ಮಂಗಳೂರು: ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನಾಚರಣೆ

Spread the love

ಮಂಗಳೂರು :   ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದ.ಕ. ಮಂಗಳೂರು ,ವಕೀಲರ ಸಂಘ ಮಂಗಳೂರು, ಶಿಶು ಅಭಿವೃದ್ಧಿ ಯೋಜನೆ, ಮಂಗಳೂರು (ನಗರ) ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಿಕಟ್ಟೆ ಕದ್ರಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ  ನ.25 ರಂದು ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನ ದಿನಾಚರಣೆಯನ್ನು  ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ಗಣೇಶ್ ಬಿ.   ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ” ಈ ದಿನ ನಗರ ಹಾಗೂ ಕೆಲವೊಂದು ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣೊಬ್ಬಳು ಭಯದ ವಾತಾವರಣದಲ್ಲಿ ಬದುಕ ಬೇಕಾದ ಪರಿಸ್ಥಿತಿಯನ್ನು ನಾವು ಕಾಣುತ್ತೇವೆ. ಆದುದರಿಂದ ಹೆಣ್ಣು ಮಗಳು ಸಮಾಜದಲ್ಲಿ ನಿರ್ಭಯದಿಂದ ಬದುಕಲು ಮಹಿಳೆಯರಿಗೆ ಪೂರಕವಾದ ಕಾನೂನನ್ನು ಅರಿತು ಕೊಳ್ಳುವುದು ಅತಿ ಅವಶ್ಯಕವಾಗಿದೆ.

ಈ ನಿಟ್ಟಿನಲ್ಲಿ ದೇಶದಾದ್ಯಂತ ಮಹಿಳಾ ದೌರ್ಜನ್ಯ ನಿರ್ಮೂಲನೆ ಮಾಡಲು ಎಲ್ಲಾ ಸಂಘ ಸಂಸ್ಥೆಗಳು ಒಗ್ಗಟ್ಟಿನಿಂದ ಪ್ರಯತ್ನಿಸಬೇಕಾಗಿದೆ. ಸರಕಾರಿ ಕಛೇರಿಗಳಲ್ಲಿ ಹಾಗೂ ಇತರ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಪೂರಕವಾದ ಸಮಲತ್ತುಗಳನ್ನು ಒದಗಿಸಬೇಕು ಮತ್ತು  ರಾತ್ರಿ ಸಮಯದಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ಎಚ್ಚರಿಕೆಯಿಂದ ಇರಬೇಕು”  ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ  ಎಸ್.ಪಿ.ಚಂಗಪ್ಪ ರವರು ಮಹಿಳೆಯರು ಸಂವಿಧಾನ ಬದ್ಧವಾದಂತಹ ಹಕ್ಕು ಮತ್ತು ಕರ್ತವ್ಯ, ಮಹಿಳಾ ಪೂರಕವಾದ ಕಾನೂನುಗಳನ್ನು ತಿಳಿಯುವುದು ಅತಿ ಅವಶ್ಯಕವಾಗಿರುತ್ತದೆ ಎಂದು ಸಭೆಗೆ ತಿಳಿಸಿದರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನ್ಯಾಯವಾದಿ ಲೀಲಾವತಿ ಎ.,  ರವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಬಗ್ಗೆ ಸವಿವರವಾದ ಮಾಹಿತಿಯನ್ನು ಮಹಿಳೆಯರಿಗೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಐಸಿಡಿಎಸ್ ನಿರೂಪಣಾಧಿಕಾರಿಗಳಾದ ಎಸ್. ನಟರಾಜ್ ರವರು ಬಾಲ್ಯವಿವಾಹ ನಿಷೇಧ, ವರದಕ್ಷಿಣೆ, ಆಸ್ತಿ ಹಕ್ಕು, ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರಿಗೆ ಇರುವಂತಹ ಜೀವನಾಂಶ, ಕೆಲಸ ನಿರ್ವಹಿಸುವಲ್ಲಿ ಆಗುವಂತಹ ಲೈಂಗಿಕ ದೌರ್ಜನ್ಯ ಇನ್ನಿತರ ಕಾನೂನಿನ ಬಗ್ಗೆ ಮಾತನಾಡುತ್ತಾ ಕುಟುಂಬದಲ್ಲಿ ಮಹಿಳೆಯರ ದೌರ್ಜನ್ಯ ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ವಿವರವಾಗಿ ತಿಳಿಸಿದರು.

ಲಯನೆಸ್ ಮಿಲಾಗ್ರಿಸ್ ಸಂಸ್ಥೆಯ ಕಾರ್ಯದರ್ಶಿಯಾದ ಗುಲಾಬಿ.ಕೆ ರವರು ಈ ದಿನ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಕಾನೂನಿನ ಮಾಹಿತಿಯನ್ನು ನೀಡುವುದರ ಮೂಲಕ ಸಮಾಜವನ್ನು ಜಾಗೃತಿಗೊಳಿಸುವ ಕರ್ತವ್ಯವನ್ನು ನಾವೆಲ್ಲರೂ ನಿರ್ವಹಿಸಬೇಕು ಎಂದು ಸಭೆಗೆ ತಿಳಿಸಿದರು.

ಈ ಒಂದು ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯಾದ          ಶಕೀಲಾ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕದ್ರಿ ಇಲ್ಲಿಯ ಶಿಕ್ಷಕಿಯಾದ  ಡೋರಾತಿ  ರವರು ಭಾಗವಹಿಸಿದ್ದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಂಗಳೂರು (ನಗರ) ಶ್ಯಾಮಲ ಸಿ.ಕೆ.  ಇವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಮೇಲ್ವಿಚಾರಕಿ, ಮಂಗಳೂರು (ನಗರ) ಶೀಲಾವತಿ,  ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.


Spread the love