರುತ್ತಾರೆ ಎಂದು ಉಪನಿರ್ದೇಶಕರು ಹೇಳಿದರು.

ಜಿಲ್ಲೆಯಲ್ಲಿ ಮರಳುಗಾರಿಕೆಯನ್ನು ನಿಷೇಧಿಸಿರುವುದರಿಂದ ಜಿಲ್ಲೆಯಾದ್ಯಂತ ಸಾವಿರಾರು ಮಂದಿ ಕೂಲಿ ಕಾರ್ಮಿಕರು ಜೀವನ ನಡೆಸುವುದು ಕಷ್ಟ ಸಾಧ್ಯವಾಗಿದ್ದು, ಲಾರಿ ಮಾಲೀಕರು ಕೂಡಾ ಮರಳು ಸಾಗಾಟವನ್ನು ನಿಷೇಧಿಸಿರುವುದರಿಂದ ಜೀವನೋಪಾಯಕ್ಕೆ ಕಷ್ಟವಾಗುತ್ತಿರುವುದಾಗಿ ತಿಳಿಸಿದರು

ಸಧ್ಯದ ಪರಿಸ್ಥಿತಿಯಲ್ಲಿ ಅಂದರೆ, ಅಗೋಸ್ತ್ 31 ರ ತನಕ ತೆಗೆಯಲಾಗುವ ಮರಳನ್ನು ಜಿಲ್ಲೆಯ ಆಂತರಿಕ ಬಳಕೆಗೆ ಮಾತ್ರ ಬಳಸಿಕೊಳ್ಳಲು ಹಾಗೂ ಅಂತರ್ ಜಿಲ್ಲಾ ಮರಳು ಸಾಗಾಟವನ್ನು ಕಡ್ಡಾಯವಾಗಿ ನಿರ್ಬಂಧಿಸಲು ತೀಮಾರ್ನಿಸಲಾಯಿತು. ಮಾನವ ಶ್ರಮದಿಂದ ಮಾತ್ರ ಮರಳುಗಾರಿಕೆಯನ್ನು ನಡೆಸುವಂತೆ ನಿರ್ದೇಶಿಸಲಾಯಿತು. ಜಿಲ್ಲೆಯಲ್ಲಿ ಹಾಲಿ ಇರುವ 232 ಎಕರೆಗೆ ಸಂಬಂಧಿಸಿದಂತೆ ಪ್ರತಿ ಎಕರೆಗೆ ತಿಂಗಳಿಗೆ 10 ಪರವಾನಿಗೆಯನ್ನು ಮಾತ್ರ ನೀಡುವಂತೆ ಜಿಲ್ಲಾಧಿಕಾರಿಯವರು ಉಪ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಇವರಿಗೆ ಸೂಚಿಸಿದರು. ರಜಾ ದಿನಗಳಲ್ಲಿ ಯಾವುದೇ ಮರಳುಗಾರಿಕೆ ನಡೆಯದಂತೆ ಬಾಕಿ ದಿನಗಳಲ್ಲಿ ಪೂರ್ವಾಹ್ನ 9:00 ಗಂಟೆಯಿಂದ ಅಪರಾಹ್ನ 5:00 ಗಂಟೆ ತನಕ ಮಾತ್ರ ಮರಳುಗಾರಿಕೆಗೆ ಅನುಮತಿಸಲು ಹಾಗೂ ದಿನಾಂಕ:23-07-2015 ರಿಂದಲೇ ಪ್ರಾರಂಭಿಸಬಹುದಾಗಿ ಜಿಲ್ಲಾಧಿಕಾರಿಯವರು ಉಪ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಇವರಿಗೆ ಸೂಚಿಸಿದರು.


Spread the love