ಮಂಗಳೂರು: ಮುತ್ತೂಟ್ ಮಿನಿ ಫೈನಾನ್ಸ್ ದರೋಡೆ ಯತ್ನ ಮೂವರ ಬಂಧನ

ಮಂಗಳೂರು: ಕುಳಾಯಿ ಮುತ್ತೂಟ್ ಮಿನಿ ಫೈನಾನ್ಸ್ ಸಂಸ್ಥೆಗೆ ಹಾಡುಹಗಲೇ ಪಿಸ್ತೂಲ್ ಹಾಗೂ ಚೂರಿಯನ್ನು ತೋರಿಸಿ ದರೋಡೆಗೆ ಯತ್ನಿಸಿದ ಆರೋಪಿಗಳನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಬಂಧಿತರನ್ನು ಮೈಸೂರು ನಿವಾಸಿ ಅನಿಲ್ ಕುಮಾರ್ ವೈ. ಎಂ @ ಅರ್ಹಾನ್, ಪ್ರಾಯ(29), ಹರೀಶ್, ಪ್ರಾಯ(28) ಹಾಗೂ ಹಾಸನ ನಿವಾಸಿ, ಪ್ರಸಾದ್, ಪ್ರಾಯ(21), ಎಂದು ಗುರುತಿಸಲಾಗಿದೆ.

ಡಿಸೆಂಬರ್ 5 ರಂದು ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ಸಿಂಡಿಕೇಟ್ ಬ್ಯಾಂಕ್ ಬಳಿಯ ಮುತ್ತೂಟ್ ಮಿನಿ ಫೈನಾನ್ಸ್ ಕಂಪೆನಿಗೆ ಬೆಳಿಗ್ಗೆ 9-00 ಗಂಟೆ ಸುಮಾರು 3 ಜನ ಅಪರಿಚಿತರು ಬಂಗಾರದ ಮಾರುಕಟ್ಟೆ ಬೆಲೆ ಕೇಳುವ ನೆಪದಲ್ಲಿ ಮಾತನಾಡುತ್ತಾ ಅವರ ಪೈಕಿ ಒಬ್ಬಾತನು ಆತನ ಜೇಬಿನಲ್ಲಿದ್ದ ಪಿಸ್ತೂಲ್ ತೋರಿಸಿ ಬಂಗಾರ ಹಾಗೂ ಹಣವನ್ನು ನೀಡುವಂತೆ ಕೇಳಿದಾಗ ಕಛೇರಿಯಲ್ಲಿದ್ದ ಮಹಿಳಾ ಸಿಬ್ಬಂದಿ ಸೈರನ್ ಬಟನ್ ಒತ್ತಿದ್ದು, ಸೈರನ್ ಶಬ್ದ ಕೇಳಿ ಆರೋಪಿಗಳು ಅವರು ಬಂದಿದ್ದ ನಂಬರ್ ಅಳವಡಿಸದ ಕಡು ನೀಲಿ ಬಣ್ಣದ ಮಾರುತಿ ಒಮ್ನಿ ಕಾರಿನಲ್ಲಿ ಸುರತ್ಕಲ್ ಕಡೆಗೆ ಪರಾರಿಯಾಗಿದ್ದರು. ಈ ಬಗ್ಗೆ ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಕಛೇರಿಯ ಶ್ರೀ ಕೆ. ಮನೋಹರ ಶೆಟ್ಟಿ ಯವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಾಡುಹಗಲೇ ಜನನಿಬಿಡ ಸ್ಥಳದಲ್ಲಿ ನಡೆದ ಘಟನೆಯಿಂದ ಸಾರ್ವಜನಿಕರು ಹಾಗೂ ಹಣಕಾಸಿನ ಸಂಸ್ಥೆಯವರು ಭಯಭೀತರಾಗಿದ್ದರು.

ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಹಾಗೂ ಆರೋಪಿಗಳು ಪರಾರಿಯಾದ ಕಡುನೀಲಿ ಬಣ್ಣದ ಮಾರುತಿ ಒಮ್ನಿ ಕಾರಿನ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಈ ಕಾರಿನ ಬಗ್ಗೆ ವಿವಿಧಡೆ ಪರಿಶೀಲನೆ ನಡೆಸಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ ಸಮಯ ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.

ಆರೋಪಿಗಳ ಪೈಕಿ ಅನಿಲ್ ಕುಮಾರ್ ನು ಈ ಹಿಂದೆ ಮಂಗಳೂರು ನಗರ ಹಾಗೂ ವಿವಿಧ ಕಡೆಗಳಲ್ಲಿ ಗೃಹಪಯೋಗಿ ವಸ್ತುಗಳನ್ನು ಲೈನ್ ಸೇಲ್ ಮಾಡುತ್ತಿದ್ದನು. ಉಳಿದ ಆರೋಪಿಗಳು ಈ ಹಿಂದೆ ಮಂಗಳೂರಿನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದು, ಅನಿಲ್ ಕುಮಾರ್ ನ ಸ್ನೇಹಿತರಾಗಿದ್ದರು. ಇವರೆಲ್ಲರಿಗೂ ಒಮ್ಮೆಲೆ ಶ್ರೀಮಂತರಾಗಬೇಕೆಂಬ ಅಸೆಯಿಂದ ಯಾವುದಾದರೂ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳನ್ನು ದರೋಡೆ ಮಾಡುವ ಸಂಚು ರೂಪಿಸಿ ಮುತ್ತೂಟ್ ಮಿನಿ ಹಣಕಾಸು ಸಂಸ್ಥೆಗೆ ಒಳನುಗ್ಗಿ ಯತ್ನ ನಡೆಸಿರುವುದಾಗಿದೆ. ಆರೋಪಿಗಳು ಈ ಕೃತ್ಯ ನಡೆಸಲು ಉಪಯೋಗಿಸಿದ 3 ಏರ್ ಗನ್, 2 ಚೂರಿ, 3 ಮೊಬೈಲ್ ಫೋನ್, ಹಗ್ಗ, ಗಮ್ ಟೇಪ್, ಕೃತ್ಯ ನಡೆಸಿದ ನಂತರ ಪರಾರಿಯಾದ ಮಾರುತಿ ಒಮ್ನಿ ಕಾರು ಹೀಗೆ ಒಟ್ಟು ರೂ. 3,40,000/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿರುತ್ತಾರೆ.

ಪೊಲೀಸ್ ಕಮೀಷನರ್ ಶ್ರೀ.ಎಸ್.ಮುರುಗನ್, ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ -ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಡಾ: ಸಂಜೀವ್ ಎಂ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

Leave a Reply