ಮಂಗಳೂರು: ಮಹಿಳೆಯರ ಮೇಲೆ ಪೊಲೀಸರಿಂದ ದೌರ್ಜನ್ಯ: ಆರೋಪ ಪ್ರತ್ಯಾರೋಪ ; ಎಸ್ ಐ ಪರ ನಿಂತ ಸಾರ್ವಜನಿಕರು

ಮಂಗಳೂರು: ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗೆಂದು ತೆರಳಿದ್ದ ಬೆಳ್ತಂಗಡಿ ಪೊಲೀಸರು ಹಾಗೂ ಮನೆಯವರ ನಡುವೆ ವಾಗ್ವಾದ ನಡೆದು ಪೊಲೀಸರ ಮೇಲೆ ಮನೆಯವರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹಾಗೂ ಪೊಲೀಸರು ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಮನೆಯವರು ಆರೋಪಿಸಿದ ಘಟನೆಯ ಬೆನ್ನಿಗೆ ಬೆಳ್ತಂಗಡಿ ಎಸ್ಸೈಯವರನ್ನು ಅಮಾನತು ಮಾಡಲಾಗಿದೆ ಎಂಬ ವದಂತಿ ಹರಡಿ ಮಂಗಳವಾರ ಬೆಳ್ತಂಗಡಿ ಠಾಣೆಯ ಎದುರು ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಘಟನೆಗೆ ಕಾರಣವಾದ ಪ್ರಕರಣದಲ್ಲಿ ಕೊಯ್ಯೂರು ಗ್ರಾಮದ ಪೆರ್ಮುದೆ ನಿವಾಸಿ ಪೌಲ್ ಪುತ್ರಾದೋ ಎಂಬವರ ಪುತ್ರ ಮೇಸ್ತ್ರಿ ಕೆಲಸ ಮಾಡುವ ಅನಿಲ್ ಎಂಬರಿಗೆ ಸವಣಾಲು ಗ್ರಾಮದ ನಿತ್ಯಾಧರ ನಿವಾಸಿ ಕಿರಣ್ ವಾಲ್ಟರ್ ಎಂಬಾತ 5.10 ಲಕ್ಷ ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಅನಿಲ್ ಅವರ ಪತ್ನಿಯನ್ನು ಇಸ್ರೇಲ್‌ಗೆ ಕೆಲಸಕ್ಕಾಗಿ ಕರೆದೊಯ್ಯಲು ವಿಸಾ ಕೊಡಿಸುವುದಾಗಿ ನಂಬಿಸಿ, ಹಂತ ಹಂತವಾಗಿ ಕಳೆದ ಒಂದು ವರ್ಷದಿಂದ 5.10 ಲಕ್ಷ ರೂ. ಪಡೆದಿದ್ದರು. ಆದರೆ ಕೊನೆಗೂ ವಿಸಾ ನೀಡದೆ ವಂಚಿಸಿದ್ದಾರೆ ಎಂದು ಅನಿಲ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ವಂಚಿಸಿದಾತ ಎರಡು ದಿನಗಳಲ್ಲಿ ಮತ್ತೆ ಇಸ್ರೇಲಿಗೆ ತೆರಳಲಿದ್ದಾರೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅನಿಲ್ ನೀಡಿದ ದೂರಿನಂತೆ ಸೋಮವಾರ ಸಂಜೆಯ ವೇಳೆ ಬೆಳ್ತಂಗಡಿ ಎಸ್ಸೈ ಸಂದೇಶ್, ಎಎಸ್ಸೈ ಕಲೈಮಾರ್ ಹಾಗೂ ಹಾಗೂ ಎಚ್.ಸಿ ಲಾರೆನ್ಸ್ ಅವರು ತನಿಖೆಗಾಗಿ ಮನೆಗೆ ತೆರಳಿದ್ದರು. ಮನೆಯಲ್ಲಿದ್ದ ಕಿರಣ್ ವಾಲ್ಟರ್‌ನನ್ನು ಕರೆದು ವಿಚಾರಿಸುತ್ತಿದ್ದಾಗ ಏಕಾಏಕಿ ಆರೋಪಿ ಹಾಗೂ ಮನೆಯಲ್ಲಿದ್ದ ತೆರೆಸಾ, ಜೆನ್ನಿಫರ್, ರೂಪೇಶ್, ಅನೂಪ್ ಯಾನೆ ಗಾಡ್ವಿನ್, ಅಮೀರಾ, ಹಾಗೂ ಸಿಸ್ಟರ್ ವಿನ್ನಿ ಡಿಕೋಸ್ತಾ ಅವರು ಪೊಲೀಸರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಎಸ್ಸೈ ಸಂದೇಶ್ ಹಾಗೂ ಪೊಲೀಸರು ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದು, ಠಾಣೆಯಲ್ಲಿ ಎಲ್ಲರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಕಿರಣ್ ವಾಲ್ಟರ್‌ನನ್ನು ನ್ಯಾಯಾ ಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಘಟನೆ ನಡೆದ ಬೆನ್ನಲ್ಲಿಯೇ ಮಂಗಳವಾರ ಬೆಳ್ತಂಗಡಿ ಎಸ್ಸೈ ಸಂದೇಶ್‌ರನ್ನು ಕಿರಣ್ ವಾಲ್ಟರ್ ಹಾಗೂ ಇತರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕೆಲಸದಿಂದ ಅಮಾನತು ಮಾಡಲಾಗುತ್ತಿದೆ ಎಂಬ ವದಂತಿ ತಾಲೂಕಿನಾದ್ಯಂತ ಹರಡಿ ಠಾಣೆಯ ಎದುರು ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ ಪ್ರತಿಭಟನೆಗೆ ಮುಂದಾದರು. ವಿವಿಧ ಜಾತಿ, ಧರ್ಮದ, ಸಂಘಟನೆಗಳ, ಪಕ್ಷಗಳ ಜನರು ನೂರಾರು ಸಂಖ್ಯೆಯಲ್ಲಿ ಠಾಣೆಯ ಮುಂದೆ ಜಮಾಯಿಸಿದರು. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಠಾಣಾಧಿಕಾರಿಯ ವಿರುದ್ಧ ಯಾವುದೇ ಕಾರಣಕ್ಕೂ ಕ್ರಮ ಕೈಗೊಳ್ಳಬಾರದು ಎಂದು ಒತ್ತಾಯಿಸಿದರು. ಇಲಾಖೆಯಿಂದ ಎಸ್ಸೈಯವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂಬ ಭರವಸೆ ದೊರೆತ ಬಳಿಕ ಸಾರ್ವಜನಿಕರು ಪ್ರತಿಭಟನೆಯನ್ನು ಹಿಂಪಡೆದುಕೊಂಡರು.

Leave a Reply